ಶನಿವಾರ, ಏಪ್ರಿಲ್ 6, 2013

ಶೃಧ್ದೆ

ಒಂಟಿಕಾಲ ಕೊಕ್ಕರೆ
-ಯ ಧ್ಯಾನಕ್ಕೆ
ಒಲಿದಿದ್ದು ಮೀನು
ಸುಮ್ಮನೆ ಮಾತಲ್ಲ
ಒಂಟಿ ಕಾಲಲ್ಲಿ
ಕಾದು ನಿಲ್ಲುವುದೆಂದರೆ
ಸಹನೆ ಬೇಕು
ಗುರಿಯ ಪಯಣಿಗನಿಗೆ

ಶುಕ್ರವಾರ, ಏಪ್ರಿಲ್ 5, 2013

ಹನಿಗೊಂಚಲು-೩

ಬಾರದು ನನಗೆ
ಧಾರೆಯಾಗಲು
ಮಳೆ ನಿಂತಮೇಲೆ
ಮರದಡಿ ನಿಂತವರ
ಪುಳಕಗೊಳಿಸುವ
ಮರದ ಹನಿಯಂತವನು ನಾನು
ಮೈಯೆಲ್ಲ ಕಿವಿ ಬೇಕು
ಹನಿಯ ದನಿ ಕೇಳಲು
*
ತಣಿಯಲು
ಬಯಸಿದ ನೀನು
ದಣಿದೇ ಇರಲಿಲ್ಲ
ತಣಿಯಲಾಗದು ಬಿಡು
*
ಸುಮದಿಂದ ದೂರವಾದೆ
ಘಮವಿನ್ನೂ ಉಳಿದಿತ್ತು
ಎದೆಯಲ್ಲಿ
*
ಇಲ್ಲ ಬಿಡು
ನಿನ್ನೊಂದಿಗೆ ಕಾದಾಡಲು
ಸಮಯವಿಲ್ಲ ನನಗೆ
ಇಲ್ಲಿ
ನನ್ನೊಂದಿಗೆ ನನ್ನ
ಕಾದಾಟವೇ ಮುಗಿದಿಲ್ಲ
*
ತನ್ನ ತೇಯ್ದ
ಕಲ್ಲಿಗೂ ಗಂಧ
ಅಂಟಿಸಿತ್ತು ಕೊರಡು
*
ಪಿಸುನುಡಿ
ಕೇಳಲಿಲ್ಲವೆ?
ಕಣ್ಣಲ್ಲಿ ಕಣ್ಣಿಡು
ಕೇಳೀತು,ಕಂಡೀತು
*
ಕಡಲ ತಡಿಯಲ್ಲಿ
ನಿಂತ ತಳವೊಡೆದ ದೋಣಿಗೆ,
ಕಡಲ ಬಯಕೆ;
ಈಡೆರಲಿಲ್ಲ
ಈಗ ಮಕ್ಕಳು
ಅದೇ ದೋಣಿಯಲ್ಲಿ
ಕುಳಿತು ಸಂಭ್ರಮಿಸುತ್ತಾರೆ
ಕಡಲಲ್ಲೇ ತೇಲಿದಂತೆ

ಕೆಂಚನೂರಿಂದ ಶಂಕರ

ಗುರುವಾರ, ಏಪ್ರಿಲ್ 4, 2013

ತಲ್ಲೀನವಾದಾಗ  ಮನಸ್ಸು
ಅವಳ ಧ್ಯಾನದಲ್ಲಿ
ಹೂದೋಟಂತೆ ಹೃದಯ
ಘಮಘಮಿಸಲು
ಪದಗಳೆಲ್ಲ ಚಿಟ್ಟೆಯಂತಾಗಿ
ನೂರುಬಣ್ಣ ಕವಿತೆಗೆ

ಮಂಗಳವಾರ, ಏಪ್ರಿಲ್ 2, 2013

ಹನಿಗೊಂಚಲು-೨

೧)
ಈಗೀಗ ಬೀಳುವ
ಪೋಲಿ ಕನಸುಗಳಿಗೆ
ನಾನೇ ಕಾರಣ
ಎಂಬುದು
ಅವಳ ಇತ್ತೀಚಿನ ಆರೋಪ

೨)
ಈಗ ಅರಳಿ
ಈಗ ಬಾಡುವ ಹೂವು
ವ್ಯತ್ಯಾಸವೇನಿಲ್ಲ
ಹೀಗೆ ಬಂದು
ಹಾಗೆ ಹೋಗಬೇಕು ನಾವು

೩)
ಪತಂಗವನ್ನ ಕೇಳಿದೆ
ಬೆಂಕಿಯನ್ನು ಪ್ರೀತಿಸಿ
ನಿನ್ನ ಸುಟ್ಟುಕೊಂಡು
ಏನು ಪ್ರಯೋಜನ?
ಪತಂಗ ಹೇಳಿತು
ಪ್ರಯೋಜನ ಬಯಸೋದು
ಪ್ರೇಮವಲ್ಲ,ವ್ಯವಹಾರ

೪)
ಒಮ್ಮೊಮ್ಮೆ ಪತಂಗ
ದೀಪವನ್ನೇ ಆರಿಸುವುದುಂಟು

೫)
ಅವಳು
ನೋವು ಹೇಳಿಕೊಂಡು
ಹನಿಯಾಗಿಸು ಎಂದಳು
ನನ್ನ ಕಣ್ಣು ಹನಿಯಾಗಿತ್ತು

೬)
ಅವಳ ನೋವನ್ನ
ಕವಿತೆಯಾಗಿಸಿದೆ
ಎಲ್ಲರೂ ಮೆಚ್ಚಿದರು
ಅವಳ ಕ್ಷಮಿಸಲಿಲ್ಲ

೭)
ಬೇಲಿಯಲ್ಲಿ ಹೂವರಳಿದರೆ
ದಾರಿ ಹೋಕರಿಗೆ
ಮೈಯೆಲ್ಲ ಕಣ್ಣು

೮)
ಮನೆಯೊಳಗೆ ಹೂಗಂಧ
ಬೇಕೆಂದರೆ
ಅಂಗಳದಲ್ಲಿ ಹೂ
ಅರಳಿಸಬೇಕು

ಕೆಂಚನೂರು ಶಂಕರ

ಸೋಮವಾರ, ಏಪ್ರಿಲ್ 1, 2013

ಹನಿಗಳು

೧)
ಎರಡೇ ಕಣ್ಣು
ಲೆಕ್ಕವಿಲ್ಲದಷ್ಟು ನೋಟ

೨)
ದೃಷ್ಟಿ ಕೊಡಬಹುದು
ದೃಷ್ಟಿಕೋನವಲ್ಲ

೩)
ಕಣ್ಣು ಮುಚ್ಚಿದಾಗಲೆಲ್ಲ
ಕತ್ತಲಾಗುತ್ತದೆ
ಕಣ್ಣು ತೆರೆದಾಗಲೆಲ್ಲ
ಬೆಳಕಿರುವುದಿಲ್ಲ

೪)
ಕತ್ತಲಲ್ಲಿ
ಸಮಾನತೆ ಇದೆ
ಎಲ್ಲವೂ ಕಪ್ಪಾಗುತ್ತದೆ

೫)
ಎಲ್ಲ ಹೂಗಳೂ
ಸೂರ್ಯನ ಪಾಲಲ್ಲ
ಕೆಲವು
ಚಂದ್ರನ ಕಂಡೂ ಅರಳುತ್ತವೆ

೬)
ಬಹಳ ನಾಚಿಕೆ
ಹೂಗಳಿಗೆ
ಬೆಳಕಲ್ಲಿ ಅರಳುವುದಿಲ್ಲ

೭)
ಮೋಡವಾದರೆ ಸಾಕು
ನವಿಲ ಆಸೆಗೆ
ಕಣ್ಣು ಸಾವಿರ

೮)
ಏನೂ ಚಿಗುರುವುದಿಲ್ಲ
ನಿನ್ನಲ್ಲಿ
ಎಂದು ಕವಿ ಜರಿದ
ಕಳ್ಳಿ ಗಿಡ
ಎರಡು ಹೂವರಳಿಸಿ
ಮರುಭೂಮಿಯನ್ನ ಸಂತೈಸಿತು

೯)
ಬಾಗಿ ನಡೆಯುವುದಿಲ್ಲ
ಕಿರೀಟ ಹೊತ್ತವರು
ಬೀಗಿ ನಡೆಯುತ್ತಾರೆ
ಕಾರಣವಿಷ್ಟೆ,
ಕಿರೀಟ
ಜಾರಿ ಬೀಳುವ ಭಯ
ಖಾಲಿ ತಲೆ
ಬಯಲಾಗುವ ಭಯ

೧೦)
ನೀ ಕೆಡವಿ ಹೋಗಿದ್ದರೂ
ಚಿಂತಿಸುತ್ತಿರಲಿಲ್ಲ
ಇನ್ನೊಂದು ಕಟ್ಟುತ್ತಿದ್ದೆ
ನೀನು ನಿರ್ಲಕ್ಷಿಸಿದೆ
ಅದೇ ಬೇಸರ ನನಗೆ

೧೨)
ಮೈ ಸುಟ್ಟರೂ
ಸರಿ
ಪತಂಗದ ಸರಸ
ಬೆಳಕಿನೊಂದಿಗೆ ಮಾತ್ರ

೧೩)
ನಾಚಿ ಓಡುತ್ತಿದ್ದಳು
ಮುಗಿಲಿನಂತೆ
ತಡೆದು ನಿಲ್ಲಿಸಿದೆ
ಗಿರಿಯಾಗಿ
ಒಲವ ಧಾರೆಯಾದಳು
ನನ್ನೆದೆಯೀಗ ಹೂದೋಟ