ಶನಿವಾರ, ಡಿಸೆಂಬರ್ 28, 2013

ಸಂಜೆಯಲ್ಲಿ
ನಾನು
ಮಂದಗತ್ತಲೆಯಿದೆಯೆಂದೆ
ಅವಳು
ಮಂದ ಬೆಳಕಿದೆಯೆಂದಳು
ಎರಡೂ
ಸರಿಯಲ್ಲ
ಅಥವಾ
ಎರಡೂ ಸರಿ
ಅಥವಾ...

-ಕೆಂಚನೂರಿನವ

ನನ್ನಂತ ಅಲೆಮಾರಿಯನ್ನೂ
ನೆಂಟನಂತೆ ಉಪಚರಿಸುವ
ನೀನು ನನ್ನ ಆತ್ಮಬಂಧು
ಅಲ್ಲವೇನೆ ಸಾಕಿ?
*
ಬೆಳಕು
ಸಂಜೆಗತ್ತಲಲ್ಲಿ
ಉಳ್ಳವರ ಮನೆ ಸೇರಿತ್ತು
ದೀಪದ ರೂಪದಲ್ಲಿ
ಕತ್ತಲು
ಅನಾಥರ ನಿಜದ ಬಂಧು
*
ಮಂದಿರದ ಒಳಗೆ
ಮತ್ತು
ಮಧುಶಾಲೆಯ ಒಳಗೆ
ಮಂದ ಕತ್ತಲು
ಕಾರಣವಿಷ್ಟೇ;
ಅಮಲು
ಬೆಳಕಿನಲ್ಲಿ ರುಚಿಸುವುದಿಲ್ಲ

-ಕೆಂಚನೂರಿನವ

ಬುಧವಾರ, ಡಿಸೆಂಬರ್ 25, 2013

ಹತ್ತು ಕೈ
ಕೈಗೊಂದೊಂದು ಆಯುಧ
ಕೊಡುವ ಮೂಲಕ
ನೀನು ಮನುಷ್ಯನಾಗುವ
ಎಲ್ಲಾ ಸಾಧ್ಯತೆಗಳನ್ನು
ಇಲ್ಲವಾಗಿಸಿದವರ ಕುರಿತು
ನನಗೆ ಬಹಳ ಬೇಸರವಿದೆ

-ಕೆಂಚನೂರಿನವ

ಶುಕ್ರವಾರ, ಡಿಸೆಂಬರ್ 20, 2013

ನನಗೆ
ಜ್ಞಾನೋದಯವಾಯಿತು
ಎಂಬಲ್ಲಿಂದ
ನಮ್ಮ
ಅಜ್ಞಾನದೆಡೆಗಿನ ಪಯಣ
ಮೊದಲಾಗುತ್ತದೆ

-ಶಂಕರ ಕೆಂಚನೂರ್

ಚಿತ್ರ : ಡಾ। ಕೃಷ್ಣ ಗಿಳಿಯಾರ್

ಗುರುವಾರ, ಡಿಸೆಂಬರ್ 19, 2013

ಕಿವಿಯಾಗು ಬಾ ಹುಡುಗಿ
ಪಿಸುಮಾತಿನ ಜೊತೆಗೆ
ಬಿಸಿಯುಸಿರು ಉಚಿತ

ಅನುಮಾನ ಬೇಡ
ಗೆಳತಿ ನಂಬಿಕೆಯಿಡು
ರೋಮಾಂಚನವಂತೂ ಖಚಿತ

-ಕೆಂಚನೂರಿನವ