ಶನಿವಾರ, ಸೆಪ್ಟೆಂಬರ್ 20, 2014

ಉಂಗುರ ಕಳೆದುಹೋಗಿದೆ;
ಅವಳು ನೆಮ್ಮದಿಯಲ್ಲಿದ್ದಾಳೆ.
ಮರೆವ ವರ ಸಿಗದ ಇವನು
ಕಂಗಾಲಾಗಿ ಅಲೆಯುತ್ತಿದ್ದಾನೆ
-ಕೆಂಚನೂರಿನವ
ಚಳಿಯ ದಿನಗಳು,
ಕಾಲ ಕೆಳಗಿನ
ಗರಿಕೆ
ಹಳದಿಯಾಗುತ್ತಿದೆ;
ಎಲ್ಲ ಕಾಲಕ್ಕೂ 
ಹಸಿರಾಗಿರಲು
ಅದೇನು ನಿನ್ನ ನೆನಪೆ ?
-ಕೆಂಚನೂರಿನವ
ನಿನ್ನ ಸನಿಹವಿಲ್ಲದ
ಚಳಿಯ ದಿನಗಳ
ಧೀರ್ಘ ರಾತ್ರಿ
ಎದೆಯೇ ಕರಗಿ ಹನಿದ ಹಾಗೆ
ಹೊರಗೆ 
ಇಬ್ಬನಿ ಬೀಳುವ ಸದ್ದು
-ಕೆಂಚನೂರು
ನಿರಾಶ್ರಿತನ ಅಳಲು
ಈ ಕಡಲ ದಂಡೆಯ ಮೇಲೆ
ನೀರು ಕಾಗೆಯೊಂದರ ಆಕ್ರಂದನ
ನನ್ನ ಎದೆಯಲ್ಲಿ 
ತರಂಗಗಳನ್ನೆಬ್ಬಿಸುತ್ತಿದೆ
ಮನೆಯ ನೆನಪು
ಯಾಕಿಷ್ಟು ಯಾತನಾಮಯ ?
-ಕೆಂಚನೂರಿನವ
ಬೇಸಿಗೆಯ ನೀರಸ ಮಧ್ಯಾಹ್ನ
ಖಾಲಿ ಮೈದಾನದಲ್ಲಿ
ಗಾಳಿ ಒಯ್ದೆಡೆ ಹಾಯುವ
ಹೂವಿನೆಸಳಿನಂತೆ
ಅವನಿಲ್ಲದ 
ಖಾಲಿ - ಖಾಲಿ ಹಾಸಿಗೆಯಲ್ಲಿ
ಹೊರಳುವ ಇವಳು


-ಕೆಂಚನೂರಿನವ
ಗಾಳಿಗುಂಟ ಹಾರಿ ಹೊರಟ
ರೆಕ್ಕೆ ತೊರೆದ ಹಕ್ಕಿ ಗರಿಯು ನಾನು
ಗಮನವಷ್ಟೇ ನನ್ನದು
ಗಮ್ಯ ನನಗೆ ತಿಳಿಯದು
ಹಿಂಬಾಲಿಸದಿರು ನೀ
ದಾರಿಗುಂಟ ಬರಿದೆ ಅಲೆವ
ನೆರಳು ಕಂಡರಲ್ಲೇ ನಿಲುವ
ತಿರಿದು ತಿನುವ ತಿರುಕ ನಾನು
ಬರಿದೆ ಕನಸು ಕಟ್ಟದಿರು ನೀನು
ಕಡಲ ತುಂಬಾ ನಿಲ್ಲದಲೆವ
ಯಾರೋ ಗುರಿಯಿರಿದೆ ತೇಲಿಬಿಟ್ಟ
ಹಾಯಿದೋಣಿ ನಾನು
ನಂಬಿ ಕುಳಿತು ಪರಿತಪಿಸಬೇಡ


-ಕೆಂಚನೂರಿನವ