ಶುಕ್ರವಾರ, ಏಪ್ರಿಲ್ 5, 2013

ಹನಿಗೊಂಚಲು-೩

ಬಾರದು ನನಗೆ
ಧಾರೆಯಾಗಲು
ಮಳೆ ನಿಂತಮೇಲೆ
ಮರದಡಿ ನಿಂತವರ
ಪುಳಕಗೊಳಿಸುವ
ಮರದ ಹನಿಯಂತವನು ನಾನು
ಮೈಯೆಲ್ಲ ಕಿವಿ ಬೇಕು
ಹನಿಯ ದನಿ ಕೇಳಲು
*
ತಣಿಯಲು
ಬಯಸಿದ ನೀನು
ದಣಿದೇ ಇರಲಿಲ್ಲ
ತಣಿಯಲಾಗದು ಬಿಡು
*
ಸುಮದಿಂದ ದೂರವಾದೆ
ಘಮವಿನ್ನೂ ಉಳಿದಿತ್ತು
ಎದೆಯಲ್ಲಿ
*
ಇಲ್ಲ ಬಿಡು
ನಿನ್ನೊಂದಿಗೆ ಕಾದಾಡಲು
ಸಮಯವಿಲ್ಲ ನನಗೆ
ಇಲ್ಲಿ
ನನ್ನೊಂದಿಗೆ ನನ್ನ
ಕಾದಾಟವೇ ಮುಗಿದಿಲ್ಲ
*
ತನ್ನ ತೇಯ್ದ
ಕಲ್ಲಿಗೂ ಗಂಧ
ಅಂಟಿಸಿತ್ತು ಕೊರಡು
*
ಪಿಸುನುಡಿ
ಕೇಳಲಿಲ್ಲವೆ?
ಕಣ್ಣಲ್ಲಿ ಕಣ್ಣಿಡು
ಕೇಳೀತು,ಕಂಡೀತು
*
ಕಡಲ ತಡಿಯಲ್ಲಿ
ನಿಂತ ತಳವೊಡೆದ ದೋಣಿಗೆ,
ಕಡಲ ಬಯಕೆ;
ಈಡೆರಲಿಲ್ಲ
ಈಗ ಮಕ್ಕಳು
ಅದೇ ದೋಣಿಯಲ್ಲಿ
ಕುಳಿತು ಸಂಭ್ರಮಿಸುತ್ತಾರೆ
ಕಡಲಲ್ಲೇ ತೇಲಿದಂತೆ

ಕೆಂಚನೂರಿಂದ ಶಂಕರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ