ಗುರುವಾರ, ಜನವರಿ 31, 2013

ದೀಪದಂತವಳಿಗೆ

ಗೆಳತಿ....
ಹೋಲಿಸಬಲ್ಲೆ
ನಿನ್ನಂದವನು
ದೇವರ ಮುಂದಿನ
ದೀಪಕ್ಕೆ
ನೀನೇ ಅಲ್ಲವೇನೇ
ನನ್ನ ಬಾಳ
ಬೆಳಗುವ ದೀಪಿಕೆ
-ಶಂಕರ

ಗೆಳತಿ
ಸಾಧ್ಯವಾದರೆ ಕ್ಷಮಿಸು
ನಿನ್ನ ಕನವರಿಕೆಯಲ್ಲಿ
ನಾ ಗೀಚುವ ಸಾಲುಗಳನ್ನ
ನನ್ನ ಗೆಳೆಯರು ಕವನವೆನ್ನುತ್ತಿದ್ದಾರೆ

ಕ್ಷಮಿಸು ಗೆಳತಿ
ಇಷ್ಟೊಂದು ಪದಗಳಿದ್ದರೂ
ನಿನ್ನ ಮುಗುಳ್ನಗೆಗೆ
ಹೋಲಿಕೆಯಾಗುವ ಕವನ
ಬರೆಯಲಾಗದ ನನ್ನ ಅಸಹಾಯಕತೆಯನ್ನ
ಶಂಕರ

ವಿರಹ

ಒಮ್ಮೆ ಬಂದುಹೋಗು
ಗೆಳತಿ
ನೀಡಬೇಕಿದೆ ನಿನಗೆ
ನಿನ್ನ ನೆನಪಲ್ಲೇ
ಮಡಿದ ಸಂಜೆಗಳ ಲೆಕ್ಕ
-ಶಂಕರ

ಮುತ್ತು

ಗೆಳತಿ
ಎಷ್ಟು ಪ್ರಯತ್ನಿಸಿದರೂ
ನೀನಿತ್ತ ಮೊದಲ ಮುತ್ತು
ಮತ್ತದರ ಮತ್ತಿಗೆ
ಹೋಲಿಕೆಯಾಗುವ ಪದ
ಹುಡುಕಿ ಕವಿತೆ ಕಟ್ಟಲಾಗಲಿಲ್ಲ
-ಶಂಕರ

ಬುಧವಾರ, ಜನವರಿ 30, 2013

ಗೆಳತಿ...
ನಿನ್ನ ನಲ್ಲನ
ಕಣ್ಣಲ್ಲಿ
ಕಣ್ಣಿಟ್ಟು ನೋಡುವಾಗ...
ಅವನ ಕಣ್ಣಲ್ಲಿ
ನನ್ನ ಚಿತ್ರ ಕಂಡರೆ...
ಕ್ಷಮೆಯಿರಲಿ
ನಿನ್ನೆದೆಯಲ್ಲಿ
ನಾನಿನ್ನೂ ಉಳಿದಿರುವುದಕ್ಕೆ

ಜೊತೆಯಲ್ಲೇ ನಡೆಯುತ್ತಿದ್ದೆವು
ಹೂವಿತ್ತು,ಹಸಿರಿತ್ತು
ನೆರಳಿತ್ತು, ನಗುವಿತ್ತು
ತಿರುವು ಬಂತು
ದಾರಿಯಲ್ಲಿ ಮಾಯವಾದಳು ಗೆಳತಿ
ಈಗ ನನ್ನ ದಾರಿಯಲ್ಲಿ
ಹಸಿರಿಲ್ಲ,ಹೂವಿಲ್ಲ
ಅವಳ ನನೆಪಿನ
ಮುಳ್ಳುಗಳ ಹೊರತು

ಗೆಳತಿ
ನಿನ್ನ ನೋವಿನ ಮೇಲೊಂದ
ಕವಿತೆ ಬರೆದೆ
ಎಲ್ಲರೂ ಮೆಚ್ಚಿ ಹೊಗಳಿದರು
ನಿನ್ನ ನೋವನ್ನ
ಕವಿತೆಯಾಗಿಸಿ
ಮೆಚ್ಚುಗೆಯನ್ನ
ಅನುಭವಿಸಿದ ನನ್ನ ಕ್ಷಮಿಸು

ಎಡಕ್ಕೂ
ಬಲಕ್ಕೂ
ತೂಗುವ ಮನಸ್ಸು.
ಸೃಜಿಸಿದ ಕವಿತೆಗಳು
ಬರೀ ವಕ್ರ

ಮಂಗಳವಾರ, ಜನವರಿ 29, 2013

ವ್ಹಾಟ್ ಎ "ಡೆಲಿವರಿ"
ಎಂದು ಕಿರಿಚುತ್ತಿದ್ದ
ಕಾಮಂಟೇಟರ್ ಪಾಪ
ಬೆಳಿಗ್ಗೆ
ಹೊಟ್ಟೆ ನೋವಿಂದ
ನರಳುತ್ತಿದ್ದ:)

ಕವನವೆಂದರೆ

ಸರಳವಾಗಿರು ಗೆಳೆಯ
ಪ್ರಾರ್ಥನೆಯಲಿ
ಪ್ರೇಮದಲಿ
ಮತ್ತೆ ನಿನ್ನ
ಕವನದಲಿ
ನಿನ್ನದಲ್ಲದ ಪದವನ್ನು
ತೂರಲೆತ್ನಿಸದಿರು
ಕವಿತೆಯೆಂದರೆ
ನರಳುವುದಲ್ಲ
ಹೂವಿನಂತರಳವುದು
ಸಹಜವಾಗಿ

ಸಾರ್ಥಕ್ಯ

ಸುಟ್ಟ ಬೂದಿ
ಮತ್ತೆ ಮಣ್ಣು
ಸೇರಿಸಿ ಗೋರಿ
ಕಟ್ಟುತ್ತಾರೆ
ಎಲ್ಲಿಂದಲೋ ಹಾರಿ
ಬಂದ ಹಕ್ಕಿ
ಉದುರಿಸಿದ ಬೀಜ
ಮಳೆ ಸುರಿದರೆ
ಗಿಡ 
ಚಿಗುರಿದರೆ ಹೂ

ನನ್ನ ಸಾವಿನ
ಸೂತಕದ ಮನೆಯಲ್ಲೂ
ಪುಟ್ಟ ಕಾಲಿನ ಮಕ್ಕಳು
ಕಣ್ಣಾ ಮುಚ್ಚಾಲೆಯಾಡಲಿ