ಶನಿವಾರ, ಜೂನ್ 22, 2013

ನಟ್ಟಿರುಳ ಬೆಕ್ಕುಗಳ ಹೇಷಾರವಕ್ಕೆ
ಕಡುವಿರಹಿಯ ನಿಟ್ಟುಸಿರಿನ ಪ್ರತಿಕ್ರಿಯೆ

-ಕೆಂಚನೂರಿನವ

ತಡರಾತ್ರಿವರೆಗೂ
ಧೋ ಎಂದು ಸುರಿದ ಮಳೆ
-ಯ,ಕೆಲವೇ ಹನಿಗಳು ಉಳಿದಿವೆ
ಗರಿಹುಲ್ಲಿನ ಮನೆ ಮಾಡಿನ ಮೇಲೆ
ಮುಂಜಾವಿನ ರಶ್ಮಿಯಲ್ಲಿ
ವಜ್ರದಂತೆ ಹೊಳೆಯಲು
-ಕೆಂಚನೂರಿನವ

ಶುಕ್ರವಾರ, ಜೂನ್ 21, 2013

ಸದ್ದಿಲ್ಲದೆ ಕಾಯತ್ತಿದೆ ಕಾರಿರುಳು
ಗೆಜ್ಜೆಕಾಲಿನ ಪುಟ್ಟಮಗು
ಹೊರಳಿ ಮಲಗುವಾಗಿನ ಗೆಜ್ಜೆ ಸದ್ದಿಗೆ
ಕಿವಿಯಾಗಲೆಂದು

-ಕೆಂಚನೂರಿನವ

ಗೂಡಿಂದ ಜಾರಿಬಿದ್ದ
ಮರಿಯಾಗಬೇಕಿದ್ದ ಹಕ್ಕಿಯ
ಮೊಟ್ಟೆ

ಒಂದು ಅಪೂರ್ಣ ಕವಿತೆ

-ಕೆಂಚನೂರಿನವ

ಶರದೃತುವಿನಲ್ಲೊಂದು ಎಲೆ
ಸದ್ದಿಲ್ಲದೆ ಕಳಚಿಬಿತ್ತು ಮರದಿಂದ,
ನನ್ನ ಪ್ರೇಮಕತೆ
-ಯಲ್ಲ ಇದು

-ಕೆಂಚನೂರಿನವ

ಬುಧವಾರ, ಜೂನ್ 19, 2013

ನಡುಹಗಲ ಕಣ್ಣು ಕುಕ್ಕುವ ಬೆಳಕಿದೆ
ಈ ಹೊಳಪುಗಣ್ಣಿನ ಹುಡುಗಿಗೆ
ನಾ ಹೇಗೆ ಕಣ್ಣು ಕೂಡಿಸಲಿ
ಇವಳ ನೋಟಕೆ

-ಕೆಂಚನೂರಿನವ

ಮಂಗಳವಾರ, ಜೂನ್ 18, 2013

ಸೋಮವಾರ, ಜೂನ್ 17, 2013

ಪಗಡೆಯಾಡುವೆಯಾದರೆ ಹೇಳು
ಪಣಕ್ಕಿಡುವೆ ಹೃದಯವನು
ಪಂದ್ಯ ಸೋಲಲೆಂದೇ!!

-ಕೆಂಚನೂರಿನವ

ಶುಕ್ರವಾರ, ಜೂನ್ 14, 2013

ಬದಲಾಗದ ಬದುಕಿನ ಬಣ್ಣವಿಲ್ಲದ
ಕೆಲವು ಪುಟಗಳು -೨
"ನೋಡು,ನಾನಿರುವಂತ
ೆಯೇ ಹೇಗಿದ್ದೇನೋ ಹಾಗೆ
ಒಪ್ಕೊಳ್ಳೋಕೆ ಆದ್ರೆ
ಒಪ್ಕೊ ಇಲ್ಲಾಂದ್ರೆ
ಬಿಟ್ಟು ಬಿಡು ಈಗೇನೋ ಹೊಸದು ನಾ
ಬದಲಾಗ್ತೀನಿ ಹಾಗಾಗ್ತೀನಿ
ಹೀಗಾಗ್ತೀನಿ ಅನ್ನೋದು ಸುಲ್ಬ
ಆದ್ರೆ ಸತ್ಯ ಏನ್ ಗೊತ್ತಾ?
ನಾನು ನೀನಾಗೋಕಾಗಲ್ಲಿ
ನೀನು ನಾನಾಗೋಕು ಆಗಲ್ಲ
ಯಾಕಂದ್ರೆ ನಾನೇ ಬೇರೆ
ನೀನೇ ಬೇರೆ ಅರ್ಥ ಮಾಡ್ಕೋ
ನಾವಿಬ್ರೂ
ಮದುವೆ ಆದ್ವಿ ಅನ್ತಾನೇ ಇಟ್ಕೋ ಆಗ
ನಾನು ಇದೇ ತರ ತುಟಿಗೆ ಅರ್ಧ ಕೇಜಿ
ಲಿಪ್ಸ್ಟಿಕ್ ಹಚ್ಕೊಂಡು ಇದೇ ಹೋಟಲಿನ
ರಿಷೆಪ್ಶನ್ ನಲ್ಲಿ ನಿಂತ್ಕೊಂಡು ಹಲ್
ಕಿರೀತ ನಿಂತಿದ್ರೆ ತಡ್ಕೊಳ್ಳೋಕೆ
ಆಗುತ್ತಾ ನಿನ್ನ್ಹತ್ರ?.
ಹೋಗ್ಲಿ ಕೆಲಸ ಬಿಟ್ಟು ಮನೆಲಿರೋಣ
ಅಂದ್ರೆ ನಿನ್ನ ದುಡಿಮೆಲಿ ಇಬ್ರು ಬದ್ಕೋಕೆ
ಆಗುತ್ತಾ? ಅದೂ ಇಲ್ಲ ಹಿಗಿರೋವಾಗ
ಸುಮ್ನೆ ಹುಚ್ಚುಚ್ಚಾಗಿ ಪ್ರೀತಿ ಪ್ರೇಮ
ಅಂದ್ಕೊಂಡು ತಿರ್ಗಾಡೊದ್ರಲ್ಲಿ
ಯಾವ ಅರ್ಥ ಇದೆ ಹೇಳು ?, ಸುಮ್ನೆ
ನಾನು ಹೇಳೋದು ಕೇಳು.
ಬದುಕು ಇನ್ನೂ ತುಂಬಾ ಇದೆ ನಿನ್ನ
ಕಲ್ಪನೆಯ ಹೆಂಡ್ತಿ ನಾನಾಗೋಕೆ
ಸಾಧ್ಯಾನೆ ಇಲ್ಲ.ನಾನು ಬದುಕನ್ನ
ನೋಡೋ ರೀತಿನೇ ಬೇರೆ
ನೀ ನೋಡೊ ರೀತಿನೇ ಬೇರೆ.ಇಷ್ಟಕ್ಕ
ನನ್ನ ಬಗ್ಗೆ ಇರೋದು ಪ್ರೀತಿಯಲ್ಲ
ಒಂದು ರೀತಿ ಆಕರ್ಷಣಯಷ್ಟೇ ನಿನ್ನಲ್ಲಿ
ಇಲ್ದೇ ಇರೋ ಧೈರ್ಯ ನನ್ನ ಹತ್ರ ಇದೆ
ಅದಕ್ಕೇ ನಿಂಗೆ ಒಂಥರಾ ಆಕರ್ಷಣೆ ನನ್ನ
ಕಂಡ್ರೆ ಇದನ್ನೇ ಪ್ರೀತಿ
ಅಂದ್ಕೊಂಡು ಸುಮ್ನೆ ಜೀವಮಾನ
ಪೂರ್ತಿ ಒದ್ದಾಡ್ಬೇಡ ಊರಲ್ಲಿ ಒಳ್ಳೆ
ಹುಡುಗಿ sಸಿಗ್ತಾಳೆ ಮದುವೆಯಾಗಿ
ಚೆನ್ನಾಗಿರು ನಿನ್ನ
ಸಮಸ್ಯೆಯೇನು ಗೊತ್ತಾ?
ನೀನು ಅಗತ್ಯಕ್ಕಿಂತ
ಹೆಚ್ಚು ಒಳ್ಳೆಯವನು ನಿನ್ನನ್ತವರಿಗೆ
ನನ್ನಂಥವರು ಸೆಟ್ ಆಗಲ್ಲ
ನನಗೆ ಬದುಕಿನಿಂದ ದೊಡ್ಡ ದೊಡ್ಡ
ನಿರೀಕ್ಷೆಗಳಿವೆ ಅವನ್ನೆಲ್ಲ ನಿನ್ನಿಂದ FULFIL
ಮಾಡೋಕೆ ಆಗೋಲ್ಲ ಅದಕ್ಕೆ
ಬಿಟ್ಟುಬಿಡು ನನ್ನ .ಅಂದಹಾಗೇ ನಂಗೆ
ದುಬೈಯಲ್ಲಿ ಕೆಲಸ ಆಗಿದೆ ಈ ತಿಂಗಳ
ಕೊನೇಲಿ ಹೋಗ್ತಾ ಇದೀನಿ
ಅಲ್ಲೂ ಇದೇ ಕೆಲಸ ವ್ಯತ್ಯಾಸ ಅಂದ್ರೆ
ಸಂಬಳ ಮಾತ್ರ .
ಖಂಡಿತಾ ನಿಂಗೊಂದು ಕೆಲ್ಸ
ಹುಡುಕ್ತೀನಿ ಇದೆಲ್ಲ ಕೆಲ್ಸಕ್ಕೆ ಬರದ್ದನ್ನ
ಯೋಚ್ನೆ ಮಾಡಿ
ಲೈಫ್ ಹಾಳ್
ಮಾಡ್ಕೋಬೇಡ .ಒಂದು ಪಾಸ್ಪೋರ್ಟ್
ಮಾಡಿಸ್ಕೋ .
ಎದ್ದೇಳು ಹೋಗೋಣ ಬಾ
-ಕೆಂಚನೂರಿನವ

ಹೇಗೆ ಹೊಗಳಲಿ ನಿನ್ನ
ನೀ ಈ ಜಗದ ಅದ್ಭುತವೆಂದು
ನೀ ನನ್ನ ಅದ್ಭುತ ಜಗವಾಗಿರುವಾಗ
ಇಹ-ಪರ ಮೀರಿದ ಅಲೌಕಿಕ ಅನುಭೂತಿ
ನೀನು
-ಕೆಂಚನೂರಿನವ

ಇಂದು ಮಂದಾನಿಲವು
ಹೊಸ ಘಮವ ಬಯಸುತಿದೆ
ತಾ ಸುಳಿವ ಹಾದಿಗೆ ಹಂಚಲು
ಕರುಣಿಸಬಾರದೆ ನೀನು
ಒಂದಿಷ್ಟು ನಗುವರಳಿಸಿ

-�ಕೆಂಚನೂರಿನವ

ಗುರುವಾರ, ಜೂನ್ 13, 2013

ಸಂತೆಯಲ್ಲೊಂದು ಏಕಾಂತ
ಸೃಷ್ಟಿಸಿಕೊಳ್ಳಲು ನಿನಗಷ್ಟೇ ಸಾಧ್ಯ
ಓ ಬರಿಗಾಲ ಫಕೀರನೇ...
ನನಗೂ ಹೇಳಿಕೊಡು
ಜಗದ ನೆಂಟನಾಗಿಯೂ
ಅಂಟುಳಿಸಿಕೊಳ್ಳದೆ ಬದುಕುವುದನ್ನ
ಖಾಲಿ ಜೋಳಿಗೆಯೊಂದಿಗೆ
ಹೊರಡಬೇಕು ನಾನು ಅಲೆಮಾರಿಯಂತೆ,
ಥೇಟ್ ನಿನ್ನಂತೆ

-ಕೆಂಚನೂರಿನವ

ಇಂದು ಮಂದಾನಿಲವು
ಹೊಸ ಘಮವ ಬಯಸುತಿದೆ
ತಾ ಸುಳಿವ ಹಾದಿಗೆ ಹಂಚಲು
ಕರುಣಿಸಬಾರದೆ ನೀನು
ಒಂದಿಷ್ಟು ನಗುವರಳಿಸಿ

-�ಕೆಂಚನೂರಿನವ

ಬುಧವಾರ, ಜೂನ್ 12, 2013

ಇವಳ ಕಣ್ಣಬೆಳಕಿನ ಸಾಲದಲ್ಲಿ
ಹೊಳೆಯುತ್ತಾನೆ
ಬೆಳ್ಳಿ ಚಂದಿರ
ರವಿಯೊಡನೆ ಮುನಿಸುಂಟಾದ ದಿನ
ಇಲ್ಲ ಬಿಡಿ
ನಿಮಗೆ ಸಿಗಲಾರದು
ಇವಳ ಕಣ್ಣ ಹೊಳಪಿನ ಅಂದಾಜು
-ಕೆಂಚನೂರಿನವ

ನಟಿಸು ನೀನು ಒಂದಷ್ಟು ಹೊತ್ತು
ಮರೆತಂತೆ ನನ್ನನು
ಹೊಸದಾಗಿ ಪರಿಚಯಿಸಿಕೊಳುವೆ
ನಿನಗೆ
ನನ್ನನ್ನು ನಾನು
-ಕೆಂಚನೂರಿನವ

ಒಂದು ಚಂದ ಆರೋಪ
ಹೊರಿಸುವೆಯಾದರೆ ಹೇಳು,
ನಾ ನಿನ್ನ ಹೃದಯ ಕದ್ದೆನೆಂದು

ನಾ ಸಿದ್ಧನಿರುವೆ
ನೂರು ವರ್ಷ ಖೈದಿಯಾಗಲು
-ಕೆಂಚನೂರಿನವ

ಮಂಗಳವಾರ, ಜೂನ್ 11, 2013

ನಿಜ
ನೆನಪು ನವಿರಾದ ನವಿಲ
ಗರಿಯೆಂಬುದು ಸುಳ್ಳು
ನೆನಪೆಂಬುದು ಅಂಗಾಲಿನಲ್ಲಿ ಮುರಿದ
ಮುಳ್ಳು

ಮಧುಶಾಲೆಯೆಂಬುದು
ಪಾಪಿಗಳ ಪಾಲಿನ ಸ್ವರ್ಗ
ಪುಣ್ಯವಂತರೇ
ಸ್ವರ್ಗ
ಕಾಣಲು ಸಾಯುವವರೆಗೂ ಕಾಯುವ
ನಿಮ್ಮ ಕುರಿತು ಕರುಣೆಯಿದೆ ನನಗೆ
-ಕೆಂಚನೂರಿನವ

ಓ ಕಾಲವೇ
ಕಿತ್ತುಕೊಳ್ಳದಿರು ಇಷ್ಟು ಬೇಗ
ಯೌವನವನ್ನು
ಬಾಕಿಯಿವೆ ಇನ್ನೂ
ಮಾಡಲೇ ಬೇಕಾದ
ಒಂದಿಷ್ಟು ಪಾಪಗಳು
-ಕೆಂಚನೂರಿನವ

ಸೋಮವಾರ, ಜೂನ್ 10, 2013

ಕಹಿಯೆಂದು ದೂರದಿರು ಗೆಳೆಯ
ಮಧುವನ್ನು

ಅದಕೂ ಕಹಿಯಾದ ನೆನಪಿದೆ
ನನ್ನೆದೆಯಲ್ಲಿ

-ಕೆಂಚನೂರಿನವ

ನಲವತ್ತು ದಾಟಿದ
ನಟಿಯ ಮನೆತುಂಬಾ
ಒಡೆದ ಕನ್ನಡಿಗಳು,
ನೆರಿಗೆ ತೋರಿಸದ
ಕನ್ನಡಿಯ ಹುಡುಕಾಟದಲ್ಲಿದ್ದಾಳಂತೆ
ಪಾಪ

ಶನಿವಾರ, ಜೂನ್ 8, 2013

1)
ಸಾಕಿ ಹೇಳಿದ್ದು
ಯಾ ವ ಮಧುವೂ ರುಚಿಸದು
ಎದೆಯಲ್ಲಿ ನೋವಿಲ್ಲದೆ

2)
ನೀನು ಕಣ್ಮುಚ್ಚಿ
ನಿದ್ರಿಸುವುದನ್ನೇ ಕಾಯುತ್ತಿವೆ
ನಕ್ಷತ್ರಗಳು:
ಬಿಡು,ಅವೂ ಹೊಳೆಯಲಿ
ಒಂದಷ್ಟು ಹೊತ್ತು ಕತ್ತಲಲಿ

3)
ನೋವಿಲ್ಲದೆ ಕುಡಿದೆ,
ಅಪಚಾರವಾಯ್ತು ಮಧುವಿಗೆ.
ಕ್ಷಮೆಯಿರಲಿ ಸಾಕಿ

4)
ಕುಡುಕರಾದರೆ ಅಪರಾಧವಲ್ಲ,
ಕೆಡುಕರಿಗೇನೆ ಕ್ಷಮೆಯಿದೆ
ಕುಡುಕರಿಗಿಲ್ಲವೆ?

5)
ಇವಳು ಪಲುಕುವ ಪಿಸುನುಡಿಗಳು
ಮಧುವಿನಷ್ಟೇ ಅಮಲೇರಿಸುತ್ತಾವೆ,
ನಂಬಿ, ನಾನೀಗ ಕುಡಿದಿಲ್ಲ

6)
ಇವಳ ಬಾಗು-ಬಳುಕುಗಳನ್ನು
ಇಂದ್ರ ಛಾಪಕ್ಕೆ ಹೋಲಿಸದಿರಿ,
ಇವಳಲ್ಲಿವೆ ಏಳಕ್ಕೂ ಮಿಕ್ಕಿ ಬಣ್ಣ

7)
ಕುಡಿದವನಿಗೆ
ನೆಲವೇ ತೊಟ್ಟಿಲು
ತೂಗುತ್ತದೆ ನಡೆವಾಗಲೂ

-ಕೆಂಚನೂರಿನವ

ಶುಕ್ರವಾರ, ಜೂನ್ 7, 2013

ರುಜುವಾತು
ಅವಳು
ಈಗಷ್ಟೇ ಹಾದು ಹೋದಂತಿದೆ
ಈ ಹಾದಿಯಲ್ಲಿ
ನೀವೇ ನೋಡಿ
ಈ ಬೀದಿ ದೀಪ
ತುಸು ಹೆಚ್ಚೇ ಹೊಳೆಯುತ್ತಿದೆ
ಈ ಸಂಜೆಯಲಿ
ನಾನೇಕೆ ಸುಳ್ಳು ಹೇಳಲಿ
ಸಾಕ್ಷಿಯಿಲ್ಲವೆ ನನ್ನ ಬಳಿ...?

ಮಂಗಳವಾರ, ಜೂನ್ 4, 2013

ಎಲೆ ಎಲೆಯ ಮೇಲೆ
ಹನಿ ಹನಿಯ ತಾನ

ಈ ಇಳೆಯ ಮೇಲೆ
ಆ ಮಳೆಗೆ ಪ್ರೇಮ

-ಕೆಂಚನೂರಿನವ

ಸೋಮವಾರ, ಜೂನ್ 3, 2013

ಬಲು ರೋಮಾಂಚಕ
ಹಾದಿ ತಪ್ಪಿದ
ಹಡಗಿನ ಯಾನ

ಗುರಿ ತಲುಪುವುದು
ಅನುಮಾನವಷ್ಟೇ
ತೇಲುವ ಸುಖ
ಅನುಭವಿಸಬೇಕು
ಮುಳುಗುವವರೆಗೂ

-ಕೆಂಚನೂರಿನವ

ಅವನು
ಮೊನ್ನೆ ಬಂದಿದ್ದ
ನನ್ನ ತುಂಬುಗೆನ್ನೆಯ ಮೇಲೆ
ಕವಿತೆ ಬರೆಯುತ್ತಿದ್ದವನು

ಈ ಹೋಟೆಲಿನ
ಮಬ್ಬು ಬೆಳಕಿನ ಕೋಣೆಯಲ್ಲಿ
ನನ್ನ ಇಳಿಬಿದ್ದ ಕೆನ್ನೆ
ಅವನು ನೋಡಿರಲಿಕ್ಕಿಲ್ಲ

ಎಷ್ಟು ನೊಂದುಕೊಳ್ಳುತ್ತಿದ್ದನೋ
ನೋಡಿದ್ದಿದ್ದರೆ

-ಕೆಂಚನೂರಿನವ