ಶುಕ್ರವಾರ, ಅಕ್ಟೋಬರ್ 4, 2013

...ನನ್ನ ಬದುಕಿನ ಅತ್ಯಂತ ನೋವಿನ ಸಮಯದಲ್ಲಿ ನಾನು ಬಯಸಿದ್ದು ಹಂಚಿಕೊಳ್ಳುವ ಹೆಗಲನ್ನಲ್ಲ ಬದಲಿಗೆ ಒಂದಿಷ್ಟು ಕತ್ತಲು ಮತ್ತು ಏಕಾಂತ ಅದು ಇಂತಹ ನಗರಗಳಲ್ಲಿ ಎಷ್ಟು ದುಬಾರಿಯೆಂಬುದು ಇಲ್ಲಿ ಬದುಕಿದವರಿಗಷ್ಟೇ ಗೊತ್ತು .

ನೀನು ಅಂದರೆ ಬೆಳಕು ಆದ್ದರಿಂದಲೇ ನಾನು ನಿನ್ನೆದುರು ಅಧೀರನಾಗುತ್ತಿದ್ದೆ
ಬೆಳಕು ನನಗೆ ಕೊಟ್ಟಿದ್ದು ಅಪಮಾನ ,ನಿಂದೆಗಳನ್ನೇ ಯಾರಾದರೂ ಬೆಳಕಿನ ಕುರಿತು ಮಾತಾಡಿದಾಗ ನಾನು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೆ
ನನ್ನನ್ನು ಅಪಮಾನಿಸದೆ ಬಹಳಷ್ಟು ಹೊತ್ತು ಬೆಳಕಿನಲ್ಲಿ ಇರಿಸಿಕೊಂಡವಳು ನೀನು ಮಾತ್ರ
ನೀನು ತೊರೆದು ಹೋದಾಗ ನನಗೆ ಮತ್ತೆ ಖಾತರಿಯಾಯಿತು ಬೆಳಕೆಂಬುದು ಶಾಶ್ವತವಲ್ಲ ಅದು ಒಂದು ಕತ್ತಲಿನಿಂದ ಇನ್ನೊಂದು ಕತ್ತಲೆಯ ನಡುವಿನ ವಿರಾಮವಷ್ಟೆ.

ನಿನಗೂ ಗೊತ್ತು ಬೆಳಕನ್ನು ಸೃಷ್ಟಿಸಬೇಕು ಮತ್ತು ಅದನ್ನು ಕಾಪಾಡಿಕೊಳ್ಳಬೇಕು ಹಾಗೆ ಮಾಡಲು ಬಹಳಷ್ಟು ಶಕ್ತಿ ಇತ್ಯಾದಿ ಬೇಕು
ಅವುಗಳಿಲ್ಲದ ನಮ್ಮಂತವರಿಗೆ ಕತ್ತಲೇ ಸಾಥಿ
ಕತ್ತಲನ್ನು ನಾವು ಸೃಷ್ಟಿಸುವ ಮತ್ತು ಕಾಪಾಡಿಕೊಳ್ಳುವ ಅಗತ್ಯವಿಲ್ಲ
ಅದು ತಾನೇ ತಾನಾಗಿ ಸೃಷ್ಟಿಯಾಗುತ್ತದೆ ಅದಕ್ಕೆ ಯಾವುದೇ ಇಂಧನ ಇತ್ಯಾದಿ ಬೇಕಿಲ್ಲ

ಬೆಳಕಿನಲ್ಲಿ ಬದುಕಲು ಕೆಲವು ಅರ್ಹತೆ ಬೇಕು
ಕತ್ತಲಲ್ಲಿ ಹಾಗಿಲ್ಲ ಯಾರು ಬೇಕಾದರೂ ಬದುಕಬಹುದು ಕಣ್ಣಿದ್ದವರೂ ಕಣ್ಣಿಲ್ಲದವರೂ....

ಇಷ್ಟಾಗಿ ಕೂಡಾ ನಾನು ನಿನಗೆ ಆಭಾರಿ ಒಂದಿಷ್ಟು ದಿನ ಬೆಳಕಾಗಿದ್ದು ನಂತರ ಕತ್ತಲೆಯೇ ನಿತ್ಯಸತ್ಯವೆಂದು ತೋರಿದವಳು ನೀನು

-ಕೆಂಚನೂರಿನವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ