ಶನಿವಾರ, ಏಪ್ರಿಲ್ 19, 2014

ಹಾಯ್ಕು

ಒಂದು ಬೇಸಿಗೆಯ ಅಪರಾಹ್ನ
ಹಾಳೆಯೊಂದು
ಬಯಲ ಖಾಲಿತನ
ತುಂಬುತ್ತಿದೆ
ಬಯಲ ಉದ್ದಕ್ಕೂ ಹಾರುತ್ತಾ

-ಕೆಂಚನೂರಿನವ

ಮಂಗಳವಾರ, ಏಪ್ರಿಲ್ 15, 2014

ಹನಿ

ಸ್ನಾನದ ಮನೆಯ ಕನ್ನಡಿತುಂಬಾ
ಕೆಂಪು ಸೂರ್ಯರು
ಅವಳಿಲ್ಲದ ಗಳಿಗೆಗಳಲ್ಲಿ
ಬಿಡದೇ ಕಾಡುತ್ತಾರೆ

-ಕೆಂಚನೂರಿನವ

ಹನಿ

ಅವನದು ರಮ್ಜಾನಿನ ಉಪವಾಸ
ಇವಳದು ಸಂಕಷ್ಟಹರ ಚೌತಿ ವೃತ
ಇಬ್ಬರೂ ಕಾಯುವುದು
ಒಬ್ಬನೇ ಚಂದ್ರನಿಗೆ

-ಕೆಂಚನೂರಿನವ

ಶುಕ್ರವಾರ, ಏಪ್ರಿಲ್ 11, 2014

ಲಹರಿ

...ತಿರಸ್ಕಾರ ಮತ್ತು ಅವಮಾನ ಒಬ್ಬ
ಗಂಡಸು ಭರಿಸಲು ಸಾಧ್ಯವಿಲ್ಲದ
ಎರಡು ವಿಷಯಗಳು ಬಹುಶಃ ನೀನು ಅಂದು ಒಂದೆರಡು ಮಾತುಗಳನ್ನು ಕೂಡಾ ಆಡದೇ ಹಿಂದಕ್ಕೆ
ಕಳುಹಿಸದೆ ಇದ್ದಿದ್ದರೆ
ನಾನು ಇಂದಿಗೂ ನಿನ್ನನ್ನು ಇಷ್ಟು ತೀವ್ರವಾಗಿ
ತಪಿಸುತ್ತಿರಲಿಲ್ಲ ಆದರೆ ನೀನು ಒಬ್ಬ
ಅಪರಿಚಿತನೆಡೆಗೆ
ನಾವು ತೋರಬಹುದಾದ ಕನಿಷ್ಠ
ಸೌಜನ್ಯವನ್ನು ಕೂಡ
ತೋರದೇ ಹೋದೆ ನಿನ್ನ
ಸಾನಿಧ್ಯದಲ್ಲಿ ಅಂದು ನಾನು ಕಳೆದ
ಕೊನೆಯ
ಕೆಲವು ಘಳಿಗೆಗಳನ್ನು ನೆನೆಯುವಾಗ
ನನ್ನ
ಕುರಿತು ನನಗೇ ಒಂದು ರೀತಿಯ
ಅಸಹನೆ ಉಂಟಾಗುತ್ತದೆನಿಜಕ
್ಕೂ ಮನುಷ್ಯ
ಅಷ್ಟು ಧೈನ್ಯನಾಗಲು ಸಾಧ್ಯವೇ ಅನ್ನಿಸುತ್ತದೆ
ಬಹುಶಃ ನಿನ್ನನ್ನು ಕಳೆದುಕೊಂಡ
ಬಗೆಗಿನ ನೋವಿಗಿಂತ ನಿನ್ನಿಂದ
ತಿರಸ್ಕೃತನಾದ
ನೋವೇ ನನ್ನನ್ನು ಹೆಚ್ಚು ತಿನ್ನುತ್ತಿದ್ದಿರ
ಬೇಕು ಯಾಕೆಂದರೆ ಒಬ್ಬ ಮನುಷ್ಯ
ಅವನು ಅವನನ್ನು ಪ್ರೀತಿಸಿಕೊಂಡಷ್ಟ
ು ಇನ್ನೊಬ್ಬರನ್ನು ಪ್ರೀತಿಸಲಾರ
ಇದು ಮನುಷ್ಯನ ಮಿತಿ
ನೀನು ನನ್ನನ್ನು ಪ್ರೀತಿಸುತ್ತೀಯ
ಎನ್ನುವುದನ್ನು ತಿಳಿದಾಗ
ಅದು ನನ್ನ ಕುರಿತ ನನ್ನ
ಅಹಂಕಾರವನ್ನು ತಣಿಸುತ್ತದೆ
ಅದೇ ನೀನು ತಿರಸ್ಕರಿಸಿದಾಗ ಆ
ಅಹಂ ಗೆ
ಪೆಟ್ಟು ಬಿದ್ದು ಮೊದಲು ಸಿಟ್ಟು ಬರುತ್ತದೆ

ಸಿಟ್ಟನ್ನು ಕಾಲವಷ್ಟೇ ತಣಿಸುತ್ತದೆ
ಹಾಗೆ ಸಿಟ್ಟು ತಣಿದು ಹತಾಶೆ
ಉಂಟಾಗುತ್ತದೆ ಆ ಹತಾಶೆ
ಸ್ವಾನುಕಂಪಕ್ಕೆ ತಳ್ಳುತ್ತದೆ ಆ
ಸ್ವಾನುಕಂಪ
ಕೆಲವರನ್ನು ಕವಿಯಾಗಿಸಿದರೆ
ಇನ್ನೂ ಕೆಲವರನ್ನು ಕುಡುಕರನ್ನಾಗಿಸುತ
್ತದೆ ಅಂತಹ ಸ್ವಾನುಕಂಪದಿಂದ
ಹೊರಬಂದವನು ಬದುಕು ಕಟ್ಟಿಕೊಳ್ಳುತ್ತನ
ಾದರೂ ಅವನೊಳಗೆ
ಅದೊಂದು ನೋವು ಗುಪ್ತಗಾಮಿನಿಯಂತೆ
ಹರಿಯುತ್ತಲೇ ಇರುತ್ತದೆ ಬದುಕಿನ
ವಿವಿಧ ಘಟ್ಟಗಳಲ್ಲಿ ಆ ನೋವಿನ ಕುರಿತ
ಭಾವಗಳು ಬದಲಾಗುತ್ತದೆ ಆದರೆ
ಮರೆಯಾಗುವುದಿಲ್ಲ.....
( ಮುಂದುವರೆಯಲೂಬಹುದು )

ಇವಳು
ಈ ನನ್ನ ಪ್ರಿಯ ಸಾಕಿ
ಸಂಜೆಯಾಗುತ್ತಲೇ ತನ್ನ ಸುತ್ತ ನೆರೆವ
ಈ ಎಲ್ಲ ಭಗ್ನ ಹೃದಯಗಳ
ಹೇಗೆ ಸಂಭಾಳಿಸುತ್ತಾಳೆ ನೋಡಿ
ಕೇವಲ ಒಂದು ಭಗ್ನ ಹೃದಯದ ಜೊತೆ
ಬದುಕಲಾಗದ ನನಗೆ
ಇವಳೊಂದು ಮುಗಿಯದ ಅಚ್ಚರಿ

-ಕೆಂಚನೂರಿನವ

ಗುರುವಾರ, ಏಪ್ರಿಲ್ 10, 2014

ಸನ್ಮಾನಿತನ ಭಾಷಣಕ್ಕಿಂತ
ಅಪಮಾನಿತನ ಗೊಣಗುವಿಕೆ
ಹೆಚ್ಚು ಪ್ರಾಮಾಣಿಕವಾಗಿರುತ್ತದೆ

-ಕೆಂಚನೂರಿನವ

ಬುಧವಾರ, ಏಪ್ರಿಲ್ 9, 2014


ಆಹಾ ಸೂಳೆ!,
ಎಷ್ಟೊಂದು ಒಳ್ಳೆಯವಳು ಇವಳು
ವಿಟನೊಬ್ಬನ
ಮುಗಿಯದ ತೀಟೆಗೂ
ಕವಿಯೊಬ್ಬನ
ಒಳ್ಳೆಯತನದ ತೆವಲಿಗೂ
ಸಮಾನಾಗಿ ಒದಗುವವಳು

-ಕೆಂಚನೂರಿನವ

ಸನ್ಮಾನಿತನ ಭಾಷಣಕ್ಕಿಂತ
ಅಪಮಾನಿತನ ಗೊಣಗುವಿಕೆ
ಹೆಚ್ಚು ಪ್ರಾಮಾಣಿಕವಾಗಿರುತ್ತದೆ

-ಕೆಂಚನೂರಿನವ

ಹನಿ

ಕಳೆದುಕೊಳ್ಳುವ ಭಯ
ನಿಜ ಹೇಳದಂತೆ ತಡೆಯಿತು;
ಏಕಾಂತದಲ್ಲಿ ಪಶ್ಚತ್ತಾಪದ ಬೆಂಕಿ
ಇಷ್ಟಿಷ್ಟೇ ಸುಡಲಾರಂಭಿಸಿತು

-ಕೆಂಚನೂರಿನವ

ಮಂಗಳವಾರ, ಏಪ್ರಿಲ್ 8, 2014

ಯುದ್ಧಗಳಿಲ್ಲದ ದೇಶವನ್ನು
ಕಲ್ಪಿಸಿಕೊಳ್ಳಲಾಗದ ಹಿಂಸ್ರಪಶುಗಳು
ಶಾಂತಿಯ ಪಾಠ ಹೇಳುತ್ತಿದ್ದ
ಫಕೀರನನ್ನು ಗಡಿಪಾರು ಮಾಡಿದರು
*
ತಿನ್ನಲು ಅನ್ನವಿಲ್ಲದ ಊರಿನುದ್ದಕ್ಕೂ
ಈಗ ಹತಾರಗಳ ಅಂಗಡಿ
ನೇಗಿಲು ನೋಡಿ ಗೊತ್ತಿಲ್ಲದ ಮಗು
ಆಟಿಕೆಯ ಕೋವಿಗೆ ಹಟ ಮಾಡುತ್ತಿದೆ
*
ರಾಯರದು ಸಂತೃಪ್ತ ಜೀವನ
ಮಗನಿಗೆ ಹೊರದೇಶದಲ್ಲಿ ಕೆಲಸ
ಕೆಲಸವಿಲ್ಲದ ಇವರು
ಹೊತ್ತು ಕಳೆಯಲು
ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ
ದೇಶಭಕ್ತಿಯ ಪಾಠ ಮಾಡುತ್ತಾರೆ

-ಕೆಂಚನೂರಿನವ

ನಿಷ್ಕಲ್ಮಷ ಮನಸ್ಸಿನವನೊಬ್ಬ
ನಿನ್ನ ಸೋಲಿಸಿ ಪಡೆಯುವ
ಗೆಲುವು ತನಗೆ ಬೇಕಿಲ್ಲ ಎಂದು
ಎದುರಾಳಿಯ ತಬ್ಬಿಕೊಂಡ;
ಕಾದಾಟ ನೋಡಬಂದವರು
ಅನುಮಾನಗೊಂಡು
ಇಬ್ಬರನ್ನೂ ಕೊಂದು ಮುಂದೆ
ನಡೆದರು

-ಕೆಂಚನೂರಿನವ

ಗೆದ್ದವನ ಹಿಂದೆ ಮೆರವಣಿಗೆ ನೆರೆದಿತ್ತು
ಸೋತವನ ಪಕ್ಕ
ಯಾರೂ ಕಲಿಯಬಹುದಾದ
ಪಾಠವೊಂದು
ಸುಮ್ಮನೆ ಕುಳಿತಿತ್ತು

-ಕೆಂಚನೂರಿನವ

ಸೋಮವಾರ, ಏಪ್ರಿಲ್ 7, 2014

ಹನಿ

ಅಹಿಂಸೆಯ ಪಾಠ ಓದಿದ ಹುಲಿ
ಹುಲ್ಲು ತಿನ್ನಲಾಗದೆ
ಉಪವಾಸದಿಂದ ಸತ್ತಿತು;
ನೆತ್ತರು ಹರಿದರಷ್ಟೇ ಕೊಲೆಯೆಂದು
ಕಾನೂನು ಪುಸ್ತಕದಲ್ಲಿ ಬರೆದಿತ್ತು

- ಶಂಕರ ಕೆಂಚನೂರು

ಪಾಂಡಿತ್ಯ ಪ್ರದರ್ಶನದ
ಹುಚ್ಚು ಹೆಚ್ಚಾಯಿತು
ಹೃದಯದ ಬದಲು ಮೆದುಳು ಕವಿತೆ
ಶುರುಹಚ್ಚಿತು

- ಶಂಕರ ಕೆಂಚನೂರು

ಹನಿ

ಗೋವಿನ ಹಾಡನ್ನು ಮತ್ತೆ ಮತ್ತೆ
ಓದಿಕೊಂಡೆ
ಭಾವನೆಗಳಿಗೆ ಬಲಿಯಾದರೆ
ಸಾವು ಖಾತರಿ
ಎಂಬುದನ್ನು ಕಂಡುಕೊಂಡೆ
- ಶಂಕರ ಕೆಂಚನೂರು

ಗುರುವಾರ, ಏಪ್ರಿಲ್ 3, 2014

ಕಾಲ
ಇಷ್ಟಿಷ್ಟೇ ಕರಗುತ್ತಿದೆ
ನೀರಿಗೆ ಬಿದ್ದ ಸಾಬೂನಿನಂತೆ;
ಕರುಣೆಯಿಲ್ಲದ ನಿನ್ನ ನೆನಪು ಮಾತ್ರ
ಒಂದಿಷ್ಟೂ ಕರಗುತ್ತಿಲ್ಲ
ಅದೇ ನೀರೊಳಗಿನ ಕಲ್ಲಿನಂತೆ

-ಕೆಂಚನೂರಿನವ

ಬುಧವಾರ, ಏಪ್ರಿಲ್ 2, 2014

ನಮ್ಮದೇ ನೆಲದ ನಮ್ಮ
ದೇವರುಗಳು ಇಲ್ಲಿ ಎರಡನೇ ದರ್ಜೆಯ
ದೇವರುಗಳು

ನಮ್ಮದೇ ಹಿರಿಯರು ಆಡುತ್ತಿದ್ದ ಭಾಷೆ
ಇಲ್ಲಿ ಎರಡನೇ ದರ್ಜೆಯ ಭಾಷೆ

ನಮ್ಮದೇ ನೆಲದ ಆಚಾರ-ವಿಚಾರಗಳು
ಇಲ್ಲಿ ಆಡಿಕೊಳ್ಳಲು ಹಾಸ್ಯದ
ವಸ್ತುಗಳು

ನಮ್ಮದೇ ನೆಲದ ಹುಡುಗರು
ಯಾರದ್ದೋ ಸಂಸ್ಕೃತಿ ಉಳಿಸುವ
ಪರಿಕರಗಳು

ಇವರು ಗತವೈಭವದ ಮಾತಾಡುತ್ತಾರೆ
ತಮ್ಮದೇ ಹಿರಿಯರ ಎದೆಯ ಮೇಲೆ ಎಳೆದ
ಚಪ್ಪಡಿ ಕಲ್ಲುಗಳ ಮರೆತು

-ಕೆಂಚನೂರಿನವ

ಹನಿ

ಹೀಗೆ ಉದ್ದಕ್ಕೂ ಬಿದ್ದುಕೊಂಡಿರುವ
ಈ ಕಪ್ಪು ರಸ್ತೆ
ಅದೆಷ್ಟು ರಕ್ತ ಕುಡಿದಿದೆಯೆಂದು
ಇದರ ನುಣುಪನ್ನು ಹಾಡಿ ಹೊಗಳುವ
ಜನರಿಗೆ ತಿಳಿದಿಲ್ಲ

-ಕೆಂಚನೂರಿನವ

ಕವಿತೆ

ಅಭಿವೃದ್ಧಿ
ಅಂಗಳದ ಪಾರಿಜಾತ
ನೇರ
ರಸ್ತೆಗೆ ಬೀಳುತ್ತದೆ
ಮತ್ತೆ
ವಾಹನಗಳ ಚಕ್ರಕ್ಕೆ
ಬಲಿಯಾಗುತ್ತದೆ
ಇವಳು ಹೆಕ್ಕುವ ಮೊದಲೇ

ಫೋಟೋದಲ್ಲಿ ನಗುವ ಹಿರಿಯರು
ಪ್ಲಾಸ್ಟಿಕ್ ಹೂವಿನಡಿಯಿದ್ದಾರೆ
ಮತ್ತೆ
ಅವರಸಮಾಧಿ ರಸ್ತೆಯಡಿಯಲ್ಲಿ

ಹೌದು
ಭಾರತ ಪ್ರಕಾಶಿಸುತ್ತಿದೆ
ದೊಡ್ಡ ದೊಡ್ಡ ರಸ್ತೆ ದೀಪಗಳಡಿ
ಮತ್ತೆ
ಅದನ್ನು ನಿರ್ಮಿಸಲು ಬಂದ
ಕೂಲಿಗಳ ತಾತ್ಕಾಲಿಕ ಶೆಡ್ಡುಗಳಲ್ಲಿ

-ಕೆಂಚನೂರಿನವ