ಬುಧವಾರ, ಫೆಬ್ರವರಿ 27, 2013

ಹೋಲಿಕೆ
ಬಹಳವಿದೆ
ಇನ್ನೆಂದೂ ಕಡಲಿಗಿಳಿಯದ
ಒಡಕು ದೋಣಿಗೂ
ಅವಳ ತಲುಪದ
ನನ್ನ ಕವನಗಳಿಗೂ

ಜೈಲಿಗೆ ಹೋಗಬೇಡಿ
ಇದ್ದದ್ದನ್ನ ಇದ್ದಹಾಗೆ
ಮತ್ತು
ಇಲ್ಲದ್ದನ್ನು ಇದ್ದಹಾಗೆ
ಬರೆದು
ಪ್ರೇಮದ ಬಗ್ಗೆ
ಬರೆಯಿರಿ
ಹೇಗೆ ಬೇಕಾದರೂ
ನನ್ನಂತೆ
ಯಾಕೆಂದರೆ
ಪ್ರೇಮದ ಪರವಾಗಿ
ಮಾತಾಡಲು
ಯಾರೂ ಬರುವುದಿಲ್ಲ

ಮಂಗಳವಾರ, ಫೆಬ್ರವರಿ 26, 2013

ನನಗೆ
ತಕರಾರಿಲ್ಲ
ಒಬ್ಬನೇ
ಬದುಕಬೇಕೆಂದಾದರೆ
ನನಗೆ
ತಕರಾರಿರುವುದು
ಅವಳ ನೆನಪುಗಳ
ಜೊತೆ
ಬದುಕಬೇಕಾಗಿರುವ ಬಗ್ಗೆ

ಪರಿಹಾರ

ನೆನಪಿರಲಿ...
ಊರಿನ ರಸ್ತೆ
ಅಗಲಿಸುವಾಗ
ಪಡೆದ
ಜಾಗಕ್ಕೆ ಮಾತ್ರ
ಪರಿಹಾರ.
ಹಾಕುವ
ದೊಡ್ಡದೀಪಗಳು
ಕಟ್ಟುವ ಡಿವೈಡರುಗಳು
ನಿಮ್ಮ ಇರುಳ
ಮತ್ತು ಬೆಳದಿಂಗಳು ಕಸಿದುಕೊಂಡಿದ್ದಕ್ಕೆ
ಚಲನೆ ಕಟ್ಟಿಹಾಕಿದ್ದಕ್ಕೆ ಪರಿಹಾರವಿಲ್ಲ
ಮೊನ್ನೆಯವರೆಗೂ
ಕೂಗಳತೆಯಲ್ಲೇ ಇದ್ದ ಎದುರು ಮನೆಯೀಗ
ಹೆಚ್ಚುದೂರವಿಲ್ಲ
ಬೇಲಿಸುತ್ತಿ
ಹೋಗಬೇಕಷ್ಟೆ
ಎರಡು ಮೈಲಿ
ಚಿಂತಿಸದಿರಿ ದೂರವಾಯ್ತೆಂದು
ಮನೆಮನೆಗೂ
ನೀಡಲಾಗುತ್ತಿದೆ ಇಂಟರ್ನೆಟ್ಟು
ಸುಧಾರಿತ ಭಾರತದಲ್ಲಿ
ಡೌನ್ ಲೋಡ್ ಮಾಡಿಕೊಳ್ಳಿ
ಬೇಕೆನಿಸಿದ ಸಂಬಂಧಗಳನ್ನು,
ಮತ್ತೆ ಯೋಚಿಸದಿರಿ
ಕಿಟಕಿಯಿಂದ ತೂರುತ್ತಿದ್ದ
ಹಾಲ್ಬೆಳದಿಂಗಳು ಇಲ್ಲವೆಂದು
ತೂರಿ ಬರಲಿವೆ
ಲೋ ಬೀಮ್ ಹೈ ಬೀಮ್
ಬೆಳಕಿನ ಚಿತ್ತಾರಗಳು
ನಿಮ್ಮ ಮನೆಯೊಳಗೇ

ಭಾನುವಾರ, ಫೆಬ್ರವರಿ 24, 2013

ಸಣ್ಣ ಹನಿಗಳು
ಸಾಕು
ನೆಲದ ಘಮವೇಳಲು
ನೆಲ ಕಾದಿರಬೇಕಷ್ಟೇ...
ಎರಡು ಹನಿ
ಕಣ್ಣೀರು ಸಾಕು
ಪಶ್ಚತ್ತಾಪಕ್ಕೆ
ಹೃದಯ ಬೆಂದಿರಬೇಕಷ್ಟೇ
ನೋವಲ್ಲಿ

ಒಂದಷ್ಟು ನಿಮ್ಮ ತಲೆ ತಿನ್ನಲು

ಕಿಟಕಿ ತೆರೆದರೆ
ಬೆಳಕು

ಕಣ್ಣು ಮುಚ್ಚಿದರೆ
ರಾತ್ರಿಯಾಗುವುದಿಲ್ಲ
ಕತ್ತಲಾಗುತ್ತೆ

ಕಿಟಕಿ ತೆರೆದಾಗ
ಬರುವದೆಲ್ಲವೂ
ಬೆಳಕಲ್ಲ
ಧೂಳೂ ಸಹ

ಯಾವ ತೀರವನ್ನೂ
ನಂಬಬೇಡಿ
ತೀರಕ್ಕೆ
ಅರ್ಥವಿಲ್ಲ
ನೆರೆ ಬಂದಾಗ

ರೆಕ್ಕೆಯೊಂದೆ
ಸಾಲದು ಹಾರಲು...

ದೀಪ
ಆರುತ್ತದೆ
ಬೆಳಕಲ್ಲ
ದೀಪ ಹಚ್ಚಿಕೊಳ್ಳಬೇಕಷ್ಟೆ

ಯಾವ ನವಿಲು
ಗರಿಯೂ ಚಂದವಲ್ಲ
ನೋಡುವ ಕಣ್ಣಿನಲ್ಲಿ
ಸೌಂದರ್ಯವಿಲ್ಲದಿದ್ದರೆ

ಬೆಳಕಾಗುವುದು
ಕಷ್ಟ
ಇಷ್ಟಿಷ್ಟೇ
ಸುಟ್ಟುಕೊಳ್ಳಬೇಕು
ಬೆಂಕಿಯಾಗುವುದು
ಸುಲಭ

ಶನಿವಾರ, ಫೆಬ್ರವರಿ 23, 2013

ಅವಳ
ಒಂದು ನೋಟಕ್ಕೆ
ಹೃದಯ ಮಾರಿಕೊಂಡೆ.
ಲೆಖ್ಖ ಹಾಕಿ ನೋಡಿದೆ
ಹೆಚ್ಚು ನಷ್ಟವೇನಾಗಿಲ್ಲ
ಹುಸಿನಗೆಯ ಜೊತೆಗೆ
ಒಂದಷ್ಟು ತುಂಟ
ಕನಸನ್ನೂ ಕೊಟ್ಟಿದ್ದಾಳೆ
ಉಚಿತವಾಗಿ



ಅಂದ ಹಾಗೆ ನಾನು ಬ್ಲಾಗ್ ಮಾಡಿದಮೇಲೆ
ಐವತ್ತನೇ ರಚನೆ
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದ ಹೇಳಲಾರೆ
ನಿಮ್ಮ ಋಣವೊಂದನ್ನು ನನ್ನಲ್ಲೇ ಉಳಿಸಿಕೊಳ್ಳುತ್ತೇನೆ

ಶುಕ್ರವಾರ, ಫೆಬ್ರವರಿ 22, 2013

ನಿನ್ನೆ ಸಂಜೆ
ನೀ ಹೀಗೆ
ಕೈ ಕೊಡವಿ
ಹೋದಮೇಲೆ
ನಾನಲ್ಲೇ ನಿಂತಿದ್ದೆ
ಗೆಳತಿ
ಲೂಟಿಯಾದ ಅಂಗಡಿಯಂತೆ
ನೆರೆಯಿಳಿದ ಊರಿನಂತೆ
ಇನ್ನಷ್ಟೇ  ಹುಡುಕಬೇಕು
ನೀನುಳಿಸಿ ಹೋದ
ನೆನಪುಗಳಲ್ಲಿ
ಅಳಿದುಳಿದ ಬದುಕನ್ನ

ಒಂದಿಷ್ಟೂ ನೀರಿಲ್ಲದಂತೆ
ಖಾಲಿಯಾಗಿತ್ತು
ನಮ್ಮನೆಯ ಸಂಪು
ಒಂದಿಂಚೂ ನೀರೆತ್ತಲಿಲ್ಲ
ನಮ್ಮೂರ ಬಾವಿಯ ಪಂಪು
ಕಾರಣವಿಷ್ಟೇ...
ಅಂದು ಜಲಮಂಡಳಿಯವರು
ಹೂಡಿದ್ದರು ಸಂಪು

(ಓ ದೇವ್ರೆ ಪ್ರಾಸದ ಹಂಗಿಗೆ ಬೀಳಿಸಿ
ನನ್ನಿಂದ ಇಂತ ಕವಿತೆ ಬರೆಸದಿರು)

ಓ ತಂಗಾಳಿಯೇ
ಸಾಧ್ಯವಾದರೆ
ಕೊಂಡೊಯ್ದು ತಲುಪಿಸು
ಈ ಕಣ್ಣ ಹನಿಯನ್ನೂ
ಅವಳಿಗೆ
ಆರ್ದ್ರತೆಯಿಂದ ಕೂಡಿದ
ತಂಗಾಳಿಯೆಂದರೆ
ಬಹಳ ಇಷ್ಟ
ಪಾಪ
ಕಡುಬೇಸಿಗೆಯಂತೆ
ಅವಳ
ಊರಿನಲ್ಲೀಗ...

ಕೈ ತೊಳೆದುಕೊಳ್ಳಿ
ಪಶ್ಚತ್ತಾಪದ ಕಣ್ಣೀರಲ್ಲಿ
ಬಿಳಿ ಪಾರಿವಾಳಗಳನ್ನು
ಹಾರಿಸುವ ಮುನ್ನ
ಮೆತ್ತಿಕೊಳ್ಳದಿರಲಿ
ನಿಮ್ಮ ಕೈಗಂಟಿದ
ರಕ್ತದ ಕಲೆಗಳು
ಹಾಲುಬಿಳುಪಿನ ರೆಕ್ಕೆಗಳಿಗೆ

ಅಪರೂಪಕ್ಕೆ
ಹೋಗಿದ್ದೆ
ಅವಳ ಮನೆಗೆ
ಆಸೆಯಿಂದ
ಅವಳೆಂದಳು
ಮಾತುಕಥೆಗಳ ನಂತರ
ಅಣ್ಣಾ ನೀವಿವತ್ತು
ಇಲ್ಲೇ ತಂಗಿ.
ನಾನು ಸಿಟ್ಟು
ನುಂಗುತ್ತಾ ಹೇಳಿದೆ
ಇಲ್ಲ ಹೋಗಲೇಬೇಕು
ಅರ್ಜೆಂಟು
ಕೆಲಸವಿದೆ ತಂಗಿ

ಗುರುವಾರ, ಫೆಬ್ರವರಿ 21, 2013

ಸಮಾಧಿಯೊಳಗೆ
ತಲೆತೂರಿ
ಭೂತಕ್ಕೆ ಬಣ್ಣ ಕಟ್ಟು-
ವವರೇ ಮರೆಯದಿರಿ
ನಿಮ್ಮ ವರ್ತಮಾನವನ್ನ
ಸುಂದರವಾಗಿಟ್ಟುಕೊಳ್ಳಲು
ಭವಿಷ್ಯದಲ್ಲಿ
ನಿಮ್ಮ ಸಮಾಧಿಯನ್ನೂ
ಅಗೆಯಬಹುದು

ನಿನಗೊಂದು
ಓಲೆಯಿದೆಯೆಂದೆ
ಅವಳು
ಕಿವಿಯೊಡ್ಡಿದಳು

ನೂರು ಕಾರಣ
ಕೊಡುತ್ತಿದ್ದೆ ನಾನು
ನನ್ನನ್ನೇಕೆ ಪ್ರೀತಿಸಬೇಕೆಂದು
ಕೇಳಿದ್ದರೆ ಅವಳು.
ಆದರೆ ಅವಳು
ನನ್ನನ್ನು ಪ್ರೀತಿಸದಿರಲು
ನೆಪ ಹುಡುಕುತ್ತಿದ್ದಳು.
ಸಿಕ್ಕಿತೋ ಏನೋ
ಕೈ ಕೊಡವಿ
ಹೋಗಿದ್ದಾಳೆ ಇಂದು

ಬುಧವಾರ, ಫೆಬ್ರವರಿ 20, 2013

ಅವಳು ಹೊಗಳಿದಳು
ಇಂದು
ನಿಮ್ಮ ಕವಿತೆಗಳಲ್ಲಿ
ಸಾರವಿದೆಯೆಂದು
ನಂತರ ತಿಳಿಯಿತು
ಇಂದಿನ ಊಟಕ್ಕೆ
ನಿನ್ನೆಯದೇ ಸಾರಿದೆಯೆಂದು

ವಿರಹಿ

ರಾತ್ರಿಯ
ನೀರವ ಮೌನದಲ್ಲಿ...
ಇಳಿಸಂಜೆಯಲಿ ಕೇಳಿದ
ನಿನ್ನ ಕೈಬಳೆಗಳ
ಸದ್ದು
ಮತ್ತೆ ಕೇಳಿದಂತಾಗಿ
ಎದ್ದು ಕೂರುತ್ತೇನೆ
ಇಡೀ  ರಾತ್ರೀ
ಮತ್ತೊಮ್ಮೆ
ಕೇಳುವ ಆಸೆಯಿಂದ

ಎತ್ತರಕ್ಕೇರಿದಷ್ಟೂ
ಬೀಳುವ ಭಯ ಹೆಚ್ಚು
ಕಾಲುಗಳು ನೆಲದಲ್ಲಿಟ್ಟು-
ಕೊಳ್ಳುವುದು
ಬಹಳ ಕಷ್ಟ

ಬಂದೂಕುಗಳಿಗೆ
ಮತ್ತು
ಅದನ್ನು ಹಿಡಿದವರಿಗೆ
ಯಾವುದೇ ಭಾವನೆಗಳಿರುವುದಿಲ್ಲ-
ವೆಂದು ನಿನ್ನೆ
ಪುಟ್ಟನೊಬ್ಬನನ್ನು ಕೊಂದು
ಮತ್ತೆ ಸಾಬೀತುಪಡಿಸಲಾಗಿದೆ

ನಿನ್ನ ಕೋಮಲ
ಬೆರಳನ್ನ ಸೋಕುವ
ಎಲ್ಲಾ ಸಾಧ್ಯತೆಗಳಿದ್ದಾಗಲೂ
ಮುಟ್ಟಲು ಬಿಡದ
ಮನಸ್ಸಿನ
ಸುಳ್ಳು ಸಭ್ಯತೆಯನ್ನ
ನನ್ನ ಬೆರಳುಗಳು
ಇಂದಿಗೂ ಕ್ಷಮಿಸಿಲ್ಲ

ಮಂಗಳವಾರ, ಫೆಬ್ರವರಿ 19, 2013

ಹಾಲುಬಿಳಿಯ ಹತ್ತಿ
ಬೆಳೆದಿದ್ದು
ಕರಿಯ ಮಣ್ಣಲ್ಲಿ

ಕಪ್ಪುಸುಂದರಿ
''''''''''''''''''''''''''''''''''''
ನಾನೆಂದೆ
ನಿನ್ನ ಕೆನ್ನೆಯೇಕೆ
ನಾಚಿಕೊಂಡಾಗ ಕೆಂಪಾಗುವುದಿಲ್ಲ?
ಕೆಲವೇ ಕ್ಷಣ...
ಅವಳ ಕಣ್ಣುಕೆಂಪಾಯಿತು
ಜೊತೆಗೆ
ನನ್ನ ಕೆನ್ನೆಯೂ:-(:-D

ಸೋಮವಾರ, ಫೆಬ್ರವರಿ 18, 2013

ನಿಮ್ಮ ಕಣ್ಣಲ್ಲೊಂದು
ಅವ್ಯಕ್ತ ಕವನವಿದೆ
ಓದುತ್ತೇನೆ ಕೇಳಿ...
ಸ್ವಲ್ಪ ನಿಲ್ಲಿ
ಎಲ್ಲಾ ಹಕ್ಕುಗಳೂ
ಕಾದಿರಿಸಲ್ಪಟ್ಟಿವೆ
ಕತ್ತಲ್ಲಿದೆ ತಾಳಿ!!

ನನ್ನ ಕವನಗಳೆಂದರೆ...
ಕನಸು ಮಾರುವ
ಅವಳ ಕಂಗಳಿಂದ
ಕಡ(ದ್ದು) ತಂದ
ಕೆಲವು ಸಾಲುಗಳು

ನನ್ನ ಕವಿತೆಗಳಲ್ಲಿ
ನನ್ನ ಹೆಸರಿರದು
ಕಾರಣವಿಷ್ಟೇ...
ನನ್ನೆಲ್ಲಾ ಕವಿತೆಗಳು
ಅವಳ
ನೆರಳಿನ ಬಣ್ಣಗಳು

ಭಾನುವಾರ, ಫೆಬ್ರವರಿ 10, 2013

ಕಳವಳ

ಅವಳೆಂದಳು
ನಾನು ನಿನ್ನ
ಅಂತರಂಗದ
ಗೆಳತಿ.
ಅಂದಿನಿಂದ ಅವಳೊಂದಿಗೆ
ಮಾತು ಕಷ್ಟವಾಗುತ್ತಿದೆ
ತಿಳಿದಿರ ಬಹುದೇ
ಅವಳಿಗೆ
ನನ್ನ ಸಂಚು?

ಅವನು ಕವಿ
ಹೇಳುತ್ತಾನೆ;
ಪ್ರೇಮ ಅಂತರಂಗದ
ಜೀವಜಲ.
ಇವನು ವಿಜ್ಞಾನಿ,
ಹೇಳುತ್ತಾನೆ
ಬತ್ತುತ್ತಿದೆ
ಅಂತರ್ಜಲ.
ನಾನು,
ನಾನು ಕಸಿವಿಸಿಗೊಳ್ಳುತ್ತೇನೆ
ಇವರಿಬ್ಬರ ಮಾತುಗಳಿಗೆ
ಹೊಂದಿಕೆಯಾದಂತಾಗಿ
-ಶಂಕರ

ಶನಿವಾರ, ಫೆಬ್ರವರಿ 9, 2013

ಚಿಂತಿಸದಿರಿ
ಅಕ್ಕಿ ಹಾಲಿನ
ರೇಟು ಹೆಚ್ಚಿದೆಯೆಂದು
ಹೆಚ್ಚಿಸಿಕೊಳ್ಳಿ
ನಿಮ್ಮ ಧಾರ್ಮಿಕ
ಹಸಿವು
ನಮ್ಮ ಸರ್ಕಾರ
ನೀಡುತ್ತೆ
ಹೆಚ್ಚಚ್ಚು ಫಂಡು
ಸುಖವಾಗಿರಿ
ಮಠ-ಮಸೀದಿಯಲ್ಲೇ
ಉಂಡು

ಶುಕ್ರವಾರ, ಫೆಬ್ರವರಿ 8, 2013

ಬದುಕು

ಬದುಕು
ಶಾಶ್ವತವಲ್ಲ!.
ಚಿಂತೆ ಬೇಡ
ಸಾವೂ
ಶಾಶ್ವತವಲ್ಲ
ಒಮ್ಮೆ ಮಾತ್ರ!
ಅದೂ ದೇಹಕ್ಕೆ
ನೆನಪುಗಳಿಗಲ್ಲ

ಗುರುವಾರ, ಫೆಬ್ರವರಿ 7, 2013

ಈಗೀಗ ವಿಷವೂಡುತ್ತಾರೆ
ಬೇರಿಗೇನೆ
ಬೇರು ರವಾನಿಸುತ್ತದೆ
ಕಾಂಡಕ್ಕೆ ಮತ್ತೆ
ಹೂವಿಗೆ
ಹೂವು ತಿನ್ನುವ ಹುಳಗಳು
ಕ್ಷಣದಲ್ಲಿಯೇ ಅಂತ್ಯ

ನನಗೆ ಅನುಮಾನ
ಗಾಳಿ ಹೊತ್ತು
ತಂದ ಪರಿಮಳದ ಮೇಲೂ
ಇದರಲ್ಲೂ ವಿಷ?
ಇರಬಹುದೇ?

ಮಂಗಳವಾರ, ಫೆಬ್ರವರಿ 5, 2013

ಹೂವಿನ ಸಾಫಲ್ಯತೆಯನ್ನ
ಹೀಚಲ್ಲಿ ಕಾಯಲ್ಲಿ
ಹಣ್ಣಿನಲ್ಲಿ ಮತ್ತೆ ಬೀಜದಲ್ಲಿ
ಕಂಡು ಗೊತ್ತಿರದ ಕೆಲವರು
ಹೂವ ಕಿತ್ತು ಕಲ್ಲಮೇಲಿಟ್ಟು
ಹೂವಿನ ಜನ್ಮ ಸಾರ್ಥಕವೆಂದರು

ನನ್ನವಳು

ಅಮ್ಮನಂತೆ ಅವಳು
ಅಳುವಾಗ ನಾನು
ಸಾಂತ್ವನದ ಕಡಲಾಗುತ್ತಾಳೆ

ಅಕ್ಕನಂತೆಯೇ ಅವಳು
ನಾನು ಗುಡುಗುವಾಗಲೆಲ್ಲ
ಇವಳು ಕರಗುವ ಮುಗಿಲು

ತಂಗಿಯಂತೆಯೂ ಇವಳು
ಪ್ರೀತಿಸ ಬಲ್ಲಳು ಜಗಳವಾಡುತ್ತಲೇ
ಜಗಳವಾಡ ಬಲ್ಲಳು ಪ್ರೀತಿಸುತ್ತಲೇ

ನನ್ನ ನೋವು ನಲಿವಿಗೆ
ಸದಾ ಜೊತೆಯಾಗುವ ಹೆಗಲು
ಗೆಳತಿ ಎನ್ನೋಣವೆಂದರೆ
ಇವಳು ಅದಕೂ ಮಿಗಿಲು

ಸೋಮವಾರ, ಫೆಬ್ರವರಿ 4, 2013

ಜಾತಿ

ಕೆಲವರಿಗೆ
ಕಿರೀಟದ ಗರಿ
ಮತ್ತೆ ಕೆಲವರಿಗೆ
ಅಂಗಾಲಲ್ಲಿ ಮುರಿದ
ಮುಳ್ಳು
ಹೆಜ್ಜೆಯಿಟ್ಟಾಗಲೆಲ್ಲಾ
ಕಾಡುತ್ತೆ ನೋವಾಗಿ

ಅಚ್ಚರಿ

ಅವಳೆದುರು ತಡವರಿಸುವ
ಶಬ್ಧಗಳು
ಇಲ್ಲಿ ಕವನ-
ವಾಗುವಾಗ ಸರಾಗವಾಗಿ
ಹರಿಯುತ್ತವೆ!!

ಭಾನುವಾರ, ಫೆಬ್ರವರಿ 3, 2013

ಎಷ್ಟು ಪ್ರಯತ್ನಿಸಿದರೂ 
ನೀನಿತ್ತ ಮೊದಲ ಮುತ್ತು
ಮತ್ತದರ ಮತ್ತಿಗೆ
ಹೋಲಿಕೆಯಾಗುವ ಪದ
ಹುಡುಕಿ ಕವಿತೆ ಕಟ್ಟಲಾಗಲಿಲ್ಲ
.............................................................................
ಯಾವ ಹೆಸರಿಟ್ಟರೇನು ಫಲ
ಸಂಬಂಧಕ್ಕೆ
ನನ್ನ ಖುಷಿಯಲ್ಲಿ
ನಿನ್ನ ಕಣ್ಣರಳದಿದ್ದರೆ
ನಿನ್ನ ನೋವಿಗೆ
ನನ್ನ ಕಣ್ಣು ನೀರಾಗದಿದ್ದರೆ
...................................................................................

ಬಿಡುಗಡೆ
..................
ಗೆಳತಿ...
ಸದಾ ನಿನ್ನ ನೆನಪಿನ
ಹಂಗಲ್ಲೇ ಬದುಕುವ ಹೃದಯ-
ದಿಂದ ನನ್ನ ದೇಹ
ಬಿಡುಗಡೆ ಬಯಸುತ್ತಿದೆ
............................................................................................

ಸಂಜೆ
................
ಬೇಕಾಗಿದೆ ಗೆಳತಿ
ಮುಗಿಯದ ಸಂಜೆಯೊಂದು
ನಿನ್ನ ಸಾಂಗತ್ಯದಲ್ಲಿ


........................................................................................................

ಮೋಸ
..................................
ಕನಸಿನಲ್ಲಿ ಬರುತ್ತೇನೆಂದು ನಂಬಿಸಿ
ನಿದ್ದೆ ಕದ್ದು ಹೋದವಳ
ಮಾತು ನಂಬಿ
ನಾ ಮೋಸಹೋದೆ

...............................................................................................................
ಬೇಲಿ
................................
ನನ್ನ ಪ್ರೇಮದೂರಿನ ದಾರಿಗೆ
ಮುಳ್ಳು ಸುರಿದವರೆ ಕೇಳಿ
ಇಂದು ನಾ ಸೇರಲಿರುವೆ ಅವಳನ್ನ
ನನ್ನ ಕನಸಲ್ಲಿ
ಸಾಧ್ಯವಾದರೆ ಕಟ್ಟಿ
ನನ್ನ ಕನಸಿಗೊಂದು ಬೇಲಿ



ಬದುಕು
......................
ಕೆಲವರಿಗೆ
ಹೆರುವ ಮುನ್ನವೇ
ತಯಾರು
ತೂಗುವ ತೊಟ್ಟಿಲು
ಇನ್ನೂ ಕೆಲವರಿಗೆ
ಸಿಗುವುದೇ ಇಲ್ಲ
ಎರಡು ಕೈಗಳು
ನಿದ್ದೆ ಬಂದು
ಅಳುವಾಗ ತಟ್ಟಲು
.............................................................................................

ಯಾವ ತೀರವೂ ನಿಜವಲ್ಲ
ಗೆಳೆಯ
ನಂಬಿ ನಿಲ್ಲದಿರು;
ನೆರೆ ಬಂದಾಗ
ತೀರಕ್ಕೆಲ್ಲಿದೆ ಅರ್ಥ?


....................................................................................................

ನನ್ನದೊಂದು ಪ್ರಾರ್ಥನೆ
ದೇವರ ತಲುಪಿದಂತಿದೆ
ಅವಳ ಎಂದಿನ ಮುಗಳ್ನಗೆ
ಇಂದು ನನಗೆ ಬೇರೇನೋ ಹೇಳಿದಂತಿದೆ
....................................................................................................
ಪ್ರಶ್ನೆ
..................
ನನ್ನ ಪ್ರೇಮದ ಹೂವನ್ನು
ಕಿತ್ತುಕೊಂಡು ಹೋದವರೆ ಹೇಳಿ
ಅವಳ ನೆನಪಿನ ಮುಳ್ಳನ್ನೇಕೆ
ಇಲ್ಲೇ ಬಿಟ್ಟು ಹೋದಿರಿ?
....................................................................................................


ದೇವರಂತವಳು 
ನನ್ನ ಹುಡುಗಿ;
ಕಲ್ಲಾಗಿ ಕುಳಿತಿದ್ದಾಳೆ
ನನ್ನ ಪ್ರೀತಿಯ
ಯಾಚನೆಗೆ

ಹೊದೋಟಕ್ಕೆ
ಬೇಲಿಯಿತ್ತು
ಭೂಮಿಯ ಮೇಲೆ ಮಾತ್ರ
ಒಳಗೆ ಆಳದಲ್ಲಿ
ಬೇರುಗಳು
ಬೇಲಿಯಾಚೆಗೂ ಹರಡಿವೆ

ಹೂ-ಧರ್ಮ
............
ಹೂ ಹೇಳಿದ್ದು
ನನಗೆ,
ನಿನ್ನ ತೋಟದ
ಹೂಗಳನ್ನ ಪ್ರೀತಿಸು-
ವುದೆಂದರೆ
ನೆರೆಯ ತೋಟದ
ಹೂಗಳನ್ನ ದ್ವೇಷಿಸುವುದಲ್ಲ
ಮೇಲೆ ಅರಳುವ ಹೂ
ಬೇರೆಯಷ್ಟೆ.
ಒಳಗೆ ಆಳದಲ್ಲಿ ನೀರಿತ್ತು
ಸಲಹಿದ ತಾಯಿಯೊಬ್ಬಳೆ
ದಿನವೂ ಹೂವರಳಿಸುವ ತಂದೆಯೊಬ್ಬನೆ

ಕೇಸರಿ ಅವರಿಗಿಷ್ಟ
ಇವರಿಗೆ ಹಸಿರು
ಇವರ ಜಗಳಕ್ಕೆ
ನಡುವಿನ ಬಿಳಿ
ಪೂರ್ತಿ ರಾಡಿ
ಸಾರ್ವಭೌಮತೆಯ ಚಕ್ರ
ಸಡಿಲ ಬಾಯಿಯ ನಾಯಕರು-
ಗಳ ಆಟದ ಚಕ್ರ
ಅಂದಂತೆ
ನಮ್ಮದು ಗಣ(ಅ)ತಂತ್ರ
ನಾಳೆ ಅದರ ನೆನಪಿನ ದಿನ
ನಾನು ಹೋಗಲಿದ್ದೇನೆ
ಹೂವಿಡಲು
ಸಭ್ಯ ನಾಗರಿಕ ನಾನು
ಕೊಲ್ಲುವಾಗ ತಡೆಯುವುದಿಲ್ಲ
ಸತ್ತಮೇಲೆ
ಹೂ ಹಾಕಲು ಮರೆಯುವುದಿಲ್ಲ

ಶನಿವಾರ, ಫೆಬ್ರವರಿ 2, 2013

ಗೋರಿಗಳೆಲ್ಲಾ ಹೆಚ್ಚು-ಕಡಿಮೆ
ಒಂದೇ ರೀತಿಯಿದ್ದವು
ಆದರೆ
ಒಳಗೆ ಮಲಗಿರುವವರು?
...ಮತ್ತು
ಒಂದೇ ಕಾರಣಕ್ಕಾಗಿ
ಸತ್ತಿರರು

ಉಸಿರು
ನಿಂತರೆ ಸಾವು
ಚಲನೆಯಲ್ಲಿದ್ದರೆ ಬದುಕು
-ಶಂಕರ

ಶುಕ್ರವಾರ, ಫೆಬ್ರವರಿ 1, 2013

ನೆನಪು

ನಿನ್ನ ನೆನಪಿನ ಪರಿಮಳವಿದೆ ಗೆಳತಿ
ಈ ತೋಟದ ಹೂಗಳಿಗೆ
ಆಘ್ರಾಣಿಸಿದಾಗಲೆಲ್ಲ ಕಣ್ತುಂಬಿ ಬಂದು
ಮರದ ಬೇರುಗಳಿಗೆ ಮುತ್ತಿಡುತ್ತೇನೆ
ನಿನ್ನ ಕೋಮಲ ಪಾದಗಳ ನೆನಪಿನಲ್ಲಿ

ಭಾವಾನುವಾದದ ಒಂದು ವಿಫಲ ಯತ್ನದಲ್ಲಿ
ನಿಮ್ಮ ಶಂಕರ

GOOD DAy

Remembering your scent,
wherever I saw a flower
I smelled it and tears began to pour
wherever I saw a cypress in the meadow,
I kissed its feet in memory of you.
Rumi