ಗುರುವಾರ, ಆಗಸ್ಟ್ 29, 2013

ಜಗದ ಕಣ್ಣು 'ತೆರೆಸಿದ'
ಬುದ್ಧನದೊಂದು
'ಕಣ್ತೆರೆದಿರುವ' ಚಿತ್ರ
ಖರೀದಿಸಬೇಕು

-ಕೆಂಚನೂರಿನವ

ಮಕ್ಕಳ ವಿಷಯದಲ್ಲಿ
ಎಲ್ಲಾ ಅಪ್ಪಂದಿರೂ
ದೃತರಾಷ್ಟರೇ
*
ಹೊರಗಿನ ಸದ್ದಿಗೆ
ಎಚ್ಚರಗೊಳ್ಳದವನು ಧ್ಯಾನಿ
ಒಳಗಿನ ಸದ್ದಿಗೆ
ಎಚ್ಚರಗೊಳ್ಳುವವನು ಜ್ಞಾನಿ
*
ಮಿಣುಕು ಹುಳುವಿಗೆ
ಅಮಾವಾಸ್ಯೆಯಲ್ಲೇ
ಹೆಚ್ಚು ಹೊಳಪು
ಸುಮ್ಮನೇ ಹುಣ್ಣಿಮೆ
ಹೊಗಳದಿರಿ

-ಕೆಂಚನೂರಿನವ

ಹಸಿರು ಬೇಲಿಯ
ನೀಲಿ ಹೂ ಬಾಡುವಾಗ
ಕೆಂಪು ಸಂಜೆಯು
ಕಪ್ಪು ಇರುಳಾಗುವ
ಸಮಯ ಸಮೀಪಿಸಿತ್ತು

-ಕೆಂಚನೂರಿನವ

ಗೆಳತಿ
ನನ್ನ-ನಿನ್ನ
ಸಂಬಂಧವೇನೆಂದು
ನನ್ನ ನಡೆ
ನಿನಗೆ ಹೇಳದಿದ್ದರೆ
ಪ್ರೀತಿಯ ಮಾತುಗಳು
ಬರಿಯ ಒಣ ಸದ್ದಲ್ಲವೆ?

-ಕೆಂಚನೂರಿನವ

ಎಲೆಗಳ ತುದಿಯಲ್ಲಿ
ವಿದಾಯದ ಹನಿಗಳು;
ತೊಟ್ಟು ಕಳಚುವ
ನೋವು ಸಹಿಸಲೇ ಬೇಕು
ಮರ
ಹೊಸಚಿಗುರು ಬೇಕೆಂದರೆ

-ಕೆಂಚನೂರಿನವ

ಮಂಗಳವಾರ, ಆಗಸ್ಟ್ 27, 2013

ಕರುಣವಿರಲಿ ಗೆಳತಿ ನಿನ್ನ ಸೋಕಿದ
ತಂಗಾಳಿಯ ಇತ್ತ ಕಳಿಸುವಾಗ

ಇಲ್ಲಿರುವಾಗ ಒಬ್ಬಂಟಿಯಾಗಿ ನಾನು
ಭರಿಸಲಾರೆನು ಅದರ ತಂಪು

ಕರುಣವಿರಲಿ ಗೆಳತಿ ನೀನು ಮುಡಿದ
ಹೂವ ಗಂಧ ಇತ್ತ ಕಳಿಸುವಾಗ

ಇಲ್ಲಿರಲು ಒಬ್ಬಂಟಿಯಲ್ಲವೇನೆ ನಾನು
ಭರಿಸಲಾರೆನು ಅದರ ಘಮವ

ಕರುಣವಿರಲಿ ಗೆಳತಿ ನಿನ್ನ ಬಳೆಗಳು
ಹೊರಡಿಸಿದ ಸದ್ದು ಇತ್ತ ಕಳಿಸುವಾಗ

ನನ್ನ ಕಿವಿಗಳಿ ಭರಿಸಲಾರವು
ನಿನ್ನ ಜೊತೆಯಿಲ್ಲದ ಬರಿಯ ಸದ್ದನು

ಕರುಣವಿರಲಿ ಒಬ್ಬಳೇ ನಡೆವಾಗ
ಅಲ್ಲಿ ಏಳುವ ಹೂಕಂಪನಗಳು

ನನ್ನೆದೆಯ ತಲುಪಿದರೆ
ಒಬ್ಬನೇ ಭರಿಸಲಾರೆನು ಗೆಳತಿ

ಕರುಣವಿರಲಿ ಗೆಳತಿ ಸರಿರಾತ್ರಿಯಲಿ
ನೀನು ಮಗ್ಗಲು ಬದಲಿಸುವಾಗ

ಒಬ್ಬನೇ ಹೇಗೆ ಭರಿಸಲಿ ಹೇಳು
ಅದು ಕೊಡುವ ರೋಮಾಂಚನವ

-ಕೆಂಚನೂರಿನವ

ಹೀಗೆ ಸೆಳೆಯದಿರು ಬಯಕೆಗಳ
ನಿನ್ನ ನಗೆಯಲೆಗಳಲ್ಲಿ ತೇಲಿಬಿಟ್ಟು
ಬಂದಿದ್ದೇನೆ ನಡುಗಡಲಿನಲಿ
ನನ್ನ ಹಡಗನ್ನು ತೇಲಲುಬಿಟ್ಟು

ಹೊಳೆವ ಕಣ್ಣಲಿ ಹೀಗೆ ಸೆಳೆಯದಿರು
ಹೋಗಬೇಕಿದೆ ಹಡಗು ಬಹುದೂರ
ತಟವ ಸೇರದಿರಲಿ ಈ ಹಡಗು
ಸೆಳೆವ ನಿನ್ನ ಕಣ್ಣುಗಳ ಕಂಡು

ಹಾರಿಸಿ ಬಿಡದಿರು ನಿನ್ನ ಸೆರಗು
ಹಾಯಿಯಿಲ್ಲದ ಹಡಗು ನನ್ನದು
ಸೆಳೆಯದಿರು ತೇಲಿಬಂದರೆ ನಿನ್ನೆಡೆಗೆ
ನನ್ನ ದಾರಿಯಿದು ಬೇರೆಯಿದೆ

ಇಷಾರೆಗಳ ಮಾಡಿ ಕರೆಯದಿರು
ದಿಕ್ಕು ತಪ್ಪದಿರಲಿ ದಿಕ್ಕಿಲ್ಲದ ಹಡಗು
ನನ್ನ ದಾರಿಯಿದು ಬೇರೆಯಿದೆ
ದಿಕ್ಕು ತಪ್ಪಿದವನು ನಾನು

ದಡ ಸೇರಲೆಂದು ಕಡಲಿಗಿಳಿದಿಲ್ಲ
ತೇಲುವ ಬಲವೂ ಉಳಿದಿಲ್ಲ
ಮುಳುಗಿದರಿದು ಮುಳುಗಲಿ ಬಿಡು
ಸೆಳೆಯದಿರು,ನನ್ನ ದಾರಿಯಿದು ಬೇರೆ

-ಕೆಂಚನೂರಿನವ

ನಾನು ದ್ವೇಷಿಸುತ್ತೇನೆ
ನಿನ್ನ ಜೊತೆಯಿರದ ಸಂಜೆಯಲ್ಲಿ
ನನ್ನ ಸುತ್ತಲೂ ತಣ್ಣಗೆ ಸುಳಿವ
ತಂಗಾಳಿಯನ್ನು

ನಾನು ದ್ವೇಷಿಸಿತ್ತೇನೆ
ನೀನು ಜೊತೆಯಿರದ ಘಳಿಗೆಯಲ್ಲಿ ಮತ್ತೆ
ಮತ್ತೆ ಕಾಲಿಗೆ ಎಡತಾಕುವ
ಈ ಕಡಲ ಅಲೆಗಳನ್ನು

ನಾನು ದ್ವೇಷಿಸುತ್ತೇನೆ
ನೀನಿಲ್ಲದ ಸಮಯದಲ್ಲಿ
ನಿನ್ನ ಅಂಗೈಯ ಬಿಸುಪು ನೆನಪಿಸುವ
ಈ ಎಳೆಬಿಸಿಲನ್ನು

ನಾನು ದ್ವೇಷಿಸುತ್ತೇನೆ
ನಿನ್ನ ನೆನಪನ್ನು ಮತ್ತೆ ಮರಳಿಸುವ
ಸಂಜೆಯ ಕೆಂಪುಸೂರ್ಯ
-ಮತ್ತು ಕಡಲ ತೀರವನ್ನು

ನಾನು ದ್ವೇಷಿಸುತ್ತೇನೆ
ನೀ ನನ್ನ ಬಿಟ್ಟುಹೋದ ಮೇಲೂ
ನಿನ್ನನ್ನೇ ಎಡೆಬಿಡದೆ ಧೇನಿಸುವ
ನನ್ನದೇ ಹೃದಯವನ್ನು

-ಕೆಂಚನೂರಿನವ

ಇರುಳು ಪೂರ್ತಿ
ಖುಷಿಯ ಖಜಾನೆ
ಲೂಟಿ ಮಾಡಿ
ಹೊತ್ತು ತಂದ ಮೂಟೆಗಳು
ಬೆಳಗೆದ್ದು ನೋಡಿದರೆ
ಪಶ್ಚತ್ತಾಪವಾಗಿ ಬದಲಾಗಿದ್ದವು

-ಕೆಂಚನೂರಿನವ

ಅಂದು ನೀನು ಬಿಟ್ಟು ಹೋಗುವಾಗ
ಇದ್ದ ಮುಖಭಾವ
ನಾನು ಬದಲಿಸಲೇ ಇಲ್ಲ

ಈ ತಿರುಗುವ ಭೂಮಿ ನಮ್ಮನ್ನು ಮತ್ತೆ
ಮುಖಾಮುಖಿಯಾಗಿಸಿದರೆ
ನಿನಗೆ ನನ್ನ
ಗುರುತು ಹತ್ತದೇ ಹೋದೀತೆಂಬ
ಭಯದಲ್ಲಿ

-ಕೆಂಚನೂರಿನವ

ಮಧುಶಾಲೆ ಹಗಲಿರುಳು ತೆರೆದಿಟ್ಟಿರಬೇಕಾದ ಜಾಗ
ಮಧುಶಾಲೆ ಭಗ್ನ ಹೃದಯಗಳು ತಣಿಯುವ
ಜಾಗ

ಪ್ರೀತಿಯನು ಕೊಟ್ಟವರು ಕೊಟ್ಟ
ನೂರು ಬಗೆಯ ನೋವಿಗೆ
ಇದೊಂದೇ ಇಲಾಜು ಕೊಡುವ ಜಾಗ

ಸಿಹಿಯ ಮಾತಾಡಿ ಕಹಿಯುಣಿಸಿ ಹೋದವರ
ನೆನಪ
ಇಷ್ಟಿಷ್ಟೇ ಮರೆಸಿ
ನೆನಪಾಗಿಸುವುದು ಇದೊಂದೆ ಜಾಗ

ಜಗದ ನೋವನ್ನೆಲ್ಲ ತನ್ನ ಜೋಳಿಗೆಗೆ
ತುಂಬಿಕೊಂಡ ಫಕೀರ ನೋವ ತನ್ನ
ಮರೆಯಲಿರುವುದು ಇದೊಂದೇ ಜಾಗ

ತನ್ನೆದೆಯಲ್ಲಿ
ನೂರು ನೋವಿಟ್ಟುಕೊಂಡು
ನಮ್ಮ ನೋವಿನ ಆರೈಕೆ ಮಾಡುವ
ಸಾಕಿಯಿರುವ ಪವಿತ್ರ ಜಾಗ

-ಕೆಂಚನೂರಿನವ

http://inchara-shankara.blogspot.com

ಸೋಮವಾರ, ಆಗಸ್ಟ್ 26, 2013

ಒಂದು ಕಲ್ಲಿಗೆ ನಿನ್ನನ್ನು
ಆರೋಪಿಸಿ ಪೂಜಿಸುವ ಜನರಿಗೆ
ನೀನು ಕಲ್ಲಿನಂತ ಮನಸ್ಸು
ಕೊಟ್ಟಿದ್ದು ಸರಿಯಾಗಿಯೇ ಇದೆ

-ಕೆಂಚನೂರಿನವ

ದೇವತೆಯಂತ ನೀನು
ನನಗಾಗಿ ಮನುಷ್ಯಳಾದದ್ದನ್ನು
ನಂಬುವುದಿಲ್ಲ ಇಲ್ಲಿನ ಜನ,
ಮನುಷ್ಯನನ್ನೇ ದೇವರ ಮಾಡಿದ
ಇತಿಹಾಸವುಳ್ಳ ಈ ಲೋಕ
ನಂಬಿತಾದರೂ ಹೇಗೆ ಹೇಳು ?

- ಕೆಂಚನೂರಿನವ

ಹೂವರಳಿಸುವುದೊಂದನ್ನೆ ಕಲಿತಿದ್ದ
ಬಳ್ಳಿ
ತನ್ನ ಮೂಲ ಕೆದಕಿ ಕುಹಕವಾಡಿದವರಿಗೂ
ಏನೂ ಬಯಸದೆ ಬಳಿ ಬಂದವರಿಗೂ
ಸಮಾನವಾಗಿ ಪರಿಮಳ ಹಂಚುತ್ತಿತ್ತು

ಏನೂ ಬಯಸದೆ ಬಂದವರು ಖುಷಿಯ ಜೊತೆ
ಮರಳಿದರೆ
ಕುಹಕಿಗಳು ಎದೆಯಲ್ಲಿ
ಇನ್ನಷ್ಟು ಬೆಂಕಿಯೊಂದಿಗೆ ಮರಳಿದರು

- ಕೆಂಚನೂರಿನವ

ಶುಕ್ರವಾರ, ಆಗಸ್ಟ್ 23, 2013

ಗರಿ ಕಳೆದುಕೊಂಡ ನವಿಲು
ಕಾಳು ಹೆಕ್ಕುವ ಕಾಲ;
ಅಪ್ಪನ ಹಳೇ ಅಂಗಿ
ಬೆಚ್ಚಪ್ಪನಿಗೆ ಹೊಸದು

-ಕೆಂಚನೂರಿನವ

ವಿಮರ್ಶೆ
ಹೊಸಬರು ಒಳ್ಳೆಯದು ಬರೆದರೂ
ಅದರಲ್ಲಿನ ಕೆಡುಕು ಹುಡುಕು
ಖ್ಯಾತರು ಕೆಟ್ಟದಾಗಿ ಬರೆದರೂ
ಅದರಲ್ಲಿ ಒಳಿತು ಹುಡುಕು

-ಕೆಂಚನೂರಿನವ

ಗುರುವಾರ, ಆಗಸ್ಟ್ 22, 2013

ರಾವಣನಿಗೆ
ಹತ್ತು ತಲೆ
ಇಪ್ಪತ್ತು ಕೈ
ಇತ್ಯಾದಿ ಇರದೆ ಹೋಗಿದ್ದರೆ
ರಾಮನ ಕಥೆಗೆ
ಇಷ್ಟು ರೋಚಕತೆ ಇರುತ್ತಿರಲಿಲ್ಲ

-ಸೇವಂತಿ

ರಕ್ಕಸನಿಗೆ ಸಿಕ್ಕ
ವರದಂತವಳು ನೀನು
ನನ್ನ ಪಾಲಿಗೆ ನೀನು
ಕೊನೆಗಾಗಿದ್ದು ದುರಂತವೇ.
*
ಅಕ್ಟೋಬರ್ ನ ಆಲಸಿ ಸೂರ್ಯ
ಎದ್ದೆದ್ದು ಮಲಗುತ್ತಿದ್ದಾನೆ;
ಇನ್ನು ಜೇಡರಬಲೆಯ ತುಂಬಾ
ಮುತ್ತು ಹೊಳೆಯಲಿದೆ

-ಕೆಂಚನೂರಿನವ

ಬುಧವಾರ, ಆಗಸ್ಟ್ 21, 2013

ಈಗೀಗ ಬೆಳಕೆಂದರೇನೇ ಭಯ
ನೀನಿಲ್ಲದ ಲೋಕವನ್ನು ಬೆಳಕಲ್ಲಿ
ನೋಡಲು ಕಣ್ಣುಗಳೊಪ್ಪುತ್ತಿಲ್ಲ

-ಕೆಂಚನೂರಿನವ

ತೆರೆದ ಕಣ್ಣಲ್ಲೇ ಕಾಣುತ್ತಿದ್ದೇನೆ
ಹಗಲಿರುಳು ನಿನ್ನ ಕನಸು;
ರೆಪ್ಪೆಹಚ್ಚಲು ಬಿಡದೆ ಕಾಡುವ
ಜೀವಂತ ಕನಸು ನೀನು

-ಕೆಂಚನೂರಿನವ

ನಿನ್ನ ಬಗೆ-ಬಗೆಯ ಚಿತ್ರ
ಕೆತ್ತಿ ನಿಲ್ಲಿಸಿದ ನನಗೆ
ನೀನು ಎಂದೂ ಬದಲಾಗದ ಸತ್ಯ
ಎಂಬುದು ಅರಿವಾದ ದಿನ
ನನ್ನ ನಿರ್ವಾಣ

-ಕೆಂಚನೂರಿನವ

ಬಣ್ಣವಿಲ್ಲದ ಪ್ರೀತಿ ಕೊಟ್ಟ
ನಿನ್ನ ಬಣ್ಣದ ಚಿತ್ರ
ಬರೆಯಹೊರಟ ನಾನು
ಅಮಾಯಕನೊ,ಹುಂಬನೊ?

-ಕೆಂಚನೂರಿನವ

ಮಂಗಳವಾರ, ಆಗಸ್ಟ್ 20, 2013

ನಿನ್ನ ಜೊತೆಯಿರದ ನನಗೆ
ಎಲ್ಲಾ ಹಬ್ಬಗಳು ಕೊಟ್ಟಿದ್ದು ಒಂದೇ
ಅದು ಏಕಾಂತ
ನಾನೂ ಅಷ್ಟೇ
ಆ ಏಕಾಂತಗಳಿಗೆ ಬೇರೆ -ಬೇರೆ
ಹೆಸರಿಟ್ಟು ಆಚರಿಸಿದೆ

-ಕೆಂಚನೂರಿನವ

ಈ ಮೊದಲು
ನಾನು ಕಲ್ಲಾಗಿದ್ದೆನೆನ್ನುವ ವಿಚಾರ
ನೀನು ನನ್ನ ಸ್ಪರ್ಶಿಸಿದ ನಂತರ ತಿಳಿಯಿತು

-ಕೆಂಚನೂರಿನವ

ಸೋಮವಾರ, ಆಗಸ್ಟ್ 19, 2013

ಸುಮ್ಮನೇ ಬೀಗಿದೆ ಕವಿಯಾದೆನೆಂದು,
ನಿನ್ನ ಇನಿದನಿಗೆ ಕಿವಿಯಾಗದೆ
ಬರೆದ ಕವಿತೆ ಶಬ್ದಗಳ ಸಾಲಾಗಿತ್ತು;
ನೀನು ಪದವಿರದ ಕವಿತೆ

-ಕೆಂಚನೂರಿನವ

ಕೆಂಪು ಮಣ್ಣಿನ ಮೇಲೆ
ಬಿಳಿಯ ಪಾರಿಜಾತ
ಕಂಪಿಸುವ ಕೈಯಿಂದ
ಹೆಕ್ಕಿ ತಂದಿರುವೆನು
ಬಾಡುವ ಮುನ್ನವೇ
ಒಪ್ಪಿಸಿಕೊ ಗೆಳತಿ

ಕೆಂಪು ಅಂಗೈಯ ನಡುವೆ
ಕಂಪ ಬೀರುವ ಹೂವು
ಇನ್ನಾರಿಗೊಪ್ಪೀತು ಹೇಳು
ಬಾಡಿಹೋಗುವ ಮೊದಲೇ
ಮಾಲೆ ಮಾಡಿಕೊ ಗೆಳತಿ

ಪಾರಿಜಾತವ ಮರುಳು
ಮಾಡಿಹುದು ನಿನ್ನ ಕೇಶರಾಶಿ
ಒಪ್ಪವಾಗಿಟ್ಟಂತೆ ಕಪ್ಪು
ಮೋಡದ ರಾಶಿ
ಮುಡಿದುಕೊ ಗೆಳತಿ
ಬಾಡುವ ಮೊದಲೇ

-ಕೆಂಚನೂರಿನವ

ಶನಿವಾರ, ಆಗಸ್ಟ್ 17, 2013

ಒದ್ದೆ ರೆಕ್ಕೆಯ ಹಕ್ಕಿ
ಕತ್ತಲಲ್ಲಿ ಕಾಯುತ್ತಿದೆ
ಸೂರ್ಯೋದಯಕ್ಕೆ;

ಕೆಲಸವಿಲ್ಲದ ಕವಿಗೆ
ಬೆಳದಿಂಗಳ ಧ್ಯಾನ

-ಕೆಂಚನೂರಿನವ

ನಮ್ಮೂರ ತಿಳಿಗೊಳದಲ್ಲಿ
ಮೊಗವ ತೊಳೆದು ನೋಡು
ಬೆಳ್ಳಿ ಚಂದ್ರನೆ;
ನೀನೂ ಹೊಳೆಯಬಹುದು
ಕಲೆಯಿಲ್ಲದ ಹೊಳೆವ
ಇವಳ ಮೊಗದಂತೆ

-ಕೆಂಚನೂರಿನವ

ನಿನ್ನೆ ಸರಿರಾತ್ರಿ
ನಮ್ಮೂರಿನ ಪುಟ್ಟ ಕೊಳಕ್ಕೆ
ಚಂದ್ರ ಎಡವಿಬಿದ್ದಿದ್ದ
ಹಾಗೋ ಹೀಗೋ ಮಾಡಿ
ಜಾವದಲ್ಲಿ ಎದ್ದುಹೋದ ,
ಇಂದು ಬೆಳಿಗ್ಗೆ
ಅದೇ ಕೊಳದಲ್ಲಿ ಮಿಂದು
ಇವಳು ಬೆಳದಿಂಗಳಂತೆ
ಹೊಳೆಯುತ್ತಿದ್ದಾಳೆ

-ಕೆಂಚನೂರಿನವ

ಗುರುವಾರ, ಆಗಸ್ಟ್ 15, 2013

ಎಲ್ಲದಕೂ ಕತ್ತು ನೀಳ ಚಾಚಿ
ಇನ್ನೊಬ್ಬರತ್ತ ನೋಡುವ ನಾವು
ಸ್ವತಂತ್ರರಲ್ಲ

ನಮ್ಮ ನಾವು ನಿಭಾಯಿಸಿಕೊಳ್ಳಲಾಗದೆ
ನೂರು ಕಟ್ಟಳೆಗಳಿಗೊಳಗಾದ ನಾವು
ಸ್ವತಂತ್ರರಲ್ಲ

ಯಾರೋ ಕಂಡ ಕನಸಿಗೆ
ಹಗಲಿರುಳು ದುಡಿವ ನಾವು
ಸ್ವತಂತ್ರರಲ್ಲ

ಊರ ಕೋಟೆ ಯಪತಾಕೆ ಬದಲಿಸಿ
ಪಥ ಬದಲಿಸಲು ಮರೆತ ನಾವು
ಸ್ವತಂತ್ರರಲ್ಲ

ಕಟ್ಟಿದ್ದ ಹಗ್ಗವಿಲ್ಲವಾದರೂ
ಬೇಲಿಯೊಳಗೆ ಮೇಯುತ್ತಿರುವ ನಾವು
ಸ್ವತಂತ್ರರಲ್ಲ

ನಮ್ಮ ಸ್ವಾತಂತ್ರ್ಯ
ನಾವೇ ಘೋಷಿಸಿಕೊಳ್ಳಲಾಗದ
ನಾವು
ಸ್ವತಂತ್ರರಲ್ಲ

-ಕೆಂಚನೂರಿನವ

ಮಂಗಳವಾರ, ಆಗಸ್ಟ್ 13, 2013

ನಿನ್ನ ಬೇಡಲೆಂದು
ದೇವರ ಬಳಿ ಹೋಗಿದ್ದೆ
ದೇವರೂ  ನಿನ್ನ ಧ್ಯಾನದಲ್ಲಿದ್ದ
ಬರಿಗೈಯಲ್ಲಿ ಮರಳಿದೆ

-ಕೆಂಚನೂರಿನವ

ಸೋಮವಾರ, ಆಗಸ್ಟ್ 12, 2013

ನಶೆಯಲ್ಲಿ ಹೃದಯ ಜಾರೀತು ನಿನ್ನ ನೀ ಸಂಭಾಳಿಸು
ನಿಶೆಯಲ್ಲಿ ಹೆಜ್ಜೆ ಎಡವೀತು ನಿನ್ನ ನೀ ಸಂಭಾಳಿಸು

ಇಲ್ಲಿ ನೋವಿನಲ್ಲಳುವರ ಕಂಡು ನಗುವವರೇ ಹೆಚ್ಚು
ಕಣ್ಣೀರು ಕೆನ್ನೆಗಿಳಿಯುವ ಮೊದಲೇ ಸಂಭಾಳಿಸು

ಇಲ್ಲಿ ಮೋಸಕ್ಕೆ ಪ್ರೇಮದ ಹೆಸರಿಡುವವರೆ ಹೆಚ್ಚು
ಎದೆಯ ಮಾತು ತುಟಿಗೆ ಬರುವ ಮೊದಲೇ ಸಂಭಾಳಿಸು

ಇಲ್ಲಿ ಇರಿಯಲೆಂದೇ ತೆಕ್ಕೆ ಬೀಳುವವರು ಹೆಚ್ಚು
ತೋಳು ತೆರೆಯುವ ಮೊದಲೇ ನಿನ್ನ ನೀ ಸಂಭಾಳಿಸು

ಇದು ಹಾದಿ ತಪ್ಪಿದವನ ಹಾಡು ತಪ್ಪೇ ಹೆಚ್ಚು
ಲಯ ತಪ್ಪುವ ಮೊದಲೇ ನೀ ನನ್ನ ಸಂಭಾಳಿಸು

-ಕೆಂಚನೂರಿನವ

ಹಗಲಿರುಳು ತಪಗೈದ ಮಾಂತ್ರಿಕ
ನಾನು
ಪಡೆಯುವ ಮೊದಲೇ ಕಳೆದುಹೋದ ನಿಧಿ
ನೀನು

ಕತ್ತಲೆ ಬೀದಿಯಲ್ಲಿ ಹೊಳೆವ
ಕಂದೀಲು ನೀನು
ದೀಪ ಹಚ್ಚುವ
ಮೊದಲೇ ಕುರುಡಾದವ ನಾನು

ದೂರದಿಂದಲೇ ಕರೆವ ದ್ವೀಪದಂತೆ
ನೀನು
ಕಡಲಿಗಿಳಿವ ಮೊದಲೇ ಮುಳುಗಿದ
ಹಡಗು ನಾನು

ಯಾರೂ ತಲುಪಬಯಸುವ ಗಮ್ಯ ನೀನು
ಹೆಜ್ಜೆಯಿಡುವ ಮೊದಲೇ ಎಡವಿದವ
ನಾನು

ಹೇಗೆ ತಾನೇ ತಲುಪಲಿ ನಿನ್ನ
ಬಂದು ಸೇರಬಾರದೇ ನನ್ನ

-ಕೆಂಚನೂರಿನವ

ನನ್ನ ವಿರಹದುರಿಗೆ
ತಂಪು ಸುರಿಯಲಾಗದೆ
ಈದ್'ನ ಚಂದ್ರ
ಮಿನಾರುಗಳ ಹಿಂದೆ
ಮುಖ ಮರೆಸಿಕೊಂ�ಡ
*
ನೀನು ನಿನ್ನ ಅಂಗೈಗೆ
ಹಚ್ಚಿದ ಮೆಹಂದಿಗೆ
ಇರುಳು ಪೂರ್ತಿ
ನಿದ್ದೆ ಬರದ ನನ್ನ ಕಣ್ಣ
ಕೆಂಪು ಬಣ್ಣ ಬರಲೆಂಬುದು
ನನ್ನ ಹಾರೈಕೆ
**
ನೀನಿಲ್ಲದ ಈದ್'ನ
ಖೀರು ವಿಷದಷ್ಟೇ ಕಹಿಯಿತ್ತು
ಪ್ರಾರ್ಥನೆಯಲ್ಲೂ ನಾನು
ನಿನ್ನನ್ನೇ ಧೇನಿಸಿದೆ ನಾನು
***
-ಕೆಂಚನೂರಿನವ

ಭಾನುವಾರ, ಆಗಸ್ಟ್ 11, 2013

ಇಲ್ಲಿನ ಪಾಪ ನಿವೇದನೆಯ ರೊಟ್ಟಿಗಳು
ಪ್ರಾಯಶ್ಚಿತದ ಬೆಂಕಿಯಲ್ಲಿ ಸುಟ್ಟಿಲ್ಲ
ಹದವಾದೀತಾದರೂ ಹೇಗೆ ?

ಇಲ್ಲಿನ ಇಮಾರತುಗಳಿಗೆ
ಮೆಹನತ್ತಿನ ಲೇಪವೇ ಇಲ್ಲ
ದೌಲತ್ತುಗಳಿಗೆ
ಹೊಳಪು ಬಂದೀತಾದರೂ ಹೇಗೆ ?

ಇಲ್ಲಿನ ಸಂಬಂಧಗಳಿಗೆ
ಸಹನೆಯ ಲವಲೇಶವೂ ಗೊತ್ತಿಲ್ಲ
ಬಾಳಿಕೆ ಬಂದೀತಾದರೂ ಹೇಗೆ ?

-ಕೆಂಚನೂರಿನವ

ಶನಿವಾರ, ಆಗಸ್ಟ್ 10, 2013

ಮಧುಶಾಲೆಯೇ ಸರಿಯಾದ ಜಾಗ
ವಿಷಾದದಲ್ಲೇ ಅದ್ದಿ ತೆಗೆದಂತಿರುವ
ಸಂಜೆಯನು ಕೊಲ್ಲಲು

ಮಧುಶಾಲೆಯೇ ಸರಿಯಾದ ಜಾಗ
ಎಡೆಬಿಡದೆ ಕಾಡುವ ನಿನ್ನ ನೆನಪುಗಳ
ಕೊಲ್ಲಲು

ಮಧುಶಾಲೆಯೇ ಸರಿಯಾದ ಜಾಗ
ನಿನ್ನ ನೆನಪಿನಂತೆಯೇ ಸುಡುವ
ಹಗಲನ್ನು ಕೊಲ್ಲಲು

ಮಧುಶಾಲೆಯೇ ಸರಿಯಾದ ಜಾಗ
ನೀನು ಬಿಟ್ಟುಹೋದ ಈ
ಹೃದಯವನ್ನು ಇಷ್ಟಿಷ್ಟೇ ಕೊಲ್ಲಲು

ಮಧುಶಾಲೆಯೇ ಸರಿಯಾದ ಜಾಗ
ನೀ ಮತ್ತೆ ಬರುವೆಯೆಂಬ ನಂಬಿಕೆಯ
ಕೊಲ್ಲಲು

-ಕೆಂಚನೂರಿನವ

ಬಾ ಗೆಳೆಯ ಇಲ್ಲೇ ಕೂರು ಜಗುಲಿಯ
ಮೇಲೆ
ಯಾಕೆಂದರೆ ಬೇಧಭಾವವಿಲ್ಲ ಇಲ್ಲಿ
ಇದು ಮಧುಶಾಲೆ

ನಿನಗೂ ನನಗೂ ಇಲ್ಲಿ ಒಂದೇ ರೀತಿಯ
ಮಧುಬಟ್ಟಲು
ಯಾಕೆಂದರೆ ಬೇಧಭಾವವಿಲ್ಲ ಇಲ್ಲಿ
ಇದು ಮಧುಶಾಲೆ

ನನ್ನ ನೋವಿಗೂ ಮದ್ದಿದೆ ನಿನ್ನ
ನೋವಿಗೂ
ಯಾಕೆಂದರೆ ಬೇಧಭಾವವಿಲ್ಲ ಇಲ್ಲಿ
ಇದು ಮಧುಶಾಲೆ

ಎಲ್ಲರನ್ನೂ ಸಮಾನವಾಗಿ
ಪ್ರೀತಿಸುತ್ತಾಳಿಲ್ಲಿ ಸಾಕಿ
ಯಾಕೆಂದರೆ ಬೇಧಭಾವವಿಲ್ಲ ಇಲ್ಲಿ
ಇದು ಮಧುಶಾಲೆ

ಎಲ್ಲರೂ ಉನ್ಮತ್ತರೇ ಇಲ್ಲಿ
ನೀನೂ ಒಂದು ಕವಿತೆ ಬರೆ
ಯಾಕೆಂದರೆ ಬೇಧಭಾವವಿಲ್ಲ ಇಲ್ಲಿ
ಇದು ಮಧುಶಾಲೆ

-ಕೆಂಚನೂರಿನವ

ಸವೆದ ಚಪ್ಪಲಿ
ಮಾಸಿದ ಅಂಗಿ
ಅಂಟಂಟು ಕೂದಲು
ಕೆಕ್ಕರಿಸುವ ಕಣ್ಣು
ನೀರು ಕಾಣದ ಮೈ;
ಆದರೂ ಆಕರ್ಷಣೀಯ,
ಫಕೀರ ಸೆಳೆಯುವುದು
ಅವನ ಕಣ್ಣಿಂದ
ಹುಡುಗಾ....
ನಿನ್ನ ಕಣ್ಣಲ್ಲಿ ಪ್ರಾಮಾಣಿಕತೆ
ಹುಡುಕಿ ಸೋಲುತ್ತೇನೆ ನಾನು

-ಸೇವಂತಿ

ಜಾತ್ರೆಯಲ್ಲಿ ದೇವರ ಹೊತ್ತು
ಕುಣಿದವರು ಕಂಡಿಲ್ಲ
ಮರುದಿನ ದೇವರ ಕಾಡುವ
ಒಂಟಿತನ
ಹುಡುಗಾ...
ಮದುವೆಯ ಮರುದಿನ
ಕಾಡುವ ಒಂಟಿತನದ ಗಾಯಕ್ಕೆ
ನಿನ್ನ ನೆನಪಿನ ಮುಲಾಮು ಹಚ್ಚಿದೆ
ಪಾಪಪ್ರಜ್ಞೆ ಬೆಂಕಿಯಂತೆ ಸುಟ್ಟಿತು

-ಸೇವಂತ

ಶುಕ್ರವಾರ, ಆಗಸ್ಟ್ 9, 2013

ಮೆರವಣಿಗೆಯ ಹಿಂದೆ
ಹೋಗುವವನಲ್ಲ ನಾ!;
ಎಡವಟ್ಟನೆಂದರೂ ಸರಿಯೇ
ನನ್ನ ದಾರಿ ಬೇರೆಯೇ !

-ಕೆಂಚನೂರಿನವ

ಹಕ್ಕಿ
ಹಿಡಿದಿಟ್ಟೆ
ಕೂಗಿಕೊಂಡಿತು
ಹಾರಿಬಿಟ್ಟೆ
ಹಾಡಿಕೊಂಡಿತು

-ಕೆಂಚನೂರಿನವ

ಸೋಮವಾರ, ಆಗಸ್ಟ್ 5, 2013

ದಾರಿಯುದ್ದಕ್ಕೂ ನೆರಳಿರಲಿಲ್ಲ್ಲ
ಮರದಡಿ ಬಾಡಿದ ಹೂರಾಶಿಯಿತ್ತು

ದಾರಿಯುದ್ದಕ್ಕೂ ಬೆಳಕಿರಲಿಲ್ಲ
ಎದೆಯ ತುಂಬಾ ಬೆಂಕಿಯಿತ್ತು

ದಾರಿ ದೂರದ್ದಾಗಿರಲಿಲ್ಲ
ಹೆಜ್ಜೆ ಬಹಳ ಭಾರವಾಗಿತ್ತು

ದಾರಿಯಲ್ಲಿ ಕತ್ತಲಿರಲಿಲ್ಲ
ಕಣ್ಣು ಅದೇಕೋ ಮಂಜಾಗಿತ್ತು

ಕಲ್ಲು ಇನ್ನೂ ದೂರದಲ್ಲೇ ಇತ್ತು
ನಾನು ಮೊದಲೇ ಎಡವಿದ್ದೆ

-ಕೆಂಚನೂರಿನವ

ಓ ಹುಡುಗಾ
ನೀನು ನನ್ನ ಹೊಗಳುವ
ಪದಗಳೆಲ್ಲವೂ
ನಿನ್ನ ಪದಪಾಂಡಿತ್ಯದ
ಅಹಂಕಾರವನ್ನಷ್ಟೇ ಕಾಣಿಸಿತು.
ಪ್ರೇಮವೆಂದರೆ ಮೌನವೆಂದು
ನಿನಗೆ ತಿಳಿದ ದಿನ
ನಾನು ನಿನ್ನವಳಾಗಿರುತ್ತೇನೆ

-ಸೇವಂತಿ

ನೀನು ಮುರಿದ ಮಂಚಗಳ ಲೆಕ್ಕ
ನಿನ್ನಲ್ಲಿ ಹೆಮ್ಮೆ ಮೂಡಿಸಿದರೆ,
ನಾನು ಹತ್ತಿಳಿದ ಮಂಚಗಳ ಲೆಕ್ಕ
ನನ್ನಲ್ಲಿ ಪಾಪಪ್ರಜ್ಞೆ ಮೂಡಿಸುವುದು
ಎಂಥ ವಿಚಿತ್ರ ನೋಡು ಗೆಳೆಯ
-ಸೇವಂತ

ಶುಕ್ರವಾರ, ಆಗಸ್ಟ್ 2, 2013

ಗುರುವಾರ, ಆಗಸ್ಟ್ 1, 2013

ರಾತ್ರಿಯಾದರೆ ಸಾಕು
ಪ್ರತಿಕಂಬದಲ್ಲೊಬ್ಬ ಸೂರ್ಯ;
ಪಾಪ ಬೆಳದಿಂಗಳು,
ನಾಚಿಕೊಂಡು ನೆಲಕ್ಕಿಳಿಯುವುದಿಲ್ಲ
ಶಹರಗಳಲ್ಲಿ

-ಕೆಂಚನೂರಿನವ

ಸತ್ತವನೂ ಕೂಡ
ಬಂದು ಮಾಡಿಕೊಳ್ಳಬೇಕಿದೆ
ಅವನ ಸಮರ್ಥನೆ ;
ಚಾರಿತ್ರ್ಯ ಹನನವೇ ಕಾಯಕ
ಇಲ್ಲಿ ಕೆಲವರಿಗೆ

-ಕೆಂಚನೂರಿನವ

ನನ್ನ ಅಂಗಿಯ ಮೇಲೆ
ಉಳಿದುಹೋದ
ನಿನ್ನ ಚೂಡಿದಾರದ
ಪಲ್ಲುವಿನದದೊಂದು ದಾರ
ನೀನು ಒಬ್ಬಳೇ ಇರುವಾಗ
ನನ್ನೊಡನೆ ಆಡುವ ಮಾತುಗಳನ್ನು
ಇಲ್ಲಿ ನಾನೊಬ್ಬನೇ ಇರುವಾಗ
ನನ್ನಲ್ಲಿ ಪಿಸುಗುಡುತ್ತಿದೆ

-ಕೆಂಚನೂರಿನವ

ಅದ್ಯಾವುದೋ ಚಿತ್ರಪಟದ ಹಂಸ
ಜೀವತಳೆದು ಮಣಿಯ ನುಂಗಿತಂತೆ.
ಈ ನಿನ್ನ ಚಿತ್ರ ಒಮ್ಮೆ
ಜೀವತಳೆಯಬಾರದೇ?
ಅದು ನನ್ನ ನುಂಗುವುದಾದರೂ ಸರಿ
ಈ ವಿರಹ ನನಗೆ ಬೇಡ

-ಸೇವಂತಿ