ಸೋಮವಾರ, ಮಾರ್ಚ್ 31, 2014

ಹನಿ

ಮೂರು ಕಾಗೆ
ಎರಡು ಪಾರಿವಾಳ
ಒಂದಿಷ್ಟು ಸತ್ತ ಹೂಗಳ
ಹೊರತು ಇನ್ನೇನೂ ಕಾಣ ಸಿಗದ
ಈ ನಗರದಲ್ಲಿ ಯಾರಾದರೂ
ಚೈತ್ರ -ವಸಂತ
ಇತ್ಯಾದಿ ಕನಲುವಾಗ
ಮುಸುಡಿಗೆ ಬಾರಿಸಬೇಕು
ಅನ್ನಿಸುತ್ತದೆ ಕ್ಷಮಿಸಿ

-ಕೆಂಚನೂರಿನವ

ಹನಿ

ಈ ನಗರದ
ಎತ್ತರದ ಕಟ್ಟಡದ ತುದಿಯಲ್ಲಿ
ಇರುವ ಬ್ಯಾಚುಲರ್ ರೂಮಿನ
ಹುಡುಗನ ಬಳಿಗೆ
ನಿಮ್ಮ
ವಸಂತ, ಕೋಗಿಲೆ, ಯುಗಾದಿ
ಇದ್ಯಾವುದೂ ತಲುಪುವುದೇ ಇಲ್ಲ
ಅವನ ಪಾಲಿಗೆ ಇಂದು
ಇನ್ನೊಂದು ರಜಾ ದಿನ, ಅಷ್ಟೇ

-ಕೆಂಚನೂರಿನವ

ಕೆಲವು ಹನಿಗಳು

ಅರೆನಿದ್ರೆ
ಅರ್ಧ ಕನಸು
ಅರ್ಧ ಎಚ್ಚರದ
ಈ ಬೇಸಿಗೆ ಮಧ್ಯಾಹ್ನ
ಖಾಲಿ ರಸ್ತೆಯಲ್ಲಿ
ಕೊಳಲು ಮಾರುವ ಹುಡುಗನ
ಕೊಳಲ ಗಾನ
ಅಸಹನೀಯ ಮಧ್ಯಾಹ್ನಕ್ಕೊಂದು
ಮಾಧುರ್ಯ ತುಂಬಿದೆ
*
ಕೊಳಲು ಮಾರುವ ಹುಡುಗನ
ಮಾಧುರ್ಯಕ್ಕೆ ಸೋತು
ನಾನೂ ಒಂದು ಕೊಳಲು ಕೊಂಡೆ
ಈಗ ನಮ್ಮ ಮನೆಯ ಮೂಲೆಯಲ್ಲಿ
ಬಿದಿರು ಕೋಲೊಂದು
ಸುಮ್ಮನೇ ಬಿದ್ದುಕೊಂಡಿರುತ್ತದೆ
*
ನಿಮ್ಮ ಹಣದಿಂದ
ಕೇವಲ ಕೊಳಲು ಕೊಳ್ಳಬಹುದು
ಕೊಳಲು ಮಾರುವ ಹುಡಗನ
ಕೊರಳ ಮಾಧುರ್ಯವನ್ನಲ್ಲ
*
ಕೊಳಲು ಮಾರುವ ಹುಡುಗ
ವಿರಹ ಗೀತೆ ನುಡಿಸುತ್ತಿದ್ದಾನೆ
ಅವನ ಗೆಳತಿ ನೆನಪಿಗೆ ಬಂದಿರಬಹುದು
ನನಗೂ...
*
ಕೊಳಲು ಮಾರುವ ಹುಡುಗ
ಕೊಳಲಿಗೆ ಮಾತ್ರ ಹಣ ಪಡೆಯುತ್ತಾನೆ
ಬೀದಿ ತುಂಬುವ ಅವನ ಹಾಡು
ಸಂಪೂರ್ಣ ಉಚಿತ

-ಕೆಂಚನೂರಿನವ

ದಯವಿಟ್ಟು ಇದನ್ನು ಕೃಷ್ಣ ಇತ್ಯಾದಿಗೆ
relate ಮಾಡಬೇಡಿ
ಇದನ್ನು ಬರೆಯುವಾಗ ನನ್ನ ಮನಸ್ಸಿನಲ್ಲಿ
ಇದ್ದದ್ದು ಕೇವಲ ಕೊಳಲು ಮಾರುವ
ಹುಡುಗನಷ್ಟೇ
ಇದು ಅವನಿಗೆ ಮಾತ್

ಭಾನುವಾರ, ಮಾರ್ಚ್ 30, 2014

ಬರೆಯುವಾಗ ಸಾಧ್ಯವಿದ್ದಷ್ಟು ಕಡಿಮೆ
ಅಕ್ಷರಗಳನ್ನು ಪೋಲು ಮಾಡುವುದು ಒಳಿತು ನಮ್ಮ
ಬರಹ ದೊಡ್ಡದಾಗುತ್ತಾ
ಹೋದಷ್ಟೂ ನಾವು ಪದಗಳನ್ನು ಹುಡುಕಲು ಯತ್ನಿಸುತ್ತೇವೆ
ಹಾಗೆ ಯತ್ನಿಸಿ ಬಂದ ಪದಗಳು ನಮ್ಮವಲ್ಲ
ಅವುಗಳನ್ನು ಬಳಸುವಾಗ
ಸಾಕಷ್ಟು ಎಚ್ಚರ ಬೇಕು ಇಲ್ಲದಿದ್ದರೆ
ಬರಹ ಕೃತಕವಾಗುತ್ತದೆ
ನಾವು ಕೇವಲ ಮಾತು ಉದುರಿಸುವ
ಯಂತ್ರವಷ್ಟೇ ಆಗುವ ಅಪಾಯ
ಇರುತ್ತದೆ
ಹೊಗಳಿಕೆಯ
ಮಾತುಗಳನ್ನು ಬರೆಯುವಾಗ
ಸಾಕಷ್ಟು ಎಚ್ಚರಿಕೆ ಬೇಕು ಪ್ರತಿ
ಮಾತೂ ಲಜ್ಜೆಯ ಕುಲುಮೆ
ಹಾಯ್ದು ಬರಬೇಕು ಇಲ್ಲದಿದ್ದರೆ
ಓದುಗರಿಗೆ ಅದು ಅಸಹ್ಯ
ಎನ್ನಿಸಬಹುದು ಮತ್ತು ನಾವು ಪರಾಕು ಭಟರಂತೆ
ಕಾಣುವ ಅಪಾಯವೂ ಇದೆ
ನಾಲಕ್ಕೇ ಆದರೂ ಸರಿ
ನಮ್ಮದೇ ಪದವನ್ನು ಬರೆಯೋಣ

-ಕೆಂಚನೂರಿನವ

( ಇದೊಂದು ಖಾಸಗಿ ಅಭಿಪ್ರಾಯ
ಆಗಿದ್ದು ಎಲ್ಲರೂ ಒಪ್ಪಲೇಬೇಕೆಂಬ
ಒತ್ತಾಯ ಖಂಡಿತ ಇಲ್ಲ )

ಬಹಳಷ್ಟು
ಹೆಣಗಳ ದಾಟಿಯೇ ಬರಬೇಕು
ಈ ನಶ್ವರತೆಯ ಕಡಲ ಸೇರಲು

-ಕೆಂಚನೂರಿನವ

ಹೊತ್ತು ಹೊತ್ತಿಗೆ
ಬುದ್ಧ, ರೂಮಿ, ಕಬೀರ
ಎಲ್ಲರೂ ಸಿಗುತ್ತಾರೆ
ಪಂಡಿತರ ಅಂಗಡಿಯಲ್ಲಿ

ಕಾಲಕ್ಕೆ ತಕ್ಕಂತೆ
ಕವಿತೆ, ಕತೆ, ಇನ್ನೇನೋ
ಎಲ್ಲವೂ ಸಿಗುತ್ತವೆ
ಪಂಡಿತರ ಅಂಗಡಿಯಲ್ಲಿ

ಅಗತ್ಯಕ್ಕೆ ತಕ್ಕಂತೆ
ಮಾನವತೆ, ಪ್ರೀತಿ, ಕಾಳಜಿ
ಎಲ್ಲವೂ ದೊರೆಯುತ್ತದೆ
ಪಂಡಿತರ ಅಂಗಡಿಯಲ್ಲಿ

ಆದರೂ ಗೊಣಗುತ್ತಾರೆ ಜನ
ಇಲ್ಲೇನೋ ಸರಿಯಿಲ್ಲವೆಂದು
ಎದೆಯ ದನಿ ಕೇಳುತ್ತಿಲ್ಲವೆಂದು

ಬರಿಯ ಬಾಯಿಪಾಠ
ಕಲ್ಲಿನ ಮೇಲಿನ ಮಳೆಯಂತೆ ಎಂದು
ಈ ಪಂಡಿತರಿಗೆ ತಿಳಿಹೇಳಿ ಯಾರಾದರೂ

-ಕೆಂಚನೂರಿನವ

ಶನಿವಾರ, ಮಾರ್ಚ್ 29, 2014

ಹನಿ

ಎಲ್ಲರ ಊಟದ ತಟ್ಟೆಯಲ್ಲೂ
ಇಷ್ಟಿಷ್ಟೇ ಗಾತ್ರದ
ಬೆಳ್ಳಿ ಚಂದಿರ!
ಕೆಲವರು ಸಕ್ಕರೆಯ ಜೊತೆ
ಕೆಲವರು ಉಪ್ಪಿನ ಜೊತೆಗೆ
ತಿಂದು ಮುಗಿಸಿದರು

-ಕೆಂಚನೂರಿನವ

ಹನಿ

ಅಗಸಿಯಲ್ಲೊಬ್ಬ ಫಕೀರ
ಏಕತಾರಿ ನುಡಿಸಿದ
ಜನ ಬಂದು ಸೇರಿದರು
ಆಸ್ಥಾನ ಕವಿಗಳು
ಹೊಟ್ಟೆ ಕಿವುಚಿಕೊಂಡು
ವಿಕಾರ ಕವಿತೆಗಳನ್ನು ಹಡೆದರು

-ಕೆಂಚನೂರಿನವ

ಆಸ್ಥಾನದ ಪಂಜರದಲ್ಲಿ ಕುಳಿತು
ಕಂಠಪಾಠವನ್ನು
ಮಧುರವಾಗಿ ಉಲಿವ ಗಿಳಿಗಿಂತ
ಬೇಲಿಯ ಮೇಲೆ ಕುಳಿತು
ಸ್ವಚ್ಛಂದ ಕೂಗುವ
ಕಾಗೆಯ ಬದುಕು
ಸುಂದರ ಮತ್ತು ಸರಳ

-ಕೆಂಚನೂರಿನವ

ಗುರುವಾರ, ಮಾರ್ಚ್ 27, 2014

ಹನಿ

ಆತ್ಮಸಾಕ್ಷಿ ಕೊಂದುಕೊಂಡವರು
ನಿರ್ಲಜ್ಜ ಸಮರ್ಥನೆಗಿಳಿದರು;
ಸತ್ಯದ ಹೆಣ
ಮಾತಿನ ಮಂಟಪದ
ತೋರಣವಾಯಿತು

-ಕೆಂಚನೂರಿನವ

ಬುಧವಾರ, ಮಾರ್ಚ್ 26, 2014

ಹನಿ

ಪ್ರಿಯ ಗೆಳತಿ
ನಿನ್ನ ದೇಹದ
ಒಂದು ಅಂಗವನ್ನೂ ಬಿಡದೆ
ಹೊಗಳಿ ಬರೆಯುವ ಬದಲು
ನಿನ್ನ ಆತ್ಮ
ನಿನ್ನ ಪ್ರೇಮ
ನಿನ್ನ ಅಂತಃಕರಣಗಳ ಕುರಿತು
ನಾನು
ಒಂದಿಷ್ಟು ಯೋಚಿಸಿದ್ದರೆ
ನಿನ್ನ ಕುರಿತ ಧೋರಣೆಯಲ್ಲಿ
ಕನಿಷ್ಟ ನನ್ನಲ್ಲಿಯಾದರೂ
ಒಂದಿಷ್ಟು ಬದಲಾವಣೆ
ಬರುತ್ತಿತ್ತೋ ಏನೋ

-ಕೆಂಚನೂರಿನವ

ಭಾನುವಾರ, ಮಾರ್ಚ್ 23, 2014

ಹನಿ

ಗೆಳೆಯನ ಸಾವು ,
ಸಂತಾಪ ಸಭೆಗೆ
ಹೊರಟವರು
ಕರವಸ್ತ್ರಗಳಿಗೆ
ಇಸ್ತ್ರೀ ಮಾಡುತ್ತಿದ್ದಾರೆ

-ಕೆಂಚನೂರಿನವ

ಬನ್ನಿ ಬನ್ನಿ
ಹೀಗೆ ಬನ್ನಿ
ಹರಾಜಿಗೆವೆ ಕವಿತೆಗಳು

ಇಷ್ಟಿಷ್ಟೇ ಕತ್ತರಿಸಿ
ಬೇಡದ್ದನ್ನು ಎಸೆದು
ಅಳೆದು ಬಳಸಿದ
ಪದಗಳಿರುವ
ಕವಿತೆ ಹರಾಜಿಗಿದೆ

ಅವಳ ಬೆರಳು
ಅವಳ ಉಗುರು
ಯಾವುದನ್ನೂ ಬಿಡದೆ
ಹೊಗಳಿ ಬರೆದ
ಕವಿತೆ ಹರಾಜಿಗಿದೆ

ನಿಮ್ಮದೇ ಹೌದೆನಿಸುವ
ನೋವನ್ನು ನಲಿವನ್ನು
ಸೇರಿಸಿ ಬರೆದ
ಕವಿತೆ ಹರಾಜಿಗಿದೆ

ಹಸಿವಿನ ಕುರಿತು ಬರೆದ
ಆದರೆ ಹಸಿದವರ
ಹೊಟ್ಟೆ ತುಂಬಿಸದ
ಕವಿತೆ ಹರಾಜಿಗಿದೆ

ಹೌದೆನ್ನಿಸಿ ಅಲ್ಲವೆನ್ನಿಸುವ
ಬೇಕೆನ್ನಿಸಿ ಬೇಡವೆನ್ನಿಸುವ
ನೂರಾರು ಕವಿತೆಗಳು
ಹರಾಜಿಗೆವೆ ಬನ್ನಿ

-ಕೆಂಚನೂರಿನವ

ಹನಿ

ಮರದ ಕೊಂಬೆಗೆಳ ನಡುವೆ
ಸಿಲುಕಿದ
ಚಂದ್ರನ ಕುರಿತ ಕವಿತೆ
ನಾ ಓದುತ್ತಿರುವ ಈ ಸಮಯ
ಚಂದ್ರ, ಇಲ್ಲಿ ಈ ನಗರದಲ್ಲಿ
ಮೊಬೈಲ್ ಟವರ್ ಒಂದಕ್ಕೆ
ಸಿಲುಕಿ ಪರದಾಡುತ್ತಿದ್ದ

-ಕೆಂಚನೂರಿನವ

ಹನಿ

ಟ್ರಾಫಿಕ್ ದೀಪ
ರಾತ್ರಿಯಾದರೆ
ನಗರಗಳಲ್ಲಿ
ಪ್ರತಿ ವೃತ್ತದಲ್ಲೊಬ್ಬ ಚಂದ್ರ
ಕಣ್ಣು ಮಿಟುಕಿಸುತ್ತಾನೆ

-ಕೆಂಚನೂರಿನವ

ಹನಿ

ಈಗಷ್ಟೇ
ಮೀಸೆ ಚಿಗುರುತ್ತಿರುವ
ಯುವಕನ
ಮಿಲನದ ಕುರಿತ ಕವಿತೆ
ಮತ್ತು
ನಲವತ್ತರ ಗಂಡಸಿನ
ಆಧ್ಯಾತ್ಮಿಕ ಕವಿತೆ
ನನ್ನಲ್ಲಿ ನಗುವಲ್ಲದೇ
ಇನ್ನೇನನ್ನೂ ಹುಟ್ಟಿಸುವುದಿಲ್ಲ

-ಕೆಂಚನೂರಿನವ

ಹನಿ

ಬಂಡೆಯ ವಿಸ್ತಾರದುದ್ದಕ್ಕೂ
ಚಲಿಸುವ
ಮೃದುಲ ಹೂವಿನೆಸಳುಗಳು ;
ಅವಳೆರಡು ತುಟಿಗಳು
ನನ್ನೆದೆಯ ಹರವಿನಲ್ಲಿ!

-ಕೆಂಚನೂರಿನವ

ಗುರುವಾರ, ಮಾರ್ಚ್ 20, 2014

ಹನಿಗಳು

ಅಯ್ಯೋ ! ಇರುಳೇ
ಇಷ್ಟು ಬೇಗ ಮುಗಿಯದಿರು
ಒಂದು ಬೊಗಸೆ ಕತ್ತಲು
ಹಗಲಿಗಾಗಿ ಎತ್ತಿಕೊಳ್ಳುತ್ತೇನೆ
ಈ ಕತ್ತಲಿನಲ್ಲಷ್ಟೇ
ನಗೆಯ ಮುಖವಾಡವಿಲ್ಲದ
ಬದುಕು ಸಾಧ್ಯ

*
ತಪ್ಪಿಸಿಕೊಂಡು ಓಡುತ್ತಿದ್ದೇನೆ
ಕತ್ತಲಿನ ಮಡಿಲು ಹುಡುಕಿ
ನಿನ್ನ ನಗೆಹೊನಲಿನಂತ
ಈ ದಟ್ಟ ಬೆಳದಿಂಗಳಿಂದ
ಹಿಂಬಾಲಿಸುತ್ತಲೇ ಇದ್ದಾನೆ
ಶಾಪದಂತೆ
ಈ ಹುಣ್ಣಿಮೆಯ ಚಂದಿರ

*

ಈ ಮಬ್ಬು ಕತ್ತಲೆಯ
ಮಧುಶಾಲೆಯ ತುಂಬಾ
ನಿನ್ನ ನೆನಪಿನಲ್ಲಿ
ಕನವರಿಸಿದೆ
ತಮಾಷೆ ನೋಡು
ನನ್ನ ಮಿತ್ರರಿಗೆ
ಅದು ಅವರ
ನೋವಿನ ಹಾಡಾಯಿತು

*
ಇಂದು ಮಧು ಬೇಡ ನನಗೆ
ಕೊಡುವುದಾದರೆ ಒಂದು ಬಟ್ಟಲು
ಗಾಢ ಕತ್ತಲೆಯನ್ನು ಕೊಡು ಸಾಕಿ
ಅವಳ ನೆನಪು
ಕತ್ತಲಲ್ಲಿ ಹೆಚ್ಚು ರುಚಿಸುತ್ತದೆ

-ಕೆಂಚನೂರಿನವ

ಹನಿಗಳು

ಸಾಕಷ್ಟು ತಯಾರಿ
ಮಾಡಿಯೇ ಬಂದಿದ್ದರೂ
ಕೊನೆಗೆ
ವಿದಾಯದ ಮಾತುಗಳಿಗೆ
ಕಣ್ಣುಗಳನ್ನೇ ಆಶ್ರಯಿಸಿದ್ದಾಯ್ತು
*
ರೈಲು ನಿಲ್ಲದ ನಿಲ್ದಾಣದಲ್ಲಿ
ಮುದುಕರಿಬ್ಬರ ಮಾತುಕತೆ
ನಿಂತ ಗಡಿಯಾರದಲ್ಲಿ
ಕಾಲ ಹಿಂದಕ್ಕೆ ಚಲಿಸುತ್ತಿದೆ

*
ತುಕ್ಕು ಹಿಡಿದ
ದೂರವಾಣಿ ತಂತಿಗಳ ಮೇಲೆ
ಹಕ್ಕಿಗಳೆರಡರ ಸಂಭಾಷಣೆ

*
ದಾಸವಾಳ ಗಿಡದ ಕೆಳಗೆ
ಕೆಲವು ಗುಬ್ಬಿ ಗರಿಗಳು;
ಉದುರಿದ ಹೂವು
ತುಸು ಹೆಚ್ಚೇ ಕೆಂಪಾಗಿದೆ

*

ಗುಬ್ಬಿಯ ಅಕ್ಕಿ ಬಟ್ಟಲು
ಖಾಲಿಯಾಗದೆ ಉಳಿದಿದೆ ;
ಬೆಕ್ಕು ಸಂತೃಪ್ತಿಯಿಂದ
ಮುಖ ತಿಕ್ಕಿಕೊಳ್ಳುತ್ತಿದೆ

*
ಪಂಜರ ತೆರೆದಿಟ್ಟೆ
ಹಕ್ಕಿ
ಮತ್ತೆ ಬಂದು
ಒಳಗೇ ಕುಳಿತುಕೊಂಡಿತು;
ಅಭ್ಯಾಸವಾಗಿದೆ ಹಕ್ಕಿಗೆ
ಪ್ರೀತಿ , ಬಂಧನ , ಗುಲಾಮಿತನ
ಅಥವಾ...

-ಕೆಂಚನೂರಿನವ

ಭಾನುವಾರ, ಮಾರ್ಚ್ 16, 2014

ಹನಿ

ಷಹರದ
ಹೊರ ವಲಯದಲ್ಲೊಂದು
ನೀರವ
ವಿಶಾಲ ರಸ್ತೆ ;
ನಿನ್ನ ನಿರಾಸಕ್ತಿಯಂತೆ,
ಉದ್ದಕ್ಕೂ ಬಿದ್ದುಕೊಂಡಿದೆ

-ಕೆಂಚನೂರಿನವ

ಹನಿ

ಈ ಷಹರದ
ಅಪರಿಚಿತತೆ
ಹೇಗೆಂದರೆ;
ಇಷ್ಟು ವರ್ಷ ಜೊತೆಗಿದ್ದೂ
ನಿಗೂಢವೆನಿಸುವ
ನಿನ್ನ ನಡೆಯಂತೆ

-ಕೆಂಚನೂರಿನವ

ಹನಿ

ಬೇಸಿಗೆಯ ಮಧ್ಯಾಹ್ನ
ಖಾಲಿ ಖಾಲಿ
ರಸ್ತೆಯ ಮೇಲೊಂದು
ಪುಟ್ಟ
ಒಂಟಿ ಚಪ್ಪಲಿ ;
ಕಾಡುವ
ಅನಾಥ ಪ್ರಜ್ಞೆ

-ಕೆಂಚನೂರಿನವ

ಹನಿ

ನಡುರಸ್ತೆಯಲ್ಲಿ
ನಾಯಿಯ ಹೆಣ
ಮಾತ್ರ ಇದೆ ;
ಕೊಂದು ಹೋದವರ
ಆತ್ಮಸಾಕ್ಷಿಯ ಹೆಣ
ಇಲ್ಲೇ ಎಲ್ಲೋ ಇರಬಹುದೆ?

-ಕೆಂಚನೂರಿನವ

ಹನಿ

ಭೀಕರ ಬರಗಾಲ;
ಸ್ಮಶಾನ ವಿಸ್ತರಣೆ
ಕುರಿತ ಚರ್ಚೆಗೆ
ಮತ್ತೆ ಜೀವ !

-ಕೆಂಚನೂರಿನವ

ಹನಿ

ಹೂದೋಟದಲ್ಲಿ
ಗುಬ್ಬಿಗಳ ಇಂಚರ;
ಅಂಗನವಾಡಿ

-ಕೆಂಚನೂರಿನವ

ಹನಿ

ಎಷ್ಟೊಂದು
ಹೂ-ಮೊಗ್ಗುಗಳು

ಶಾಲೆಯ ದಾರಿಯಲ್ಲಿ

-ಕೆಂಚನೂರಿನವ

ಹನಿ

ದೇವರುಗಳು
ಮನುಷ್ಯ ಗುಣ
ಕಲಿಯುತ್ತಿವೆ;
ಪಾಠಶಾಲೆಗಳಲ್ಲಿ

-ಕೆಂಚನೂರಿನವ

ಹನಿ

ಬಾಗಿಲ ಬಳಿ
ಕೊನೆಯ ಅಪ್ಪುಗೆ;
ಕೇಳಿಸಿದ ಸದ್ದು
ಗಡಿಯಾರದ್ದಿರಬಹುದೆ?

-ಕೆಂಚನೂರಿನವ

ಶುಕ್ರವಾರ, ಮಾರ್ಚ್ 14, 2014

ಹನಿ

ಸೋಗಲಾಡಿಗಳು ಕಂಡಲ್ಲೆಲ್ಲಾ
ಮುಖಕ್ಕೇ ಗುದ್ದಿದೆ
ಈಗ
ಮನೆಯ ತುಂಬಾ
ಒಡೆದ ಕನ್ನಡಿಗಳ ರಾಶಿ

-ಕೆಂಚನೂರಿನವ

ಹನಿ

ಪೋಲಿ ಹುಡುಗರ
ಮುಂದೆ
ಹಾದುಹೋಗುವ ಮೂಲಕ
ತನ್ನ ಸೌಂದರ್ಯ
ಇನ್ನೂ ಕುಂದಿಲ್ಲವೆಂದು
ಖಾತರಿಪಡಿಸಿಕೊಳ್ಳುತ್ತಾಳೆ
ಆ ಮೂವತೈದರ ಸುಂದರಿ

-ಕೆಂಚನೂರಿನವ

ಹನಿ

ಸ್ಮಶಾನದ ರಸ್ತೆ
ಪೂರ್ತಿ ಹದಗೆಟ್ಟಿದೆ
ಯಾರೂ
ದೂರು ಕೊಡುತ್ತಿಲ್ಲ!
*
ಹೆಣ
ಹೂಳುವವನ ಮಗು
ಹಸಿವಿಗೆ ಅಳುತ್ತಿದೆ;
ಯಾರಿಗೆ ಸಾವನ್ನು
ಹಾರೈಸಲಿ?
*
ಗೋರಿಯ ಮೇಲೆ
ಹಳದಿ ಹೂ
ಅರಳಿ ನಿಂತಿದೆ,
ಮರು ಜನ್ಮ
ಇರಬಹುದೆ ?

ಶಂಕರ ಕೆಂಚನೂರು

ಗುರುವಾರ, ಮಾರ್ಚ್ 13, 2014

ಹನಿ

ಈ ಹೊಳೆ ದಂಡೆಯಲ್ಲಿ
ಸಂಜೆಯ
ತಂಪು ಗಾಳಿ
ನನ್ನ ಸುತ್ತಲೂ
ಸುಳಿಯುತ್ತಿದೆ
ನೀನಿಲ್ಲದ ಹೊತ್ತಿನಲ್ಲಿ
ಹೂಗಂಧ ಬೀರುವ
ನನ್ನೊಳಗಿನ
ನಿನ್ನ ಹುಡುಕುತ್ತಾ

-ಕೆಂಚನೂರಿನವ

ಹನಿ

ತುಂಬು ತಿಂಗಳಿನಂತ
ಇವಳು
ನನ್ನ ತೋಳುಗಳಲ್ಲಿ
ಇಷ್ಟಿಷ್ಟೇ ಕರಗುವುದಕ್ಕೆ
ಪಕ್ಷಗಳನ್ನು ಕಾಯುವುದಿಲ್ಲ

-ಕೆಂಚನೂರಿನವ

ಹನಿ

ಇದೆಂತಾ
ವಿಚಿತ್ರ ನೋಡು
ನೀನು
ನನ್ನ ಪಾಲಿನ
ಏನು ಎಂಬುದು
ಅರಿವಿಗೆ ಬರುವುದು
ನೀನಿಲ್ಲದ ಗಳಿಗೆಗಳಲ್ಲೇ

-ಕೆಂಚನೂರಿನವ

ಹಾಯ್ಕು

ಬಯಲ ತುಂಬಾ
ತಥಾಗತನ ನಗು;
ತುಂಬು ತಿಂಗಳು

-ಕೆಂಚನೂರಿನವ

ಮಿಂಚುಗಳು

ಕದ್ದಿಂಗಳಿರುಳು,
ರಜೆಯಲ್ಲಿ ಚಂದ್ರ ;
ಹೊರಗೆ
ನಕ್ಷತ್ರಗಳ ತೇರು
ಓಹ್!

ಮಿಂಚು ಹುಳುಗಳು
*
ಕಪ್ಪ ಹಾಳೆಯ
ತುಂಬಾ
ಬೆಳಕಿನ ಬಿಂದುಗಳು ;
ಒಂದೆಡೆ ನಿಲ್ಲುತ್ತಿಲ್ಲ
*
ಕಪ್ಪು ಹೆರಳಲ್ಲಿ
ಬಿಡಿ ಮಲ್ಲೆ ಹೂಗಳಂತೆ;
ಕತ್ತಲಲ್ಲಿ

ಬೆಳಕಿನ ಬಿಂದುಗಳು
*
ಹುಣ್ಣಿಮೆಯನ್ನು
ಬಹಳ ಪ್ರೀತಿಸುತ್ತಿದ್ದೆ
ಕದ್ದಿಂಗಳಲ್ಲಿ

ಮಿಂಚು ಹುಳುಗಳನ್ನು
ನೋಡುವವರೆಗೂ
*
ಕೆಲವರಿಗೆ
ಕದ್ದಿಂಗಳಲ್ಲಿ
ಹೊಳೆವ ತಾರೆ;
ಕೆಲವರಿಗೆ
ಕೇವಲ ಹುಳುವೊಂದರ
ತಿಕದ ಬೆಳಕು
ಇರಲಿ
ಅವರವರು ಕಂಡಂತೆ
ಈ ಬೆಳಕು

-ಕೆಂಚನೂರಿನವ

ಹನಿ

ಅದೆಷ್ಟು
ಉಪ್ಪು ತಿಂದಿದೆಯೋ
ಈ ಹಾಳು ಕಡಲು;
ಎಷ್ಟು ಹೊಳೆಯ
ನೀರು ಕುಡಿದರೂ
ತೀರುತ್ತಿಲ್ಲ ದಾಹ

-ಕೆಂಚನೂರಿನವ

ಹನಿ

ಉಪ್ಪು ಹುಳಿ ಖಾರ
ಎಷ್ಟು ಸುರಿದರೂ
ಅಭಿರುಚಿಯಿಲ್ಲದೆ
ರುಚಿಸುವುದಿಲ್ಲ

-ಕೆಂಚನೂರಿನವ

ಹನಿ

ಇಲ್ಲಿ ನೋಡಿ ,
ಎಲ್ಲರನ್ನೂ ಕಾಯುವವನ
ಮಂದಿರದ ಮುಂದೆ
ಇವನೊಬ್ಬ
ಚಪ್ಪಲಿ ಕಾಯುವವ!

-ಕೆಂಚನೂರಿನವ

ಹಾಯ್ಕು

ಇಗೋ! ಇಲ್ಲೊಂದು
ಸುವಾಸಿತ ಪತಂಗ;
ಗಾಳಿಯಲ್ಲಿ ಹೂ

-ಕೆಂಚನೂರಿನವ

ಹಾಯ್ಕು

ಅಂಗಳದಲ್ಲಿ
ಎದೆಯದೊಂದು ಚೂರು ;
ಅವಳ ಪತ್ರ

-ಕೆಂಚನೂರಿನವ

ಹಾಯ್ಕು

ಬಿಳಿಯ ಹೂವು
ಕೆರೆಯಲ್ಲಿ ಬಿದ್ದಿದೆ;
ನಡು ಹಗಲು

-ಕೆಂಚನೂರಿನವ

ಮುಂಜಾನೆಯ ಬಿಡಿ ಚಿತ್ರಗಳು


ಹನಿ ಭಾರಕ್ಕೆ
ಬಾಗಿದ ಗರಿಕೆಗೆ
ರವಿಯ ಧ್ಯಾನ
*
ಗುಬ್ಬಿ ಹೆಜ್ಜೆ ಗುರುತು
ದಾಸವಾಳ
ಗಿಡದಡಿ
ಗುರುತಿಸಿದ್ದೀರಾ?
*
ಯಾವ ಹೂವೆಂದರೆ
ಆ ಹೂವು
ಹೀರುವ ಹಕ್ಕಿ
ಬೆಕ್ಕಿಗೆ
ಒಂದೆಡೆ ನಿಲ್ಲಲಾಗುತ್ತಿಲ್ಲ
*
ಅಮ್ಮ
ಎಷ್ಟು ಹೊಗೆ
ಹಾಕಿದರೂ
ಮನೆ
ದೇವರು ಕೆಮ್ಮುವುದಿಲ್ಲ!
*
ದೋಸೆಯ
ಪರಿಮಳ ಕೆಡಿಸುವ
ಅಗರಬತ್ತಿ ವಾಸನೆ
*
ಈಗಷ್ಟೇ ಮಿಂದ
ಅವಳ
ಬೆನ್ನು ತೋರಿಸುವ
ತುಂಟ ಕೂದಲು
*
-ಕೆಂಚನೂರಿನವ