ಬುಧವಾರ, ಅಕ್ಟೋಬರ್ 16, 2013

ಹೂದೋಟ ಮತ್ತು ಕವಿಗೋಷ್ಟಿ
ನಡುವೆ ಆಯ್ಕೆಯಿದ್ದರೆ
ನಾನು ಹೋಗುವುದು
ಹೂದೋಟಕ್ಕೆ
ಹೂವಿಗೆ ಯಾರನ್ನೂ
ಅಕಾರಣವಾಗಿ
ಹೊಗಳುವ ಚಟವಿರುವುದಿಲ್ಲ

-ಸೇವಂತಿ

ನೇರ ಎರಗುವ ಹುಲಿ
ಇವನಷ್ಟು ಅಪಾಯಕಾರಿಯಲ್ಲ
ಇವನು ಕವಿ
ಇವನು ಎರಗುವುದಿಲ್ಲ
ಆವರಿಸುತ್ತಾನೆ ಇಷ್ಟಿಷ್ಟಾಗಿ

-ಸೇವಂತಿ

ಇವನ ಓರಗೆಯವನು
ತನಗಿಂತ ಚಂದ ಬರೆದರೆ
ಈರ್ಷ್ಯೆಗೊಳಗಾಗುವ ಇವನು
ತನ್ನ ಕವಿತೆಯಲ್ಲಿ
ಉದಾರಿಯ ವೇಷ ಹಾಕುವುದು
ನನ್ನ ಪಾಲಿಗೆ ಸೋಜಿಗ!

-ಸೇವಂತಿ

ಪ್ರಾರ್ಥನೆಯಿಂದ
ಊರಿಗೆ ಒಳಿತುಂಟು
ಎನ್ನುವ ಧರ್ಮಗುರು,
ಕವಿತೆಯಿಂದ
ಕ್ರಾಂತಿ ಮಾಡಬಹುದು
ಎನ್ನುವ ಕವಿ;
ಹಸನು ನೆಲದಲ್ಲಿ
ಬೆವರು ಹರಿಸುವವನ
ಮುಂದೆ ಅಪ್ರಯೋಜಕರೆನಿಸುತ್ತಾರೆ
ಕ್ಷಮಿಸಿ

-ಸೇವಂತಿ

ಮಂಗಳವಾರ, ಅಕ್ಟೋಬರ್ 8, 2013

ಊರೆಲ್ಲವನ್ನೂ ಕಂಡ ಕಣ್ಣು
ತನ್ನ ತಾನೇ ಕಂಡಿರಲಿಲ್ಲ
ಕನ್ನಡಿ ಸಿಗುವವರೆಗೂ

-ಕೆಂಚನೂರಿನವ

ಪುಟ್ಟ ಹನಿಯೊಳಗೆ
ನಂದನದ ತುಣುಕು

ಶಿಶಿರನ ಕಣ್ಣೀರು
ಎಲೆ ತುದಿಯಲ್ಲಿ ಮುತ್ತಾಗಿದೆ

ಹಿಮ ಸುರಿವ ಹೊತ್ತು
ಹೂ ಬಟ್ಟಲು
ಮಧುಪಾತ್ರೆಯಂತೆ

-ಕೆಂಚನೂರಿನವ

ಹೌದು,
ಈ ಜಗತ್ತು
ತುಂಬಾ ಚಿಕ್ಕದು
ಎಷ್ಟೆಂದರೆ-
ಒಂದು ಹನಿಯೊಳಗೆ
ಸೇರಿ ಹೊಳೆಯಬಲ್ಲದು

-ಕೆಂಚನೂರಿನವ

ಸೋಮವಾರ, ಅಕ್ಟೋಬರ್ 7, 2013

ಬಿಳಿ ಮುಗಿಲ ಬಾನಿನಲ್ಲಿ
ರವಿಯಂತೆ ನೀ
ಹೂ ಬಿರಿಯೆ ತಂಗಾಳಿ
ಘಮದಂತೆ ನೀ
ಇನ್ನೇನನು ನಾ ಬಯಸಲಿ
ನಿನ್ನನಲ್ಲದೆ
ನಡು ಹಗಲ ದಾರಿಯಲ್ಲಿ
ತಣ್ಣೆಳಲು ನೀ
ಕಡು ದಾಹ ತಣಿಸುವಂತ
ತಣ್ಣೀರು ನೀ
ಇನ್ನೇನನು ನಾ ಬಯಸಲಿ
ನಿನ್ನನಲ್ಲದೆ
ಇಳಿಸಂಜೆ ಬಾನಿನಲ್ಲಿ
ಕೆಂಪಂತೆ ನೀ
ಹೊಳೆದಂಡೆ ಬದಿಯಲ್ಲಿ
ತಂಪಂತೆ ನೀ
ಇನ್ನೇನನು ನಾ ಬಯಸಲಿ
ನಿನ್ನನಲ್ಲದೆ
ಕಾರಿರುಳ ಕಾವಳದಿ
ಕಂದೀಲು ನೀ
ಸರಿರಾತ್ರಿ ಹೊಳೆವಂತ
ತಾರಕೆಯು ನೀ
ಇನ್ನೇನನು ನಾ ಬಯಸಲಿ
ನಿನ್ನನಲ್ಲದೆ

-ಕೆಂಚನೂರಿನವ

ಇಲ್ಲೀಗ ಕೊರೆಯುವ ಚಳಿ;
ನಿನ್ನ ನೆನಪುಗಳು ಬೆಚ್ಚಗಿರಿಸಿವೆ ನನ್ನ

-ಕೆಂಚನೂರಿನವ

ಕಡಲಿನಾಳಕೆ
ಇಳಿಯಲಾಗದ
ಕೆಲವು ಹನಿಗಳು
ಎಲೆಯ ತುದಿಯಲ್ಲಿ
ಬಲೆಯ ನಡುವಲ್ಲಿ
ಮುತ್ತಾಗಿ ಹೊಳೆದವು

-ಕೆಂಚನೂರಿನವ

ನಿಜದ ಜೋಗಿ
ಗಮನಿಸಲಾರ
ಜೋಳಿಗೆಗೆ ಬಿದ್ದುದೇನೆಂದು
ಅವನು
ಗಳಿಸಬಂದವನಲ್ಲ
ಕಳೆಯಬಂದವನು

-ಕೆಂಚನೂರಿನವ

ಶುಕ್ರವಾರ, ಅಕ್ಟೋಬರ್ 4, 2013

...ನನ್ನ ಬದುಕಿನ ಅತ್ಯಂತ ನೋವಿನ ಸಮಯದಲ್ಲಿ ನಾನು ಬಯಸಿದ್ದು ಹಂಚಿಕೊಳ್ಳುವ ಹೆಗಲನ್ನಲ್ಲ ಬದಲಿಗೆ ಒಂದಿಷ್ಟು ಕತ್ತಲು ಮತ್ತು ಏಕಾಂತ ಅದು ಇಂತಹ ನಗರಗಳಲ್ಲಿ ಎಷ್ಟು ದುಬಾರಿಯೆಂಬುದು ಇಲ್ಲಿ ಬದುಕಿದವರಿಗಷ್ಟೇ ಗೊತ್ತು .

ನೀನು ಅಂದರೆ ಬೆಳಕು ಆದ್ದರಿಂದಲೇ ನಾನು ನಿನ್ನೆದುರು ಅಧೀರನಾಗುತ್ತಿದ್ದೆ
ಬೆಳಕು ನನಗೆ ಕೊಟ್ಟಿದ್ದು ಅಪಮಾನ ,ನಿಂದೆಗಳನ್ನೇ ಯಾರಾದರೂ ಬೆಳಕಿನ ಕುರಿತು ಮಾತಾಡಿದಾಗ ನಾನು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೆ
ನನ್ನನ್ನು ಅಪಮಾನಿಸದೆ ಬಹಳಷ್ಟು ಹೊತ್ತು ಬೆಳಕಿನಲ್ಲಿ ಇರಿಸಿಕೊಂಡವಳು ನೀನು ಮಾತ್ರ
ನೀನು ತೊರೆದು ಹೋದಾಗ ನನಗೆ ಮತ್ತೆ ಖಾತರಿಯಾಯಿತು ಬೆಳಕೆಂಬುದು ಶಾಶ್ವತವಲ್ಲ ಅದು ಒಂದು ಕತ್ತಲಿನಿಂದ ಇನ್ನೊಂದು ಕತ್ತಲೆಯ ನಡುವಿನ ವಿರಾಮವಷ್ಟೆ.

ನಿನಗೂ ಗೊತ್ತು ಬೆಳಕನ್ನು ಸೃಷ್ಟಿಸಬೇಕು ಮತ್ತು ಅದನ್ನು ಕಾಪಾಡಿಕೊಳ್ಳಬೇಕು ಹಾಗೆ ಮಾಡಲು ಬಹಳಷ್ಟು ಶಕ್ತಿ ಇತ್ಯಾದಿ ಬೇಕು
ಅವುಗಳಿಲ್ಲದ ನಮ್ಮಂತವರಿಗೆ ಕತ್ತಲೇ ಸಾಥಿ
ಕತ್ತಲನ್ನು ನಾವು ಸೃಷ್ಟಿಸುವ ಮತ್ತು ಕಾಪಾಡಿಕೊಳ್ಳುವ ಅಗತ್ಯವಿಲ್ಲ
ಅದು ತಾನೇ ತಾನಾಗಿ ಸೃಷ್ಟಿಯಾಗುತ್ತದೆ ಅದಕ್ಕೆ ಯಾವುದೇ ಇಂಧನ ಇತ್ಯಾದಿ ಬೇಕಿಲ್ಲ

ಬೆಳಕಿನಲ್ಲಿ ಬದುಕಲು ಕೆಲವು ಅರ್ಹತೆ ಬೇಕು
ಕತ್ತಲಲ್ಲಿ ಹಾಗಿಲ್ಲ ಯಾರು ಬೇಕಾದರೂ ಬದುಕಬಹುದು ಕಣ್ಣಿದ್ದವರೂ ಕಣ್ಣಿಲ್ಲದವರೂ....

ಇಷ್ಟಾಗಿ ಕೂಡಾ ನಾನು ನಿನಗೆ ಆಭಾರಿ ಒಂದಿಷ್ಟು ದಿನ ಬೆಳಕಾಗಿದ್ದು ನಂತರ ಕತ್ತಲೆಯೇ ನಿತ್ಯಸತ್ಯವೆಂದು ತೋರಿದವಳು ನೀನು

-ಕೆಂಚನೂರಿನವ