ಸೋಮವಾರ, ಏಪ್ರಿಲ್ 1, 2013

ಹನಿಗಳು

೧)
ಎರಡೇ ಕಣ್ಣು
ಲೆಕ್ಕವಿಲ್ಲದಷ್ಟು ನೋಟ

೨)
ದೃಷ್ಟಿ ಕೊಡಬಹುದು
ದೃಷ್ಟಿಕೋನವಲ್ಲ

೩)
ಕಣ್ಣು ಮುಚ್ಚಿದಾಗಲೆಲ್ಲ
ಕತ್ತಲಾಗುತ್ತದೆ
ಕಣ್ಣು ತೆರೆದಾಗಲೆಲ್ಲ
ಬೆಳಕಿರುವುದಿಲ್ಲ

೪)
ಕತ್ತಲಲ್ಲಿ
ಸಮಾನತೆ ಇದೆ
ಎಲ್ಲವೂ ಕಪ್ಪಾಗುತ್ತದೆ

೫)
ಎಲ್ಲ ಹೂಗಳೂ
ಸೂರ್ಯನ ಪಾಲಲ್ಲ
ಕೆಲವು
ಚಂದ್ರನ ಕಂಡೂ ಅರಳುತ್ತವೆ

೬)
ಬಹಳ ನಾಚಿಕೆ
ಹೂಗಳಿಗೆ
ಬೆಳಕಲ್ಲಿ ಅರಳುವುದಿಲ್ಲ

೭)
ಮೋಡವಾದರೆ ಸಾಕು
ನವಿಲ ಆಸೆಗೆ
ಕಣ್ಣು ಸಾವಿರ

೮)
ಏನೂ ಚಿಗುರುವುದಿಲ್ಲ
ನಿನ್ನಲ್ಲಿ
ಎಂದು ಕವಿ ಜರಿದ
ಕಳ್ಳಿ ಗಿಡ
ಎರಡು ಹೂವರಳಿಸಿ
ಮರುಭೂಮಿಯನ್ನ ಸಂತೈಸಿತು

೯)
ಬಾಗಿ ನಡೆಯುವುದಿಲ್ಲ
ಕಿರೀಟ ಹೊತ್ತವರು
ಬೀಗಿ ನಡೆಯುತ್ತಾರೆ
ಕಾರಣವಿಷ್ಟೆ,
ಕಿರೀಟ
ಜಾರಿ ಬೀಳುವ ಭಯ
ಖಾಲಿ ತಲೆ
ಬಯಲಾಗುವ ಭಯ

೧೦)
ನೀ ಕೆಡವಿ ಹೋಗಿದ್ದರೂ
ಚಿಂತಿಸುತ್ತಿರಲಿಲ್ಲ
ಇನ್ನೊಂದು ಕಟ್ಟುತ್ತಿದ್ದೆ
ನೀನು ನಿರ್ಲಕ್ಷಿಸಿದೆ
ಅದೇ ಬೇಸರ ನನಗೆ

೧೨)
ಮೈ ಸುಟ್ಟರೂ
ಸರಿ
ಪತಂಗದ ಸರಸ
ಬೆಳಕಿನೊಂದಿಗೆ ಮಾತ್ರ

೧೩)
ನಾಚಿ ಓಡುತ್ತಿದ್ದಳು
ಮುಗಿಲಿನಂತೆ
ತಡೆದು ನಿಲ್ಲಿಸಿದೆ
ಗಿರಿಯಾಗಿ
ಒಲವ ಧಾರೆಯಾದಳು
ನನ್ನೆದೆಯೀಗ ಹೂದೋಟ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ