ಶುಕ್ರವಾರ, ಜನವರಿ 31, 2014

ಪದ ಚಮತ್ಕಾರಗಳು
ಲಜ್ಜೆಬಿಟ್ಟು ಕುಣಿಯುತ್ತಿವೆ
ರಂಗಸ್ಥಳದಾಚೆಗೂ
ಕವಿತೆ ಯಾಕೋ
ಚೌಕಿಯಾಚೆಗೂ
ಕಾಲಿಡಲು ಒಪ್ಪುತ್ತಿಲ್ಲ

-ಕೆಂಚನೂರಿನವ

ನೆನಪಿರಲಿ ಗೆಳೆಯಾ
ಪುಸ್ತಕ,ಚರ್ಚೆ
ಪದಗಳ ಅರಿವು
ಮಾತುಗಾರಿಕೆ
ಇದೆಲ್ಲದರಿಂದ
ನೀನು ಕವಿಯಾಗಲಾರೆ
ಹೆಚ್ಚೆಂದರೆ ಪಂಡಿತನಾಗಬಲ್ಲೆ
ನಿನ್ನೊಳಗಿನ ಬೆರಗು
ನಿನ್ನೊಳಗಿನ ಲಜ್ಜೆ
ನಿನ್ನೊಳಗಿನ ಮುಗ್ಧತೆ
ಇವುಗಳಷ್ಟೇ
ನಿನ್ನ ಕವಿಯಾಗಿಸಬಲ್ಲವು

-ಕೆಂಚನೂರಿನವ

ಬುಧವಾರ, ಜನವರಿ 22, 2014

ಯಾರಾದರೂ ಹುಡುಕಿ ತನ್ನಿ
ಮರೆಯುವಂಥ ಔಷಧಿ
ನಾನು ಮಲಗಬೇಕಿದೆ ಇಂದು
ಮಲಗಬೇಕಿದೆ ನನಗೆ

ನನ್ನ ಹಳ್ಳಿ , ನನ್ನ ಹಳ್ಳಿಯ ಮನೆ
ನನ್ನ ಗೆಳೆಯರು, ನನ್ನ ಸಹಪಾಠಿಗಳು
ಇದೆಲ್ಲವನು ಮರೆತು
ಮಲಗಬೇಕಿದೆ ನನಗೆ

ನನ್ನ ಅಳುಕು, ನನ್ನ ಪ್ರೇಮ
ನನ್ನ ಸ್ವಾರ್ಥ , ಅವಳ ಒಳ್ಳೆಯತನ
ಇದೆಲ್ಲವನು ಮರೆತು
ಮಲಗಬೇಕಿದೆ ನನಗೆ

ನನ್ನ ಸೋಲು , ನನ್ನ ಕೆಲಸ
ಈ ನಗರ , ಈ ಅನಾಥ ಪ್ರಜ್ಞೆ
ಇದೆಲ್ಲವನು ಮರೆತು

ಹೆಚ್ಚೇನೂ ಬೇಡ ಇಷ್ಟೇ ಸಾಕು
ಒಂದು ಎಲ್ಲ ಮರೆತ ರಾತ್ರಿ
ಒಮ್ಮೆ ಮಲಗಬೇಕು
ಎಲ್ಲವನು ಮರೆತು
ಈ ಪುಟ್ಟ ಕೋಣೆಯಲ್ಲಿ

-ಕೆಂಚನೂರಿನವ

ಸೋಮವಾರ, ಜನವರಿ 20, 2014

ಸಾಧ್ಯವಾಗುತ್ತಿಲ್ಲ
ಆತ್ಮವಂಚನೆಯಿಲ್ಲದೆ ಬದುಕಲು
ಅದಕ್ಕೆಂದೇ
ಈಗೀಗ ಕಲಿಯಲಾರಂಭಿಸಿದ್ದೇನೆ
ಪಾಪಪ್ರಜ್ಞೆಯೊಡನೆ ಅನುಸಂಧಾನ

-ಕೆಂಚನೂರಿನವ

ಎಲ್ಲಾ ದುಖಾನುಗಳು
ಮುಖ ಮುಚ್ಚಿಕೊಂಡಿವೆ
ಷಹರದಲ್ಲಿ ಹರತಾಲವೆಂದು
ಒಳ್ಳೆಯದೇ ಆಯಿತು
ನಿನ್ನ ಒಲವಿನಂಗಡಿಗೆ
ಬಾಗಿಲುಗಳಿಲ್ಲ
ಎಂದೇ
ನಾನು ಸಾಕಷ್ಟು
ಲೂಟಿ ಮಾಡಲು ಅನುವಾಯಿತು

-ಕೆಂಚನೂರಿನವ

ಅವಳು ವಾಸಿಸುವ ಷಹರದ ಗಲ್ಲಿಗಳಲ್ಲಿ
ಒಬ್ಬ ನತದೃಷ್ಟನ ಕುರಿತ
ಮಾತು ಬಂದರೆ
ಅದು ನನ್ನ ಕುರಿತೇ ಆಗಿರುತ್ತದೆ
ಅನುಮಾನ ಬೇಡ

ಒಂದೂಚಿಲ್ಲರೆ ನೋಟಕ್ಕೆ
ಹೃದಯ ಮಾರಿಕೊಂಡವನ ಕುರಿತು
ಚರ್ಚೆ ನಡೆಯುತ್ತಿದ್ದರೆ
ಅದು ನನ್ನ ಕುರಿತೇ ಆಗಿರುತ್ತದೆ
ಅನುಮಾನ ಬೇಡ

ನಗುವ ಲೇಪಿಸಿದ ಕತ್ತಿಗೆ
ನಗುತ್ತಲೇ ಕುತ್ತಿಗೆಯೊಡ್ಡಿದವನ
ಕುರಿತು ಚರ್ಚೆ ನಡೆಯುತ್ತಿದ್ದರೆ
ಅದು ನನ್ನ ಕುರಿತೇ ಆಗಿರುತ್ತದೆ
ಅನುಮಾನ ಬೇಡ

ಸಾವಿನಲ್ಲೂ ತೆರೆದ ಕಣ್ಣುಗಳಲ್ಲಿ
ಅವಳಿಗಾಗಿ ಕಾಯುತ್ತಿದ್ದವನ ಕುರಿತು
ಚರ್ಚೆ ನಡೆಯುತ್ತಿದ್ದರೆ
ಅದು ನನ್ನ ಕುರಿತೇ ಆಗಿರುತ್ತದೆ
ಅನುಮಾನ ಬೇಡ

ಮಧುಶಾಲೆಯ ಪಡಸಾಲೆಗಳಲ್ಲಿ
ಕುಡಿಯದೇ ಅಮಲಲ್ಲಿ ತೇಲುವವನ
ಕುರಿತು ಚರ್ಚೆ ನಡೆಯುತ್ತಿದ್ದರೆ
ಅದು ನನ್ನ ಕುರಿತೇ ಆಗಿರುತ್ತದೆ
ಅನುಮಾನ ಬೇಡ

-ಕೆಂಚನೂರಿನವ

ಬುಧವಾರ, ಜನವರಿ 15, 2014

ನನ್ನ ಗೋರಿಯ ಮೇಲೆ
ಸತ್ತ ಹೂವಿಡಬೇಡಿ
ಸಾಧ್ಯವಾದರೆ
ಒಂದು ಗಿಡ ನೆಟ್ಟುಬಿಡಿ
ನನ್ನದೇ ಸಾರ ಹೀರಿ
ಒಂದು ಹೂ ಅರಳಿದರೆ
ಅರಳಿಕೊಳ್ಳಲಿ
ದುಂಬಿ ಹಾಡಿಕೊಳ್ಳಲಿ

-ಕೆಂಚನೂರಿನವ

ಭಾನುವಾರ, ಜನವರಿ 5, 2014

ತಿಳಿ ನೀರಕೊಳದಲ್ಲಿ
ಬಿಳಿಯ ದೋಸೆ
ಕಚ್ಚಿ ತಿನ್ನುವ
ಮೀನುಗಳ ಆಸೆಗೆ
ನಸುನಗುತ್ತಿದ್ದಾನ­ೆ
ನೀಲಾಗಸದಲ್ಲಿ
ಹುಣ್ಣಿಮೆಯ ಚಂದ್ರ

-ಕೆಂಚನೂರಿನವ

ಪರಕಾಷ್ಟೆಗೆ ತಲುಪದೆ
ಪ್ರೇಮ,ಮಧು,ಭಕ್ತಿ,ಮೈಥುನ
ಇವ್ಯಾವುದೂ
ಅನುಭವಕ್ಕೆ ದಕ್ಕುವುದಿಲ್ಲ

-ಕೆಂಚನೂರಿನವ

ಒಂದಿಷ್ಟು ಉಳಿದುಹೋಗಿದೆ
ನಿನ್ನುಸಿರ ಘಮಲು
ನನ್ನೆದೆಯ ಹರವಿನಲ್ಲಿ
ನೀನಿಲ್ಲಿಂದ ಹೋದ ಮೇಲೂ
ಹೂ ಮಾಲೆ ಕಟ್ಟಿದವರ
ಬೆರಳ ತುದಿಯಲ್ಲೊಂದಿಷ್ಟು
ಉಳಿದುಹೋದ ಘಮದಂತೆ

-ಕೆಂಚನೂರಿನವ

ಇಲ್ಲಿ ವಿದಾಯ ಎಂಬುದು
ಅನಿವಾರ್ಯವೇ ಗೆಳೆಯ
ಆದರೆ
ಅಂತಿಮವೇನಲ್ಲ
ಇನ್ಯಾವುದೋ
ಅಜ್ಞಾತ ತಿರುವಿನಲ್ಲಿ
ಅಚಾನಕ್
ಸಿಗಲೂಬಹುದು
ನಿರೀಕ್ಷೆಯಿರಲಿ
ಎದೆಯಲ್ಲೊಂದು
ನನ್ನ ಚಿತ್ರ ಉಳಿಸಿಕೊಂಡಿರು

-ಕೆಂಚನೂರಿನವ