ಗುರುವಾರ, ಸೆಪ್ಟೆಂಬರ್ 19, 2013

ನಿನ್ನ ಕಣ್ಣ ರೆಪ್ಪೆಗಳ
ಬಯಸಿದ
ಕಂಬಳಿ ಹುಳದ
ತಪಸ್ಸು ಸಿದ್ಧಿಸಿದೆ ಗೆಳತಿ
ಅದೀಗ ಸುಂದರ ಚಿಟ್ಟೆ

-ಕೆಂಚನೂರಿನವ

ನಂಬಿ ಮಲಗದಿರು ಜೋಗಿ
ಊರಾಚೆಯ ಅಗಸೆ ಬಾಗಿಲಲ್ಲಿ
ಅಸಹನೆಯೆಂಬುದು ಧರ್ಮವಾಗಿರುವ
ಊರುಗಳಿವೆ ಇಲ್ಲಿ

-ಕೆಂಚನೂರಿನವ

ಸೋಮವಾರ, ಸೆಪ್ಟೆಂಬರ್ 16, 2013

ಉಪ್ಪುತಿಂದ ಕಡಲು
ನದಿ ನೀರು
ಕುಡಿಯುತ್ತಲೇ ಇದೆ
ಕಾಲಾಂತರದಿಂದ

-ಕೆಂಚನೂರಿನವ

ಭಾನುವಾರ, ಸೆಪ್ಟೆಂಬರ್ 15, 2013

ಬಾಗಿದ ಮರ
ಅರಳಿಸಿದ ಹೂವು
ನದಿಯ ನಗು !

.  

ಇಷ್ಟಿಷ್ಟೇ ಸುಟ್ಟುಕೊಂಡರೆ
ದೀಪ,ಬೆಳಕು;
ಅಷ್ಟನ್ನೂ ದಹಿಸಿದರೆ
ಬೆಂಕಿ,ದಾವಾನಲ

.

ಬೆಳಕಿನ ಕೆನ್ನಾಲಿಗೆ
ಕತ್ತಲನ್ನು ಇಷ್ಟಿಷ್ಟೇ ತಿನ್ನುವ ಸಮಯ
ಕೋಳಿಯ ಕೂಗು ಕೇಳಿ
ಊರು ಮಗ್ಗಲು ಬದಲಿಸುತ್ತಿದೆ

ಶುಕ್ರವಾರ, ಸೆಪ್ಟೆಂಬರ್ 13, 2013

ಬೇಲಿಯ ಮೇಲೆ
ಹಕ್ಕಿಯ ಹಾಡುಗಾರಿಕೆ
ತೆನೆಯ ನಾಟ್ಯ!
*
ಗಿಡದ ಮೇಲೆ
ಹೂ ಬಂದು ಕುಳಿತು
ಹಾರಿ ಹೋಯಿತು !
*
ಒಲೆ ಮೇಲಿನ
ಹಾಲು, ಉಕ್ಕಿಬಂದಂತೆ
ಅವಳ ನಗು !
*
-ಕೆಂಚನೂರಿನವ

ದಾರಿಯುದ್ದಕ್ಕೂ
ದಾರಿಯದು ತಕರಾರು,
ಒಬ್ಬನೇ ಬರುತ್ತೇನೆಂದಿದ್ದ ನಾನು
ನಿನ್ನ ನೆನಪನ್ನೂ ಜೊತೆಗೆ
ಕರೆತಂದಿದ್ದಕ್ಕೆ

-ಕೆಂಚನೂರಿನವ

ಸೆಪ್ಟೆಂಬರ್ ನ ಸೂರ್ಯ
ಹೊಳೆಯುತ್ತಿದ್ದಾನೆ
ಕೊಕ್ಕರೆ
ಗದ್ದೆ ಬಿಡುವ ಹೊತ್ತು

-ಕೆಂಚನೂರಿನವ

ಈ ಶರದೃತುವಿನಲ್ಲಿ
ನಿನ್ನ ಬೆರಳ ತುದಿಯ
ಪರಿಚಯದ
ನನ್ನ ತೋಟದ
ಗಿಡದ ಎಲೆಗಳು
ಎಳೆಬಿಸಿಲಲ್ಲಿ
ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ
ಕ್ಷಮಿಸು ಗೆಳತಿ
ನಾನು ಅಸಹಾಯಕ

-ಕೆಂಚನೂರಿನವ

ತಪ್ಪಿದ ದಾರಿ
ಅನುಭವ
ಕೊಟ್ಟಿ(ೀ)ತು

-ಕೆಂಚನೂರಿನವ

ಎಲೆಯಿಲ್ಲದ
ಬೆತ್ತಲೆ ಮರ
ತುದಿಯಲ್ಲಿ
ಹಕ್ಕಿಯಿಲ್ಲದ ಗೂಡು

-ಕೆಂಚನೂರಿನವ

ನಾನು ಮತ್ತು ನೆನಪು
ಇಬ್ಬರೂ ಜೊತೆಯಲ್ಲೇ
ನಡೆಯುತ್ತೇವೆ
ಒಬ್ಬರೇ ನಡೆಯಬಹುದಾದ
ದಾರಿಗಳಲ್ಲೂ

-ಕೆಂಚನೂರಿನವ

ಬುಧವಾರ, ಸೆಪ್ಟೆಂಬರ್ 11, 2013

ಎಷ್ಟು ಎತ್ತರಕ್ಕೆ ಬೆಳೆದರೇನು
ಇಷ್ಟು ನೆರಳಾಗದಿದ್ದ ಮೇಲೆ
ಎಷ್ಟು ವಿಸ್ತಾರವಾದರೇನು
ಇಷ್ಟು ತಣಿಸಲಾಗದ ಮೇಲೆ

-ಕೆಂಚನೂರಿನವ

ಫಲಿಸದ ಬೀಜಗಳ ಲೆಕ್ಕವಿಡಬೇಡ
ಭೂಮಿ ಎಂದೂ ತನ್ನೊಡಲಲ್ಲಿ ಫಲಿಸಿದ
ಬೀಜಗಳ ಲೆಕ್ಕವಿಟ್ಟಿಲ್ಲ

-ಕೆಂಚನೂರಿನವ

ಮಂಗಳವಾರ, ಸೆಪ್ಟೆಂಬರ್ 10, 2013

ನೀನು ಇಲ್ಲಿಂದ ಹೋದ ಮೇಲೆ
ಕನ್ನಡಿಗೆ ಹೊದಿಕೆ ಮುಚ್ಚಿದ್ದೇನೆ
ನಿನ್ನ ಹೊರತು ಯಾವ ಬಿಂಬವೂ
ಕನ್ನಡಿಯನ್ನು ಚಂದಗಾಣಿಸುವುದಿಲ್ಲ

-ಕೆಂಚನೂರಿನವ

ಕಾಗೆಗಳನ್ನು ಉಳಿಸಿಕೊಳ್ಳಿ
ಕಡೇ ಪಕ್ಷ
ನೀವು ಮೆಚ್ಚುವ
ಕೋಗಿಲೆಯ ಮೊಟ್ಟೆಗೆ
ಕಾವು ಕೊಡಲೆಂದಾದರೂ
-ಕೆಂಚನೂರಿನವ

ನಿನ್ನ ಪ್ರೀತಿಯಿಂದ ನಾನು
ಇಷ್ಟೆಲ್ಲಾ ಬದಲಾಗಬಲ್ಲೆನಾದರೆ
ಕಲ್ಲಿದ್ದಲಿನ ತುಂಡು
ವಜ್ರವಾಗುವ ಕಥೆಯಲ್ಲಿ
ಅಚ್ಚರಿಯೇನಿದೆ?.

-ಕೆಂಚನೂರಿನವ

ಸಂಜೆಯಾಗುವುದನ್ನೇ
ಕಾಯುತ್ತಿರುತ್ತಾರೆ
ಮಧುಶಾಲೆಯ ಮಿತ್ರರು

ಕಂದೀಲಿನ ಬೆಳಕಲ್ಲಿ
ಮೈ ಸುಟ್ಟುಕೊಳ್ಳುವ
ಉನ್ಮತ್ತ ಧುಂಬಿಗಳಂತೆ
ಉರಿದು ಹೋಗಲು ಸಾಕಿಯೆದುರು

-ಕೆಂಚನೂರಿನವ

ಭಾನುವಾರ, ಸೆಪ್ಟೆಂಬರ್ 8, 2013

ಮಳೆಯ ದಿನಗಳು
ಮುಗಿದವು,
ಕಂಬಳಿಹುಳ
ಎಲೆಮರೆಯಲ್ಲಿ
ಬಟ್ಟೆ ಬದಲಿಸುವ ಸಮಯ

-ಕೆಂಚನೂರಿನವ

ಬೆಕ್ಕಿನ ನಾಲಿಗೆ
ತುದಿಯಲ್ಲಿ
ಚಿಟ್ಟೆರೆಕ್ಕೆಯ ಬಣ್ಣ
*
ಅಸಹಾಯಕ ಹೂವಿನೆದುರಲ್ಲೇ
ನಡೆಯಿತು
ಚಿಟ್ಟೆಯ ಕೊಲೆ
*
ಚಿಟ್ಟೆಯೆಂದರೆ
ರೆಕ್ಕೆಯಿರುವ ಹೂ
*
ಚಿಟ್ಟೆಯಾಗಲು ಸಹಕರಿಸಿದ
ಗಿಡದ ಋಣ
ಪರಾಗ ಸ್ಪರ್ಶದಿಂದ
ಕಳೆಯುವುದು

-ಕೆಂಚನೂರಿನವ

ಚಿಟ್ಟೆ ತಿಂದ ಬೆಕ್ಕು
ತುಟಿಯೊರೆಸಿಕೊಳ್ಳುತ್ತಿದೆ
ರಕ್ತ ಮೆತ್ತಿಕೊಳ್ಳದಿದ್ದರೂ
-ಕೆಂಚನೂರಿನವ

ಹೂ ಎದೆಯ ಮೇಲೆ
ಮೈಮರೆತಿದೆ ಚಿಟ್ಟೆ,
ಮೈಮರೆಯಲು
ಹೂ ಸೃಷ್ಟಿಸಿದವನೇ
ಸೃಷ್ಟಿಸಿದ ಬೆಕ್ಕಿನ
ಹೊಂಚು ತಿಳಿಯದೆ

-ಕೆಂಚನೂರಿನವ

ಶುಕ್ರವಾರ, ಸೆಪ್ಟೆಂಬರ್ 6, 2013

ಇಬ್ಬನಿಕುಳಿತ ಜೇಡನಬಲೆ
ಹೊಗಳುವ ಇವನ
ಪದ್ಯವೂ
ನನ್ನನ್ನು ಸೆಳೆವ ಬಲೆಯಂತೆ
ಇರುವುದರಲ್ಲಿ ಸೋಜಿಗವೇನಿಲ್ಲ ಬಿಡಿ

-ಸೇವಂತಿ

ತುಂಟ ಹನಿಯ ಲೀಲೆಗೆ
ನಾಚಿಕೆ ಗಿಡ ಬಾಗಿದೆ
ಇನ್ನು ರವಿಯೇ ಬರಬೇಕು
ಭಾರ ಇಳಿಸಲು

-ಕೆಂಚನೂರಿನವ

ಮಳೆಯ ಕೊನೆಯ ದಿನಗಳು
ತೆನೆಭಾರ ತಡೆಯಲಾಗದ
ಭತ್ತದ ಸಸಿ ನೆಲಕ್ಕೊರಗಿದೆ
ಬೇಲಿಮೇಲೆ ಕುಳಿತು
ರೆಕ್ಕೆ ಒಣಗಿಸುತ್ತಿರುವ ಹಕ್ಕಿ

-ಕೆಂಚನೂರಿನವ

ಮಂಗಳವಾರ, ಸೆಪ್ಟೆಂಬರ್ 3, 2013

ನಿನ್ನೆ ಸರಿರಾತ್ರಿ ,
ಹೊಳೆವ ನಿನ್ನ ಕಂಡು
ನಾಚಿಕೆಯಿಂದ
ಮುಖ ಮುಚ್ಚಿಕೊಳಲು
ಒಂದೂ ಮೋಡವಿಲ್ಲದೆ
ಹುಣ್ಣಿಮೆ ಚಂದ್ರ
ನಮ್ಮೂರ ಕೆರೆಗೆ ಹಾರಿದ

-ಕೆಂಚನೂರಿನವ