ಶುಕ್ರವಾರ, ಮೇ 31, 2013

ಕೋಗಿಲೆಯ ಹಾಡಿಹೊಗಳುವವರೇ..
ಕಾಗೆಯ ಹೀಯಾಳಿಸದಿರಿ
ಕೋಗಿಲೆಯ ಕೊರಳಿಗೆ
ಕಾಗೆಯ ಕರುಳಿನ ಹಂಗಿದೆ
-ಕೆಂಚನೂರಿನವ

ಧರ್ಮ
ಒಬ್ಬನ ಮನೆಯ
ಬೆಳಕಾಯಿತಂತೆ
ಇರಬಹುದು...
ಆದರೆ ಮೊನ್ನೆ
ಧರ್ಮ ಕೆಲವು
ಮನೆಗಳನ್ನು
ಸುಟ್ಟಿದ್ದು ನಿಜ

ಗುರುವಾರ, ಮೇ 30, 2013

ನಾನು ಪ್ರಯತ್ನಿಸುತ್ತೇನೆ
ನಿನ್ನನ್ನು ನನ್ನ ಕವಿತೆಗಳಲ್ಲಿ ಬಂಧಿಸಲು
ಪುಟ್ಟ ಮಗುವೊಂದು
ಬೆಳಕನ್ನು ಬಂಧಿಸಿ
ಮುಷ್ಟಿಯಲ್ಲಿಟ್ಟುಕೊಳ್ಳಲೆಳಸುವಂತೆ

-ಕೆಂಚನೂರಿನವ

ನಿನ್ನದೇ ಬೆಳಕಲ್ಲಿ
ಹೊಳೆವ ಚುಕ್ಕಿ
ನೀನು
ವಿಸ್ತಾರದಾಚೆಗೂ
ಹಾರುವ ಹಕ್ಕಿ
ನೀನು
ನನ್ನೆದೆಯ ಬಾನಲ್ಲಿ

-ಕೆಂಚನೂರಿನವ

ನನ್ನ ಮನೆ

ಬಯಲಲ್ಲೇ ಇರಲಾಗದು
ಗೋಡೆ ಕಟ್ಟಿಕೊಂಡೆ
ಬಂಧನದಲ್ಲಿರಲಾಗದು
ಬಾಗಿಲಿಟ್ಟುಕೊಂಡೆ
ಎಲ್ಲರಿಗೂ ತೆರೆದುಕೊಳ್ಳಲಾಗದು
ಕಿಟಕಿಯಿಟ್ಟುಕೊಂಡೆ
-ಕೆಂಚನೂರಿನವ

ನಿನ್ನದೇ  ಕಾಂತಿಯಲ್ಲಿ
ಹೊಳೆವ  ನಿನ್ನ,
ಸೂರ್ಯನ ಸಾಲದಲ್ಲಿ
ಹೊಳೆವ ಚಂದ್ರನಿಗೆ
ಹೋಲಿಸಲಾರೆ

-ಕೆಂಚನೂರಿನವ

ಬುಧವಾರ, ಮೇ 29, 2013

ಬದಲಾಗದ ಬದುಕಿನ ಕೆಲವು ಬಣ್ಣವಿಲ್ಲದ ಪುಟಗಳು

...ಈ ಕ್ಯಾಪ್ಟನ್ ಭಟ್ಟ ಇದ್ದಾನಲ್ಲ ಅವನ್ನ ನೋಡಿದ್ರೆ ಹೊಡೆದು ಕೊಂದುಬಿಡಬೇಕು ಅನ್ಸುತ್ತೆ ಒಂದೊಂದ್ಸಲ ,ಏನೋ ಇವನಪ್ಪನರೆಸ್ಟೋರೆಂಟ್ ಅನ್ನೋ ತರಾ ಆಡ್ತಾನೆ.ನಂಗೆ ಗೊತ್ತಿಲ್ವ ಗೆಸ್ಟ್ ಹೋದ ಕೂಡ್ಲೇ ಟೇಬಲ್ ಕ್ಲಿಯರ್ ಮಾಡ್ಬೇಕು ಅಂತ ?..ಬೇಕೆಂದೆ ಹುಡುಗೀರ ಎದುರೇ ಟೇಬಲ್ ಕ್ಲಿಯರ್ ಮಾಡೋಕೆ ಹೇಳ್ತಾನೆ. ಇವ್ನು ಬಿಲ್ ಫೋಲ್ಡರಿಂದ ಟಿಪ್ಸ್ ಹೊಡೆಯೋದು ಗೊತ್ತಿಲ್ಲ ಅಂದುಕೊಂಡಿದ್ದಾನೆ ನಾಳೆ ಬ್ರೀಫಿಂಗ್ ಟೈಮಲ್ಲಿ ಮ್ಯಾನೇಜರ್ ಹತ್ರ ಹೇಳ್ಕೊಡ್ತೀನಿ ಅವ್ನಿಗೆ.(ಪಾಪ ಅವನ ಮಗಳಿಗೆ ಹುಷಾರಿಲ್ವಂತೆ,ಬೇಡ  ಎಷ್ಟು, ಚಂದವಿದೆ ಮಗು).....
ಆದ್ರೂ ಭಟ್ರು ಒಳ್ಳೆಯವ್ರು ನಾನ್'ವೆಜ್ ಮಾಡಿದಾಗಲೆಲ್ಲ ತಾನು ತಿನ್ನದಿದ್ದರೂ,ಹಾಕಿಸಿಕೊಂಡು ನನಗೆ ಕೊಡ್ತಾರೆ ಛೇ! ಇನ್ಮೇಲೆ ಭಟ್ರಿಗೆ ಬೈಬಾರ್ದು
***********************************
ಈ ಗೆಸ್ಟ್'ಗಳು ಹನ್ನೊಂದೂವರೆ ಆದ್ರೂ ಹೋಗಲ್ಲ ಇವ್ರಿಗೇನು ಮನೆ ಮಠ ಇಲ್ವಾ?.ಹನ್ನೊಂದು ಕಾಲಿಗೆ ಫೈನಲ್ ಆರ್ಡರ್ ಅಂತ ಹೋದ್ರೆ ಇವ್ರು ಏನೂ ಬೇಡ ಅಂತಾರೆ,ಹನ್ನೊಂದು ಮುಕ್ಕಾಲಿಗೆ ಇವ್ರಿಗೆ ಶುರುವಾಗುತ್ತೆ ಇವ್ರ ಇನ್ನೊಂದು ಲಾರ್ಜಿನ ಆಲಾಪ .
ಈ ಸಲ ಏನಾದ್ರೂ ಮಾಡಿ ಪಾಸ್'ಪೋರ್ಟ್ ಮಾಡಿಸ್ಕೊಬೇಕು ದುಬಾಯಿಗಾದ್ರೂ ಹೋಗ್ಬೇಕು.ಮುದಾಸಿರ್'ಗೆ ನಾಳೆ ಫೋನ್ ಮಾಡ್ಬೇಕು ಅಲ್ಲೊಂದು ಕೆಲ್ಸ ನೋಡೋಕೆ
ಒಳ್ಳೆ ಸಂಬಳವಿದೆಯಂತೆ ಅಲ್ಲಿ.ಅವ್ನು ಅಲ್ಲಿಗೆ ಹೋದ್ಮೇಲೆ ಇಬ್ಬರು ತಂಗಿಯರ ಮದುವೆ ಮಾಡಿದ್ದಾನೆ ಅದೂ ಒಂದುರೂಪಾಯಿ ಸಾಲ ಇಲ್ಲದೆ. ಈ ಬೆಂಗ್ಳೂರಲ್ಲಿದ್ದು ಕಿತ್ತಾಕಿದ್ದು ಅಷ್ಟರಲ್ಲೇ ಇದೆ.(ಈ ಸಲ ಏನಾದ್ರೂ ಮಾಡಿ ತಂಗಿ ಮದುವೆ ಮಾಡಿಬಿಡಬೇಕು) ಥೂ ದರಿದ್ರ ಸೊಳ್ಳೆಗಳು ಮಲ್ಕೊಳ್ಳೋಕು ಬಿಡಲ್ಲ ಈ ಸಲ ವೀಕ್ ಆಫ್ ದಿನ ಒಂದು ಸೊಳ್ಳೆಪರ್ದೆ ತಗೋಬೇಕು.(ಈ ವಾರದ ಟಿಪ್ಸ್ ಎಷ್ಟು ಬರುತ್ತೋ....)
***********************************
ರಿಷಪ್ಷನ್'ನಲ್ಲಿರೋ ಸವಿತಾ ನೋಡೋಕೆ ತುಂಬಾ ಚಂದ ಇದ್ದಾಳೆ(ಅದಕ್ಕೆ ಅವ್ಳನ್ನ ಕೆಲಸಕ್ಕೆ ಇಟ್ಕೊಂಡಿರೋದು ಅಂತಾ ಮೊನ್ನೆ ಭಟ್ರು ಹೇಳ್ತಿದ್ರು) ಅವಳೂ ನನ್ನ ನೋಡಿದ್ರೆ ನಗ್ತಾಳೆ .ಆದ್ರೂ ಅವ್ಳೆದ್ರಿಗೆ ಹೋದಾಗ ಒಂಥರಾ ಭಯ ಆಗುತ್ತೆ.ಮೊನ್ನೆ ಅವಳ ಬರ್ತ್'ಡೇಗೆ ಕೊಟ್ಟ ಚಾಕ್ಲೇಟ್ ಈಸ್ಕೊಳ್ಳೋವಾಗ ಕೈ ನಡುಗ್ತಾ ಇತ್ತು. ಅವಳೇ ಧೈರ್ಯಸ್ತೆ ಶೇಕ್'ಹ್ಯಾಂಡ್ ಕೊಡ್ತಾಳೆ(ಅಬ್ಬಾ ಎಷ್ಟು ಮೆದು ಅವಳ ಕೈ) ಅವಳಂತೆ ಧೈರ್ಯವಾಗಿ ವ್ಯವಹರಿಸೋಕೆ ನಾನದ್ಯವಾಗ ಕಲಿತೀನೋ... ಅವಳು ಹೇಳ್ತಾಳೆ ನಾಚಿಕೆ,ಸಂಕೋಚ ಇವನ್ನೆಲ್ಲಾ ಇಟ್ಕೊಂಡ್ರೆ ಬೆಂಗ್ಳೂರಲ್ಲಿ ಬದ್ಕೋಕಾಗಲ್ಲ ಹುರಿದು ಮುಕ್ಕಿಬಿಡ್ತಾರೆ,ನಿಮ್ ಥರಾ ಟ್ಯಾಲೆಂಟ್ ಇದ್ದಿದ್ರೆ ಇಷ್ಟೊತ್ತಿ ರೆಸ್ಟೋರೆಂಟ್ ಮ್ಯಾನೇಜರ್ ಆಗಿರ್ತಿದ್ದೆ
(ಥೂ ಇನ್ನಾದ್ರೂ ಬದಲಾಗ್ಬೇಕು ನಾನು)

-ಕೆಂಚನೂರಿನವ

ಮಂಗಳವಾರ, ಮೇ 28, 2013

ಚಂಚಲೆಗೆ

ಕಣ್ಣಲ್ಲೇ ದೀಪ
ಆರಿಸಬಲ್ಲ ನಿನಗಾಗಿ
ನನ್ನೆದೆಯಲ್ಲೊಂದು ದೀಪ
ಹಚ್ಚಿಟ್ಟಿದ್ದೇನೆ
ಕಾಳಜಿಯಿರಲಿ ಆರೀತು
ಹೆಚ್ಚು ಮಿಟುಕಿಸದಿರು
ನಿನ್ನ ಕಣ್ರೆಪ್ಪೆಗಳನು

-ಕೆಂಚನೂರಿನವ

ಸೋಮವಾರ, ಮೇ 27, 2013

ಕದಡುತ್ತೇನೆ ನಾನು
ನಟ್ಟಿರುಳ ನೀರವತೆಯನ್ನು
ನಿನ್ನ ನೆನಪಿನ
ನಿಟ್ಟುಸಿರು ಬೆರೆಸಿ
ಸುಳಿವ ತಂಗಾಳಿಗೆ

-ಕೆಂಚನೂರಿನವ

ನೂರುಮಾತು
ವ್ಯರ್ಥ
ಒಂದು ಆರ್ದ್ರನೋಟ
ಸಂತೈಸಬಲ್ಲುದು
ನೋವಿನಲ್ಲಿರುವವರ
ಸಾಲುದೀಪಗಳು
ವ್ಯರ್ಥ
ಕತ್ತಲಿಗೆ
ಒಂದೇ ದೀಪಸಾಕು

-ಕೆಂಚನೂರಿನವ

ಶನಿವಾರ, ಮೇ 25, 2013

ಕೊಳ್ಳುವವರಿದ್ದರೆ ಸಂಪರ್ಕಿಸಿ
ಒಂದಷ್ಟು ನೆನಪುಗಳಿವೆ
ಕೆಲಸಕ್ಕೆ ಬಾರದವು
ನನ್ನೆದೆಯ ಗರಾಜಿನಲ್ಲಿ.
ಹೆಚ್ಚೇನು ಕೊಡಬೇಡಿ
ಒಂದಷ್ಟು ಹೊಸಕನಸುಗಳು ಸಾಕು

-ಕೆಂಚನೂರಿನವ

ಕತ್ತಲು
ಬೆತ್ತಲಾದರೆ
ಬಯಲು,
ಮಾಡದ ಮಿತ್ರ

ನವಿಲಗರಿ

ಹದಿನಾರರ ನವಿರು
ಇಪ್ಪತ್ತರ ಪೊಗರು
ಎಡೆಬಿಡದೆ ನೆನಪಾಗುತ್ತಿವೆ ಮೂವತ್ತರಲ್ಲಿ

-ಕೆಂಚನೂರಿನವ

ಶುಕ್ರವಾರ, ಮೇ 24, 2013

ರಿಯಾಯಿತಿ ದರದ ಅಕ್ಕಿ ನ್ಯಾಯಬೆಲೆ ಅಂಗಡಿಗಳಲ್ಲಿ ಮೊದಲೂ ಕೊಡುತ್ತಿದ್ದರು ,ಈಗಲೂ ಕೊಡುತ್ತಿದ್ದಾರೆ .ಪ್ರಮಾಣ ಮತ್ತು ಬೆಲೆಯಲ್ಲಿ ವ್ಯತ್ಯಾಸವಾಗಿರಬಹುದಷ್ಟೆ(ಗುಣಮಟ್ಟವೊಂದೇ ಬದಲಾಗದೆ ಇರುವಂತದ್ದು) ಆದರೆ ಈಗ ಅದರ ಸುತ್ತ ಇಷ್ಟೊಂದು ಗುಲ್ಲೆದ್ದಿರುವುದು ಯಾಕೆಂದು ಅರ್ಥವಾಗುತ್ತಿಲ್ಲ
ಕೇವಲ ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯನವರನ್ನ ಟೀಕಿಸಬೇಕೆಂಬ ಒಂದೇ ಉದ್ದೇಶದಿಂದ ಮಾಡುತ್ತಿರಬಹುದೆ? ಅನುಮಾನಗಳಿವೆ ನನಗೆ ಯಾಕೆಂದರೆ ಕಾಂಗ್ರೆಸ್ಸಿನ ಜನರಿಗೆ ಅದರಲ್ಲಿ ಹೊಸತೇನೂ ಕಾಣುವುದಿಲ್ಲ
ಇನ್ನು ಸಿದ್ಧರಾಮಯ್ಯನವರ ಬಗ್ಗೆ ಕೆಟ್ಟದ್ದಾಗಿ ಹೇಳಲು ಸಧ್ಯಕ್ಕೆ ಇವರ ಬಳಿ ಬಂಡವಾಳ ಇಲ್ಲ ಅದಕ್ಕೇ ಇವರು ಅಕ್ಕಿಯಲ್ಲಿ ಕಲ್ಲು ಹುಡುಕುತ್ತಿದ್ದಾರೇನೋ??.

ನನ್ನದೊಂದಿಷ್ಟು ಪ್ರಶ್ನೆಗಳಿವೆ...
ಡೀಸೆಲ್ ಕಾರುಗಳಿಗೆ ಸಬ್ಸಿಡಿ ಡೀಸೆಲ್ ಹಾಕಿಸುತ್ತೀರಲ್ಲ ಆಗ ನಿಮ್ಮ ದೇಶಭಕ್ತಿ ಎಲ್ಲಿ ಹೋಗಿರುತ್ತೆ?
ನೀವು ಎಂದಾದರೂ ಖಾಸಗಿ  ಬಂಕ್'ಗಳಲ್ಲಿ ಡೀಸೆಲ್ ಹಾಕಿಸಿಕೊಳ್ತೀರಾ?
ನೀವು ಕೊಳ್ಳುವ ಸಿಲಿಂಡರ್ ಒಂದಕ್ಕೆ 500ಕ್ಕೂ ಮಿಕ್ಕಿ ಸಬ್ಸಿಡಿ ಕೊಡುತ್ತಾರೆ ಅದು ನಿಮಗೆ ಗೊತ್ತಿರಬೇಕಲ್ವ?(ಬಹುಶಃ 30 kg ಅಕ್ಕಿಗೆ ಅಷ್ಟಾಗಲಿಕ್ಕಿಲ್ಲ)bpl ಕಾರ್ಡಿನವರು ಗ್ಯಾಸ್ ಹೊಂದಿರುವುದಿಲ್ಲ

ತಿನ್ನಲು ಅನ್ನ ಕೊಟ್ಟರೆ ಬಾಯಿ ಬಡ್ಕೋತೀರಿ ಇದು ನಿಮ್ಮ ಸಣ್ಣತನವಲ್ಲವೆ?

ಕೇವಲ ಅಕ್ಕಿಕೊಟ್ಟ ಮಾತ್ರಕ್ಕೆ ಬಡವರು ಆಲಸಿಗಳಾಗುತ್ತಾರೆಯೆ? ಆಗಲಿ ಬಿಡಿ ಯಾರು ತಾನೇ ಆಲಸಿಗಳಲ್ಲ ಹೇಳಿ?
ನಿಮ್ಮಗಳ ಅಲಕ್ಷದಿಂದಲೇ ಅಲ್ಲವೇ ಮತದಾನದ ಸರಾಸರಿ ಶೇಖಡಃ ಐವತ್ತೂ ದಾಟದಿರುವುದು?
ಬಡವರು ಆಲಸಿಗಳಾಗಿದ್ದರೆ ನೀವು ನಿಮ್ಮದೆಂದು ಬೀಗುವ ತೋಟ ಗದ್ದೆಗಳು ಬರಡು ಬಿದ್ದು ಯಾವುದೋ ಕಾಲವಾಗಿರುತಿತ್ತು
ರಸ್ತೆಬದಿಯ ಜೋಪಡಿಗಳಲ್ಲೂ ಅವರು ಬದುಕುತ್ತಿರುವುದು ಅಮಿತ ಜೀವನುತ್ಸಾಹದಿಂದಲೇ ಹೊರತು ಅಲಸ್ಯದಿಂದಲ್ಲ
ಅಂದಿನ ಜನತಾ ಸರ್ಕಾರ ಅಕ್ಕಿಯ ಜೊತೆ ಸೀರೆ ಪಂಚೆ ಇತ್ಯಾದಿಗಳನ್ನೂ ಕಡಿಮೆ ದರದಲ್ಲಿ ನೀಡಿತ್ತು ಆಗ ಬಂದಿರದ ಅನುಮಾನಗಳು ಯಾಕೆ?

ಸಾಧ್ಯವಾದರೆ ಬದಲಾಗಿ ಎಲ್ಲದರಲ್ಲೂ ರಾಜಕೀಯ ಮಾಡಬೇಡಿ
ಭಾವನೆಗಳ ಜೊತೆ ರಾಜಕೀಯವಾಯ್ತು
ಈಗ ಅಕ್ಕಿಯೆ?
-ಕೆಂಚನೂರಿನವ

ಗುರುವಾರ, ಮೇ 23, 2013

ಚೆಂದುಟಿಯ ತುದಿಯಲ್ಲಿ
ಹೂ ನಗೆಯು ಅರಳಿರಲು
ಇದಕಿಂತ ಸೊಗಸು ಬೇಕೆ?

ಬಿಸಿಲಕೋಲೊಂದು
ತಾ ಮಿಂದು ನಿಂತಿರಲು
ಇದಕಿಂತ ಸೋಜಿಗವು   ಬೇಕೆ?

ಕಂಡಂತ ಕನಸೊಂದು
ಕಣ್ಮುಂದೆ ನಿಂತಿರಲು
ಇನ್ನು ಕನಸುಗಳೇಕೆ ನನಗೆ?

ನನ್ನೊಳಗೆ ನೀನಿರಲು
ನಿನ್ನೊಳಗೆ ನಾನಿರಲು
ನಾ ಬೇರೆ ನೀ ಬೇರೆಯೆನ್ನಬೇಕೆ?

-ಕೆಂಚನೂರಿನವ

ಸ್ವಯಂವರ

ಅಂದಿನಂತೆ
ಬಿಲ್ಲೆತ್ತಲೇ ಬೇಕೆಂದಿಲ್ಲ
ಅವಳ ಕೆಂದುಟಿ
ಯ ಮೇಲೊಂದು
ಹೂವರಳಿಸಿದರೆ ಸಾಕು
ಪ್ರೇಮ ಪಡೆಯಲು

-ಕೆಂಚನೂರಿನವ

ಬುಧವಾರ, ಮೇ 22, 2013

ಸಿದ್ಧಾಂತ

ನಂಬಿ ನಿಲ್ಲದಿರು
ತೀರವನು
ನೆರೆ ಬಂದರೆ...
ಎಲ್ಲ ತೀರಗಳೂ
ನಗೆಪಾಟಲಿಗೀಡು

-ಕೆಂಚನೂರಿನವ

ವೈರಿಯಷ್ಟೇ ಕಾಡಬಲ್ಲ
ಎನ್ನುವುದು
ನಿಮ್ಮ ನಂಬಿಕೆಯಾದರೆ
ಒಮ್ಮೆ
ಪ್ರೀತಿಯಲ್ಲಿ ಬಿದ್ದುನೋಡಿ

-ಕೆಂಚನೂರಿನವ

ಯಾರೇನೆ ಅಂದರೂ
ನಾನು
ಬೇರೇನನ್ನೂ ಬರೆಯದಂತೆ
ಕಟ್ಟಿಹಾಕಿದ ನೀನು
ನನಗೆ ನೀನು
ಪ್ರೇಮದೆಡೆಗೆ
ಕಣ್ಣುತೆರೆಸಿದ ಗುರು
-ಕೆಂಚನೂರಿನವ

ಸುಗಂಧಿ

ನನ್ನ ಪಾಲಿಗದು
ಮುಗಿಯದ
ಅಮಲು
ನಿನ್ನ ದೇಹದ
ಘಮವು

-ಕೆಂಚನೂರಿನವ

ನೆನಪು

ಬೆಂಕಿ ಹಚ್ಚಿದೆ
ಚಳಿಯಾಯಿತೆಂದು
ಬೆಚ್ಚಗಿರಲು
ಈಗ ಸುಡಲಾರಂಬಿಸಿದೆ
ಆರಿಸಲಾಗುತ್ತಿಲ್ಲ

-ಕೆಂಚನೂರಿನವ

ಮಂಗಳವಾರ, ಮೇ 21, 2013

ಮನಬಿಚ್ಚಿ ನಗಲು ಬಿಡದ
ನಿನ್ನ ಗಾಂಭೀರ್ಯ
ನನಗೆ
ನಗೆಯವಸ್ತುವೆಂದರೆ
ಬೇಸರಿಸದಿರು ಗೆಳೆಯ

ನಗಲಾಗದ
ನಿನ್ನ ಸ್ಥಿತಿ
ನನ್ನಲ್ಲಿ
ಕರುಣೆ ಉಕ್ಕಿಸುತ್ತದೆ
ನಿನ್ನ ಕುರಿತು

-ಕೆಂಚನೂರಿನವ

1)
ನೆನಪು
ನಾನು ಮಾತ್ರವಲ್ಲ
ನನ್ನ ಕವಿತೆಗಳೂ
ಹೊರಬಂದಿಲ್ಲ
ನಿನ್ನ
ನೆನಪಿನ ಹಂಗಿನಿಂದ

2)
ನೀನು

ಕವಿ ಕಾಣಲಾಗದ
ಕನಸು
ರವಿ ಅರಳಿಸಲಾಗದ
ಹೂವು

3)
ನಾನು

ಅಲೆಮಾರಿ
ನಾನು
ನಿನ್ನೊಲುಮೆಯೆಡೆಗೆ
ಸದಾ ನನ್ನ ನಡಿಗೆ

4)
ಪ್ರಾರ್ಥನೆ

ಎದೆಯ ಬಯಲಲ್ಲಿ
ಅಲೆಮಾರಿಯ ಡೇರೆಯಿದೆ
ಬಿರುಗಾಳಿಯೆ ಕರುಣೆಯಿರಲಿ
ಅವನಿಲ್ಲಿರುವ ತನಕ

5)
ಪ್ರೀತಿ

ಹಚ್ಚಿಟ್ಟಿದ್ದೇನೆ
ಪ್ರಣತಿಯೊಂದನ್ನ
ನನ್ನ ಮನೆಮುಂದೆ
ಓ ಫಕೀರನೇ,
ಇಲ್ಲಿ
ಉಳಿಯಲಾಗದಿದ್ದರೆ
ಇನಿತು ವಿಶ್ರಮಿಸು
ನನ್ನೆದೆಯ
ಜಗುಲಿ ಮೇಲೆ

-ಕೆಂಚನೂರಿನವ

ಸೋಮವಾರ, ಮೇ 20, 2013

ಅಸ್ಥಿತ್ವದಲ್ಲಿದೆ
ನಿನ್ನ ಕುರಿತಾದ ಪ್ರೇಮ
ನೀ ಜೊತೆಗಿಲ್ಲದಿದ್ದರೂ
ದೇಶವಿಲ್ಲದಿದ್ದರೂ
ಅಸ್ಥಿತ್ವದಲ್ಲಿರುವ
ಟಿಬೇಟಿಯನ್ ಮಂತ್ರಿಮಂಡಲದಂತೆ!

_ಕೆಂಚನೂರಿನವ

ನಾನು ಮಾತ್ರವಲ್ಲ
ನನ್ನ ಕವಿತೆಗಳೂ
ಹೊರಬಂದಿಲ್ಲ
ನಿನ್ನ
ನೆನಪಿನ ಹಂಗಿನಿಂದ

-ಕೆಂಚನೂರಿನವ

ಅವಳ ಹೆಸರು

ನನ್ನ ತೋಳಿನಲ್ಲಿ
ಒಮ್ಮೆ ಹೂವಾಗುವ
ಒಮ್ಮೆ ಮೊಗ್ಗಾಗುವ
ನಿನಗೆ
ಯಾವ ಹೆಸರಿಷ್ಟ?
ನಿನ್ನ
ಬಿರಿದ ಹೂವೆನ್ನಲೆ,
ಬಿರಿವ ಮೊಗ್ಗೆನ್ನಲೆ?
ಹೆಸರಿಡದೆ ಸುಮ್ಮನಿರಲೆ?

-ಕೆಂಚನೂರಿನವ

ಗುರುವಾರ, ಮೇ 16, 2013

ನನ್ನ ಗುರು
ನನ್ನಲ್ಲಿ ತಂಬುವ
ಪಾಪ ಪ್ರಜ್ಞೆಯನ್ನು
ಮಧುಶಾಲೆಯ ಪಡಸಾಲೆಯಲ್ಲಿ
ಸಾಕಿಯ ಕಂಗಳು ಹೋಗಲಾಡಿಸುತ್ತವೆ

ಬುಧವಾರ, ಮೇ 15, 2013

ಧೀರ್ಘವೆನ್ನಿಸುತ್ತವೆ
ನಿನ್ನ ಸಾಂಗತ್ಯವಿಲ್ಲದ
ಸಂಜೆಗಳು
ಉದ್ದುದ್ದ ನೆರಳಿನಂತೆ