ಬುಧವಾರ, ಜುಲೈ 31, 2013

ಈ ಮಹಲಿನ ಪತಾಕೆ
ನೂರು ಭಾರಿ ಬದಲಾಗಿದೆ
ಪ್ರತಿ ಭಾರಿ ಬದಲಾದಾಗಲೂ
ಲೆಕ್ಕವಿಲ್ಲದಷ್ಟು
ಮಹಿಳೆಯರು ವಿಧವೆಯರಾಗಿದ್ದಾರ­ೆ
ಮಕ್ಕಳು ಅನಾಥರಾಗಿದ್ದಾರೆ
ಮತ್ತೆ ನೀವು ಹೇಳುತ್ತೀರಿ
ಮಧುಶಾಲೆಗಳನ್ನು ನಾಶಗೊಳಿಸಿ
ಎಂದು

-ಕೆಂಚನೂರಿನವ

ನನ್ನ ಚಿತ್ರಕ್ಕೆ ತುಂಬಲು
ಒಳ್ಳೆಯ ಬಣ್ಣಗಳಿರಲಿಲ್ಲ,
ಕೊನೆಗೆ
ನನ್ನ ವೈರಿಯ ಚಿತ್ರಕ್ಕೆ
ಮಸಿ ಬಳಿದೆ

-ಕೆಂಚನೂರಿನವ

ಮಂಗಳವಾರ, ಜುಲೈ 30, 2013

ಸಣ್ಣ ಕಿಟಕಿ ತೋರಿಸುವುದು
ತನಗಿಂತಲೂ ದೊಡ್ಡ ದೃಶ್ಯ;
ನೀನೊಂದು ತೆರೆದ ಪುಸ್ತಕ
-ಕೆಂಚನೂರಿನವ

ನೀನಿಲ್ಲಿರುವಾಗ ಹಗಲು ಇರುಳಾಗಿ
ಇರುಳು ಹಗಲಾಗುವ ಅಚ್ಚರಿ ;
ನನ್ನ ಸ್ನೇಹಿತರ ಪ್ರಕಾರ
ಬದಲಾಗಿದೆಯಂತೆ ನನ್ನ ದಿನಚರಿ

-ಕೆಂಚನೂರಿನವ

ಸೋಮವಾರ, ಜುಲೈ 29, 2013

ಸಖ...
ಗುಣವನ್ನೂ ಹೆಣ್ಣು ಗಂಡೆಂದು
ಗುರುತಿಸಲು ಆರಂಭಿಸಿದ ದಿನದಿಂದ
ನೀನು ಅಳುವ ಸುಖ ಕಳೆದುಕೊಂಡೆ
ನಾನು ನಗುವ ಸುಖ...
-ಸೇವಂತ

ಕ್ಷಮಿಸು  ಗೆಳತಿ
ಇಷ್ಟೊಂದು ಪದಗಳಿದ್ದರೂ
ನಿನ್ನ ಮುಗುಳ್ನಗೆಗೆ
ಹೋಲಿಕೆಯಾಗುವ ಕವನ
ಬರೆಯಲಾಗದ ನನ್ನ ಅಸಹಾಯಕತೆಯನ್ನ

*

ನಿನ್ನ ತಲುಪುವ ಆಸೆಯೊಂದೇ
ನನ್ನ ಸದಾ ಚಲನೆಯಲ್ಲಿಡಬಲ್ಲ ಇಂಧನ
-ಕೆಂಚನೂರಿನವ

ಕಾಡಿನಲ್ಲರಳಿದ ಹೂ ;
ನಾ ಬರೆದ ನೀ ಓದದ ನಿನ್ನ ಕವಿತೆ

*

ಇಲ್ಯಾರೋ ಹಚ್ಚಿದ ಹಣತೆ
ಅಲ್ಲೆಲ್ಲೋ ಒಸರುವ ಒರತೆ
ದಾರಿ ಸಾಗಿದೆ ಮುಗಿಯದೆ
ನೀನಿಲ್ಲವೆಂಬ ಕೊರತೆಯ ಹೊರತು

*

ನೀನು ದೇವತೆಯಂತವಳು ಅಂದಿದ್ದೇ ತಪ್ಪಾಯ್ತು;
ದೇವತೆ ಮನುಷ್ಯರಿಗೆ ಒಲಿಯದಂತೆ ಮಾಡುವ ಹುನ್ನಾರ ಇಂದಿನದಲ್ಲ ಬಿಡು

*
ನಿನ್ನ ಮನೆಗೆ ದಾರಿತೋರುವ ಕೈಮರ ಎಲ್ಲಿಯೂ ನೆಟ್ಟಿಲ್ಲವೆಂಬ ಸತ್ಯವೇ ಅದನ್ನು ಹುಡುಕಲು ನನಗಿರುವ ಪ್ರೇರಣೆ

*

ಎಲ್ಲ ಫಲಕಗಳನ್ನೂ ತಿರಸ್ಕರಿಸುತ್ತಾ ಮುಂದೆ ಸಾಗಿದೆ, ಈಗ ಆ ದಾರಿಯಲ್ಲಿ ನನ್ನ ಹೆಸರಿನಲ್ಲೊಂದು ಫಲಕ ನೆಡಲಾಗಿದೆಯಂತೆ

*

ನೀನು ಬದುಕಲ್ಲ,
ಬದುಕಿನ ಸುಂದರ ವ್ಯಾಖ್ಯಾನ

*
ಕಡಲಿಗಿಳಿಯಲು ಬಿಡದ
ಮಳೆ-ಗಾಳಿ
ದೋಣಿಯ ಸವತಿಯರು

-ಕೆಂಚನೂರಿನವ

ಶನಿವಾರ, ಜುಲೈ 27, 2013

ಮಹಾನಗರದ ಒಂದಿಷ್ಟು ಬಿಡಿ ಚಿತ್ರಗಳು -೨

ಇಲ್ಲಿ ಒಬ್ಬರಿಗೊಬ್ಬರ ಪರಿಚಯ ಅಗತ್ಯವಲ್ಲ
ಗುರುತಿನ ಪತ್ರಗಳು ಇರಲೇಬೇಕಾದ್ದು ಅಗತ್ಯ

ಇಲ್ಲಿ ಗಂಡ ಹೆಂಡತಿ ಒಂದೇ ಮನೆಯಲ್ಲಿ
ಬೇರೆ ಬೇರೆ ಸಮಯದಲ್ಲಿ ಬದುಕುತ್ತಾರೆ

ಇಲ್ಲಿ ಎಲ್ಲರಿಗೂ ಕನಸುಗಳಿರುತ್ತವೆ
ಆದರೆ ಯಾರೂ ನಿದ್ರಿಸುವುದಿಲ್ಲ

ಇಲ್ಲಿ ಮನೆಗಳಿಗೆ ದೊಡ್ಡ ಕಿಟಕಿಗಳಿದ್ದರೂ
ಅವು ತೆರೆದುಕೊಳ್ಳುವುದೇ ಇಲ್ಲ

ಇಲ್ಲಿ ಎಷ್ಟೊಂದು ಪಾದಗಳಿಗೆ
ಮಣ್ಣಿನ ಗುರುತು ಕೂಡ ಇಲ್ಲ

-ಕೆಂಚನೂರಿನವ

ಪ್ರೇಮ ಫಲಿಸಿದರೆ
ಮಧುಚಂದ್ರ ;
ಪ್ರೇಮ ವಿಫಲವಾದರೆ
ಮಧುಶಾಲೆ
*

ಮಧುಶಾಲೆಯಲ್ಲಿ ಕಾಲದ ಕಾಲು ಮುರಿದಿದೆ
ಇಲ್ಲಿ ಹಗಲು ರಾತ್ರಿಗಳು ಮಬ್ಬಿನಲ್ಲೇ ಕಾಲ ಕಳೆಯುತ್ತವೆ

*

ಊರಾಚೆಯೇ ಇರಲಿ ಬಿಡಿ ಮಧುಶಾಲೆ
ಪರಿತ್ಯಕ್ತರು ನಾವು ಊರಾಚಯೇ ಇದ್ದು ಬಿಡುತ್ತೇವೆ
ನಿಮ್ಮ ಪಾವಿತ್ರ್ಯದ ಸೂತ್ರ ನಮ್ಮ ಲೆಕ್ಕಕ್ಕೆ ಹೊಂದದು
ಲೆಕ್ಕಾಚಾರಗಳನ್ನು ಮೀರಿದವರು ನಾವು
ನೀವು ಹೇಳುವಂತೆ ಕುಡುಕರು ನಾವು

-ಕೆಂಚನೂರಿನವ

ಬೆಂಕಿಯಿಂದ
ಬೆಂಕಿಯಾರಿಸಲು ಸಾಧ್ಯವಿಲ್ಲವೆಂದು
ಗೊತ್ತಿದ್ದೂ
ಈ ಮಧುವಿಗೆ ಮೊರೆಹೋದ ನಾನೀಗ
ನಿನ್ನ ನೆನಪು ಮತ್ತು ಮಧುವಿಗೆ
ದಾಸ
-ಕೆಂಚನೂರಿನವ

ಗುರುವಾರ, ಜುಲೈ 25, 2013

ಮಹಾನಗರಿಗಳಲ್ಲಿ

ಇಲ್ಲಿ ಏನನ್ನೂ ಬೆಳೆಯುವುದಿಲ್ಲ
ಆದರೂ ಎಲ್ಲವೂ ಸಿಗುತ್ತದೆ
ಹಣವಿರಬೇಕಷ್ಟೇ

ಇಲ್ಲಿನ ಶೃಂಗಾರಕ್ಕೆಂದೇ ಬೆಳೆಯಲಾಗುತ್ತೆ
ಹಳ್ಳಿಗಳಲ್ಲಿ ಬಣ್ಣ-ಬಣ್ಣದ ಹೂಗಳು

ಮೊದಲು ಹಸಿರು ಬೆಳೆಯುತ್ತಿದ್ದ ನೆಲದಲ್ಲಿ
ಈಗ ಎತ್ತರಕ್ಕೆ ನಗರಗಳು ಬೆಳೆಯುತ್ತಿವೆ

ಇಲ್ಲಿ ರಾತ್ರಿಯಾಗುತ್ತದೆಯಾದರು
ಕತ್ತಲಾಗುವುದಿಲ್ಲ

ತಿಂಗಳಬೆಳಕು ಬೀಳದ ಊರಿನಲ್ಲಿ
ಮೂನ್ ಲೈಟ್ ಡಿನ್ನರ್ ಬಡಿಸುವ ಹೋಟೆಲುಗಳಿವೆ

-ಕೆಂಚನೂರಿನವ

ಬಸ್ ಸ್ಟ್ಯಾಂಡಿನ ಕೆಲವು ಬಿಡಿ ಚಿತ್ರಗಳು

ನಿಲ್ದಾಣದಲ್ಲಿ ನಿಂತ ಕೊನೆಯ ಬಸ್ಸಿನ
ಕೆಳಗೆ
ಬೀದಿನಾಯಿಯ ಬೆಚ್ಚಗಿನ ನಿದ್ದೆ

ಇನ್ನೂ ಬಾರದ ಬಸ್ಸಿಗೆ
ಕಾಯುವವನೊಬ್ಬ
ಇನ್ನೂ ಹೊರಡದ ಬಸ್ಸಿಗೆ ಬಯ್ಯುವವ
ಮತ್ತೊಬ್ಬ

ಎಲ್ಲೆಲ್ಲೋ ಹೋಗುವವರಿಗೆಂದು ಕಟ್ಟಿದ
ನಿಲ್ದಾಣ
ಎಲ್ಲೂ ಹೋಗದ ಬಿಕ್ಷುಕಿಗೆ ಮನೆ

ಮೂರನೇ ಜಾವದಲ್ಲಿ ಹರಡಿ ಬಿದ್ದ ಕಸಕ್ಕೆ
ಬೀದಿ ಮಕ್ಕಳ ಕಚ್ಚಾಟ

ಎದ್ದೇಳಿ ಯುವಕರೇ ಅನ್ನುವ ಬೋರ್ಡಿನ
ಕೆಳಗೆ ಎಚ್ಚರವಾಗದಿರಲೆಂದು 
ಕುಡಿದು ಮಲಗಿರುವ ಪೋಸ್ಟರ್
ಹಚ್ಚುವ ಹುಡುಗ

ಬಸ್ಸು ಹತ್ತುವ ಗಡಿಬಿಯಲ್ಲಿ
ಬಿದ್ದುಹೋದ
ಮಗುವಿನ ಒಂಟಿ ಚಪ್ಪಲಿ

-ಕೆಂಚನೂರಿನವ

ನಿನ್ನ ಕೆಂಪು ರಕ್ತ
ಬಿಳಿಯ ಹಾಲಾಯ್ತು
ನಾ ಹೀರಿದೆ
ಅದು ಮತ್ತೆ
ನನ್ನ ಮೈಯಲ್ಲಿ
ರಕ್ತವಾಗಿ ಹರಿಯಿತು

ನೀನು ಹರಿಸಿದ ವಾತ್ಸಲ್ಯವದೇಕೋ
ನನ್ನೆದೆಗೆ ಹರಿದದ್ದು
ವಾತ್ಸಲ್ಯವಾಗಲೇ ಇಲ್ಲ
ಇದೆಲ್ಲಿಂದ ಬಂತು
ನನ್ನೆದೆಗೆ
ಈ ಕ್ರೌರ್ಯ?

ಬುಧವಾರ, ಜುಲೈ 24, 2013

ಹಸಿವು ಮತ್ತು ಹತಾಶೆ ಸಜ್ಜನಿಕೆಯ ಬಟ್ಟೆ
ಹೊದಿಸಿ ಮುಚ್ಚಿಡಲಾಗದ ಬೆಂಕಿಯಂತವು

ಸೋಮವಾರ, ಜುಲೈ 22, 2013

ಆಶೆಗಳಿಲ್ಲದೆ ಬದುಕಬೇಕೆಂಬುದು ಕೂಡ
ಆಶೆಯೇ ಹೌದು ಹಾಗೆ ಬದುಕಲಾಗದೆ
ಅನುಭವಿಸಿದ್ದು ನಿರಾಶೆಯೂ ಹೌದು

ಯಾರಾದರೂ ಭ್ರಮೆಯಿಲ್ಲದೆ
ಬದುಕುತ್ತಿದ್ದೇನೆ ಎಂದರೆ
ಅವರು ಭ್ರಮೆಯಿಲ್ಲದೆ ಬದುಕುತ್ತಿದ್ದೇನೆ
ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ
ಎಂದರ್ಥ

ಹೀಗೆಲ್ಲಾ ತಲೆಬುಡವಿಲ್ಲದ
ಆಲೋಚನೆಗಳನ್ನ ನನ್ನಲ್ಲಿ ಹುಟ್ಟಿಸುವ
ಬದುಕೆಂಬ ಗುರುವೇ ನಿನಗೆ ಶರಣು
-ಕೆಂಚನೂರಿನವ

ಪಾತ್ರದೊಳಗೇ ಹರಿವ ನೀರಿಗೆ
ಹೊಸದೇನೂ ಎದುರಾಗದು ,
ಅದೇ ದಾರಿ ಅದೇ ಪ್ರಪಾತ
ತನಗಿಂತ ಮೊದಲಿನವರು
ರಚಿಸಿದ ಕೊರಕಲು

ಪ್ರಯೋಜನವಿಲ್ಲ ಅಲ್ಲೇ ಹರಿದು
ದಿಕ್ಕುತಪ್ಪಿ ಹರಿಯಬೇಕು
ಹೊಸದಾರಿ ಹುಟ್ಟಿಸಲು
ಪ್ರವಾಹವಾಗಬೇಕು
ಆಗಲಷ್ಟೇ ಸಾಧ್ಯ
ಜಡ್ಡುಗಟ್ಟಿದ ಬಂಡೆ ಸರಿಸಲು

ಸಮುದ್ರ ಸೇರುವುದೇ
ಗುರಿಯೆಂದುಕೊಂಡರೆ
ಹೊಸದೇನೂ ಹುಟ್ಟದು

ಇಂಗಿದರೂ ಸರಿ ಅರ್ಧದಲಿ
ಹೊಸಹಾದಿಯ ಕನಸಲ್ಲಿ
ಮತ್ತೆ ಮುಂದುವರಿಸುವುದು
ಹಿಂಬಾಲಿಸಿ ಬರುವ ನೀರು

ಕಡಲೊಂದೇ ಗುರಿಯೆಂದುಕೊಂಡ
ನದಿಗಳೇ
ಒಮ್ಮೆ ಹರಿದು ನೋಡಿ ಪಾತ್ರದಾಚೆಗೂ

-ಕೆಂಚನೂರಿನವ

ಶನಿವಾರ, ಜುಲೈ 20, 2013

ನೆನಪಿದೆಯೇನೆ ಗೆಳತಿ ನಿನಗೆ ?
ನೆನಪಿದೆಯೇನೆ?
ಚಿಕ್ಕ-ಚಿಕ್ಕ ಗಲ್ಲಿಗಳಲ್ಲಿ
ದೊಡ್ಡ-ದೊಡ್ಡ ಕನಸುಗಳ
ಬೆವೆತ ಅಂಗೈಗಳ ನಡುವಿನಲ್ಲಿಟ್ಟುಕ
ೊಂಡು
ಓಡಾಡಿದ್ದು ನೆನಪಿದೆಯೇನೆ?

ಚಿಕ್ಕ-ಚಿಕ್ಕ ಖುಷಿಗೂ
ಕಣ್ಣು ಹನಿಯುವವರೆಗೂ
ದೊಡ್ಡದಾಗಿ ನಕ್ಕಿದ್ದು
ನೆನಪಿದೆಯೇನೆ?

ಬಂದ ಬಸ್ಸು ಬೇಕೆಂದೇ ಬಿಟ್ಟು
ನಿನ್ನ ಸಾಂಗತ್ಯಕ್ಕೆ ಹಂಬಲಿಸುತ್ತಾ
ಇನ್ನೊಂದು ಬಸ್ಸಿಗೆ ಕಾದಿದ್ದು
ನೆನನಪಿದೆಯೇನೆ ನಿನಗೆ ?

ಇಬ್ಬರೂ ಸೇರಿ ಕಟ್ಟಿದ
ಪಾರಿಜಾತದ ಮಾಲೆ,ನೀನು
ಇನ್ನೊಬ್ಬನ ಕೊರಳಿಗೆ ಹಾಕಿದ್ದು
ಸರಿಯೇನೆ ಗೆಳತಿ ಸರಿಯೇನೆ?
-ಕೆಂಚನೂರಿನವ

ಅವಳು ನನ್ನೊಳಗೆ ಅರಳುವ ಹೂವು;
ಸಂಜೆ ಬಾಡಿದರನೇಂತೆ
ಮತ್ತೆ ಮುಂಜಾವಿಗೆ ಹೊಸತು
-ಕೆಂಚನೂರಿನವ

ಒದ್ದೆ ನೆಲದ
ಮೇಲೊಂದು ತೊಟ್ಟು ಕಳಚಿಕೊಂಡ
ಪಾರಿಜಾತ;
ಅವಳಿನ್ನೂ ನನ್ನೆದೆಯಲ್ಲೇ ಇದ್ದಾಳೆ
-ಕೆಂಚನೂರಿನವ

ನಿನ್ನ ಘಮವ ಹೊತ್ತುತಂದ ಗಾಳಿ
ನಿನ್ನಂತೆಯೇ,
ಹೆಚ್ಚು ಹೊತ್ತು ನಿಲ್ಲಲಿಲ್ಲ
-ಕೆಂಚನೂರಿನವ

ತನ್ನನ್ನು ತಾನು ಪ್ರೀತಿಸಿಕೊಳ್ಳಲಾ­
ಗದವನಿಗೆ ಯಾವ ಕನ್ನಡಿಯೂ ಚಂದದ ಚಿತ್ರ
ತೋರಿಸದು

ಬುಧವಾರ, ಜುಲೈ 17, 2013

ಎಲ್ಲೂ ಹೋಗದ ರಸ್ತೆ
ಎಷ್ಟೋ ಜನರನ್ನು ಎಲ್ಲೆಲ್ಲೋ ಸೇರಿಸಿದೆ
*
ರಸ್ತೆಬದಿಯ ಮರದ ನೆರಳಿಗೆ ಮರುಳಾದರೆ;
ಮನೆಸೇರುವುದು ಕಷ್ಟ
*
ಕಾಲುದಾರಿ ಮಾಡು
ಮುಂದೆ ಹೆದ್ದಾರಿಯಾಗುತ್ತದೆ
*
ಮನೆ ತಲುಪಬೇಕೆ?
ಒಳ್ಳೆಯ ದಾರಿಯಲ್ಲಿ ಹೋಗು
*
ಹೊಸ ರಸ್ತೆಯುದ್ದಕ್ಕೂ ಹಳೆಯ ಹೆಜ್ಜೆಯ
ಅಸ್ಪಷ್ಟ ಗುರುತುಗಳು
*
�ಉಲ್ಲಾಸ ದಾರಿಯಲ್ಲಿದೆ;
ಕೆಟ್ಟದಾರಿ ತಲುಪಿಸಿದ ಗುರಿ
ಖುಷಿ ಕೊಡುವುದಿಲ್ಲ;
*
ಸುಮ್ಮನೇ ನಿಂತ ಕೈಕಂಬ;
ದಾರಿಹೋಕರಿಗೆ ದಿಕ್ಕುತೋರಿಸುತ್ತದೆ
*
ಗುರಿಯ ಖಾತರಿ
ಯಾರೂ ಕೊಡಲಾಗದು;
ಪಯಣವನ್ನ ಪ್ರೀತಿಸು ನಡೆದ
ಖುಷಿಯಾದರೂ ಜೊತೆಗಿರಲಿ
-ಕೆಂಚನೂರಿನವ

ಸೋಮವಾರ, ಜುಲೈ 15, 2013

ಸಾಲು ಸಾಲು ಸಾಲುಗಳು


ಎಲ್ಲವನ್ನು ಹೇಳಿಯೂ ಏನನ್ನೂ ಹೇಳದ
ನಿನ್ನ ಮಾತು ,ಏನೂ ಹೇಳದೆ
ಎಲ್ಲವನ್ನೂ ಹೇಳುವ ನಿನ್ನ ಕಣ್ಣು ;
ಎರಡೂ ನಿನ್ನದೇ ಎನ್ನುವುದು ನನ್ನ
ಪಾಲಿಗೆ ಅಚ್ಚರಿ !

ಎಚ್ಚರದ ನಡಿಗೆ,ಕೊಡಮಾಡಲಿಲ್ಲ
ಇಷ್ಟೂ ಅಚ್ಚರಿ ;
ಎಚ್ಚರ
ತಪ್ಪಿದರಷ್ಟೇ ಅಚ್ಚರಿಗೀಡಾಗಬಹುದು೨


ಬಟವಾಡೆಯಾಗದೆ ಉಳಿದುಹೋದ
ಒಂದು ಕಾಗದದಂತೆ;
ಪ್ರತಿಯೊಬ್ಬರಲ್ಲೂ
ಒಂದೊಂದು ಅವ್ಯಕ್ತ ಪ್ರೇಮ ಕಥ

ಕೆಟ್ಟ ಕವನದಲ್ಲೊಂದೆರಡು ಒಳ್ಳೆಯ
ಸಾಲುಗಳು;
ನಿನ್ನ ಸಹವಾಸ ನನ್ನ ಕೆಟ್ಟ ಬದುಕಿನ
ಒಳ್ಳೆಯ ದಿನಗಳು

ನಿನ್ನ ಪ್ರೀತಿಗೆ ಪ್ರಾಣ ಕೊಡಲಾರೆ;
ನಿನ್ನ ಪ್ರೀತಿಗೆ ಬದುಕು ಕೊಡಬಲ್ಲೆ

-ಕೆಂಚನೂರಿವ

ಶನಿವಾರ, ಜುಲೈ 13, 2013

ಇಬ್ಬನಿಗೆ ಹೊಸ ಹೊಳಪು ಕೊಟ್ಟ ಸೂರ್ಯ ರಶ್ಮಿಯೇ ಇಬ್ಬನಿಯನ್ನು ಆವಿಯಾಗಿಸುವುದು , ನಿನ್ನ ಪ್ರೀತಿಸುವವರೆಗೂ ಸೋಜಿಗವಾಗಿತ್ತು ನನ್ನ ಪಾಲಿಗೆ .

-ಕೆಂಚನೂರಿನವ

ಬೇಸರಿಸದಿರು ಗೆಳೆಯ ನಿನ್ನಿಂದ ಖುಷಿಯ
ಪಡೆದವರು ನೋವ ಕೊಟ್ಟರೆಂದು;

ಉಪ್ಡಿನ ಕಡಲಿಗೆ ಸಿಹಿಯ
ನೀರೆರೆದು ಸಿಹಿನೀರ ಪಡೆದವರಿಲ್ಲ
..
-ಕೆಂಚನೂರಿನವ

ಶುಕ್ರವಾರ, ಜುಲೈ 12, 2013

ಬರಿಗಾಲಿನ ಬೈರಾಗಿ
-ಯ ಜೋಳಿಗೆಗೆ
ಹೃದಯ ತಂದು ಸುರಿದಳು

ಒಮ್ಮೆ ಕತ್ತೆತ್ತಿ ಕೂಡ ನೋಡಲಿಲ್ಲ
ಆ ಉರಿಗಣ್ಣಿನವನು

ಅದೆಷ್ಟು ನರಳುವ ಹೃದಯಗಳಿವೆಯೋ
ಆ ಇಷ್ಟುದ್ದದ ಜೋಳಿಗೆಯಲ್ಲಿ
-ಕೆಂಚನೂರಿನವ

ಬುಧವಾರ, ಜುಲೈ 10, 2013

ಯಾರೂ ಇಲ್ಲದ ಮನೆಯ
ಅರೆತೆರೆದ ಕಿಟಕಿಗಳು
ಸುಮ್ಮನೇ
ರಸ್ತೆ ದಿಟ್ಟಿಸುತ್ತವೆ

ಮೊನ್ನೆ ಮಂದಿರ
ಬೀಳದೇ ಹೋಗಿದ್ದು
ಅವನಿಗೆ ಬೇಸರ ತರಿಸಿತಂತೆ.
ಬಯಲಾಗುವ ಆಸೆಯವನಿಗೆ

ಜಗದ ಭ್ರಮೆ
ಕಳೆವ ಪಣ ತೊಟ್ಟು
ಹೊರಟ.
ಈಗವನಿಗೆ
ಭ್ರಮೆ ಕಳಚಿದೆಯಂತೆ

ತುಳುಕದಿರುವುದೆಲ್ಲವೂ
ತುಂಬಿರುವುದಿಲ್ಲ, ಒಮ್ಮೊಮ್ಮೆ

ಮಾಡಿನಿಂದ
ತೊಟ್ಟಿಕ್ಕುವ ಹನಿ
ಇರುಳ ನೀರವದಲ್ಲಿ
ಬಹಳ ದೊಡ್ಡಸದ್ದು

ಹಸಿದ ಹುಡುಗನಿಗೆ
ಅನ್ನದ ಪದ್ಯ ಹೇಳಿದೆ,
ಹಸಿವಿಂಗಲಿಲ್ಲವಂತೆ
-ಕೆಂಚನೂರಿನವ

ಶನಿವಾರ, ಜುಲೈ 6, 2013

ತನು ನಿನ್ನದು
ಮನ ನಿನ್ನದು ಎಂದು
ಬರಿದೇ ಹಾಡಿದರೇನು ಬಂತು ,
ನೀನು ನನ್ನವಳೆಂಬ ನಂಬಿಕೆ
ಮನದಿ ಮೊಳೆಯದೆ
ನಾನು ನಿನ್ನವನೆಂಬ ಅಹಮಿಕೆಗೆ
ಅರ್ಥವೆಲ್ಲಿದೆ?
-ಕೆಂಚನೂರಿನವ

ಗುರುವಾರ, ಜುಲೈ 4, 2013

ಬದುಕು
ಕಾರ್ಗತ್ತಲಿನ ಕಾನು
ನೀನು
ಬೆಳಕಾಗಬಲ್ಲ ಭಾನು

ಸಮೃದ್ಧಿಯೆಂಬುದು ಶುದ್ಧ ಮೈಮರೆವು
ಏನೂ ಬೆಳೆಯದ ನೆಲವದು
ಹಸಿವಿಗಷ್ಟೇ ಕ್ರಿಯಾಶೀಲತೆಯ ಅಪ್ಪ/­
ಅಮ್ಮನೆನಿಸಿಕೊಳುವ ಭಾಗ್ಯ
-ಕೆಂಚನೂರಿನವ

ಮಾರ್ಪಾಟು
ಕಟುಕನೊಬ್ಬ ಬದಲಾಗಿ ಸನ್ಯಾಸಿಯಾಗಿ
ಪುರಾಣ ಬರೆದ ಕಥೆ ಹೇಳುತ್ತೀರಿ
ರೌಡಿಯೊಬ್ಬ ಬದಲಾಗಿ ಚಿಂತಕನಂತೆ ನಿಜ
ಹೇಳಿದರೆ ಚಡಪಡಿಸುತ್ತೀರಿ
-ಕೆಂಚನೂರಿನವ

ಒಂದು ಕಿಡಿ ಕಾಡ ನುಂಗಬಲ್ಲುದಾದರೆ
ಒಂದು ಕುಡಿ ಕಾಡಾಗಿ
ಹೊಮ್ಮಲಾಗದೇಕೆ?

ನೀವು ಹಣತೆಯನ್ನಷ್ಟೇ ಆರಿಸಬಲ್ಲಿರಿ,
ಬೆಳಕನ್ನಲ್ಲ
ಇನ್ನೊಂದು ಹಣತೆ ಹಚ್ಚುವ ಶಕ್ತಿ
ನನ್ನಲ್ಲಿರುವ ತನಕ
-ಕೆಂಚನೂರಿನವ

ಅಲ್ಲೊಬ್ಬಳಿಗೆ ಒಸಗೆ
ಇಲ್ಲೊಬ್ಬನಿಗೆ ಮುಪ್ಪು
ಇವಳ ಪ್ರಾಯವ
ಮುಚ್ಚಿಡುವ ಯತ್ನದಲಿ ಇವಳಮ್ಮ
ಕಪ್ಪುಗಳಲಿ ಮುಪ್ಪು ಬಚ್ಚಿಡಲೆಳಸುವ
ಇವಗೆ ಇಪ್ಪತ್ತರಲಿದ್ದಾಗ ಬಿಳುಪೆಂದರೆ
ಮೆಚ್ಚು
ಈಗ ಕಾಲನ ಗಾಲಿಯ ಅಚ್ಚು ಮುಖದಲ್ಲಿ
ಯಾರೇನೆ ಮಾಡಿದರೂ
ಅದರದೇ ವೇಗ
ಅದರದೇ ಓಘ
ಕಾಲದ ಗಾಲಿಗೆ
-ಕೆಂಚನೂರಿನವ

ನಾಕು ಮುತ್ತು
ಒಂದೆರಡು ಅಪ್ಪುಗೆ
ಕಥೆ'ಬಯಸಿದರೆ' ಮಿಲನ
ನಿರ್ದೇಶಕನ ಬಯಕೆಗೆ
ನಿರ್ಮಾಪಕ ಅವಳಿಗೆ ಕಟ್ಟಿದ ಬೆಲೆ
ಹತ್ತು ಲಕ್ಷ
*
ಕತ್ತಲೆ ಕೋಣೆ
ಪರದೆ ಮೇಲೊಂದು ಚಿತ್ರ
ನೋಡಲು ಹೆಚ್ಚೆಂದರೆ ಐವತ್ತು
ವಿವಿಧ ಕೋನಗಳಲಿ ಸೆರೆಹಿಡಿದ
ಅವಳ ಬಾಗು-ಬಳುಕುಗಳು
ಒಳಗೆ ಹುಟ್ಟಿಸುವ ತುಮುಲಗಳು ಉಚಿತ
*
ಸಂಜೆ
ಜನತಾ ಬಾಜಾರಿನೆದುರು
ಸುಖ ಕೈ ಬೀಸಿ ಕರೆಯುತ್ತದೆ
ಹೆಚ್ಚೇನಿಲ್ಲ ಇನ್ನೂರೈವತ್ತು,
ರೂಮು ಬಾಡಿಗೆ
ಗಂಟೆಗೆ ನೂರು
*
ಇಲ್ಲ ಬಿಡಿ ನೀವು ಹುಡುಕುವ ಕಾವ್ಯ
ನನ್ನಲ್ಲಿಲ್ಲ ಕ್ಷಮಿಸಿ
-ಕೆಂಚನೂರಿನವ

ಇಂಚುಗಳ ಲೆಕ್ಕ
ಸರಿಯಾಗಿರದಿದ್ದರೆ ಸೌಂದರ್ಯವಲ್ಲ
ತೂಕ ಮೀರಬಾರದು
ಮಾತಲ್ಲ,ದೇಹ.
ನಾಲಿಗೆ
ಸಡಿಲವಿದ್ದಷ್ಟೂ ಹತ್ತಿರ ಖ್ಯಾತಿಯ ಎತ್ತರ
ಅದೆನೋ ಆತ್ಮಸೌಂದರ್ಯವಂತೆ
ಬಿಡಿ,ಅದು ಕಂಡಿದ್ದು ಕಡಿಮೆ
ನಮ್ಮ ಕ್ಯಾಮೆರಾದಲ್ಲಿ
-ಕೆಂಚನೂರಿನವ