ಬುಧವಾರ, ಮೇ 29, 2013

ಬದಲಾಗದ ಬದುಕಿನ ಕೆಲವು ಬಣ್ಣವಿಲ್ಲದ ಪುಟಗಳು

...ಈ ಕ್ಯಾಪ್ಟನ್ ಭಟ್ಟ ಇದ್ದಾನಲ್ಲ ಅವನ್ನ ನೋಡಿದ್ರೆ ಹೊಡೆದು ಕೊಂದುಬಿಡಬೇಕು ಅನ್ಸುತ್ತೆ ಒಂದೊಂದ್ಸಲ ,ಏನೋ ಇವನಪ್ಪನರೆಸ್ಟೋರೆಂಟ್ ಅನ್ನೋ ತರಾ ಆಡ್ತಾನೆ.ನಂಗೆ ಗೊತ್ತಿಲ್ವ ಗೆಸ್ಟ್ ಹೋದ ಕೂಡ್ಲೇ ಟೇಬಲ್ ಕ್ಲಿಯರ್ ಮಾಡ್ಬೇಕು ಅಂತ ?..ಬೇಕೆಂದೆ ಹುಡುಗೀರ ಎದುರೇ ಟೇಬಲ್ ಕ್ಲಿಯರ್ ಮಾಡೋಕೆ ಹೇಳ್ತಾನೆ. ಇವ್ನು ಬಿಲ್ ಫೋಲ್ಡರಿಂದ ಟಿಪ್ಸ್ ಹೊಡೆಯೋದು ಗೊತ್ತಿಲ್ಲ ಅಂದುಕೊಂಡಿದ್ದಾನೆ ನಾಳೆ ಬ್ರೀಫಿಂಗ್ ಟೈಮಲ್ಲಿ ಮ್ಯಾನೇಜರ್ ಹತ್ರ ಹೇಳ್ಕೊಡ್ತೀನಿ ಅವ್ನಿಗೆ.(ಪಾಪ ಅವನ ಮಗಳಿಗೆ ಹುಷಾರಿಲ್ವಂತೆ,ಬೇಡ  ಎಷ್ಟು, ಚಂದವಿದೆ ಮಗು).....
ಆದ್ರೂ ಭಟ್ರು ಒಳ್ಳೆಯವ್ರು ನಾನ್'ವೆಜ್ ಮಾಡಿದಾಗಲೆಲ್ಲ ತಾನು ತಿನ್ನದಿದ್ದರೂ,ಹಾಕಿಸಿಕೊಂಡು ನನಗೆ ಕೊಡ್ತಾರೆ ಛೇ! ಇನ್ಮೇಲೆ ಭಟ್ರಿಗೆ ಬೈಬಾರ್ದು
***********************************
ಈ ಗೆಸ್ಟ್'ಗಳು ಹನ್ನೊಂದೂವರೆ ಆದ್ರೂ ಹೋಗಲ್ಲ ಇವ್ರಿಗೇನು ಮನೆ ಮಠ ಇಲ್ವಾ?.ಹನ್ನೊಂದು ಕಾಲಿಗೆ ಫೈನಲ್ ಆರ್ಡರ್ ಅಂತ ಹೋದ್ರೆ ಇವ್ರು ಏನೂ ಬೇಡ ಅಂತಾರೆ,ಹನ್ನೊಂದು ಮುಕ್ಕಾಲಿಗೆ ಇವ್ರಿಗೆ ಶುರುವಾಗುತ್ತೆ ಇವ್ರ ಇನ್ನೊಂದು ಲಾರ್ಜಿನ ಆಲಾಪ .
ಈ ಸಲ ಏನಾದ್ರೂ ಮಾಡಿ ಪಾಸ್'ಪೋರ್ಟ್ ಮಾಡಿಸ್ಕೊಬೇಕು ದುಬಾಯಿಗಾದ್ರೂ ಹೋಗ್ಬೇಕು.ಮುದಾಸಿರ್'ಗೆ ನಾಳೆ ಫೋನ್ ಮಾಡ್ಬೇಕು ಅಲ್ಲೊಂದು ಕೆಲ್ಸ ನೋಡೋಕೆ
ಒಳ್ಳೆ ಸಂಬಳವಿದೆಯಂತೆ ಅಲ್ಲಿ.ಅವ್ನು ಅಲ್ಲಿಗೆ ಹೋದ್ಮೇಲೆ ಇಬ್ಬರು ತಂಗಿಯರ ಮದುವೆ ಮಾಡಿದ್ದಾನೆ ಅದೂ ಒಂದುರೂಪಾಯಿ ಸಾಲ ಇಲ್ಲದೆ. ಈ ಬೆಂಗ್ಳೂರಲ್ಲಿದ್ದು ಕಿತ್ತಾಕಿದ್ದು ಅಷ್ಟರಲ್ಲೇ ಇದೆ.(ಈ ಸಲ ಏನಾದ್ರೂ ಮಾಡಿ ತಂಗಿ ಮದುವೆ ಮಾಡಿಬಿಡಬೇಕು) ಥೂ ದರಿದ್ರ ಸೊಳ್ಳೆಗಳು ಮಲ್ಕೊಳ್ಳೋಕು ಬಿಡಲ್ಲ ಈ ಸಲ ವೀಕ್ ಆಫ್ ದಿನ ಒಂದು ಸೊಳ್ಳೆಪರ್ದೆ ತಗೋಬೇಕು.(ಈ ವಾರದ ಟಿಪ್ಸ್ ಎಷ್ಟು ಬರುತ್ತೋ....)
***********************************
ರಿಷಪ್ಷನ್'ನಲ್ಲಿರೋ ಸವಿತಾ ನೋಡೋಕೆ ತುಂಬಾ ಚಂದ ಇದ್ದಾಳೆ(ಅದಕ್ಕೆ ಅವ್ಳನ್ನ ಕೆಲಸಕ್ಕೆ ಇಟ್ಕೊಂಡಿರೋದು ಅಂತಾ ಮೊನ್ನೆ ಭಟ್ರು ಹೇಳ್ತಿದ್ರು) ಅವಳೂ ನನ್ನ ನೋಡಿದ್ರೆ ನಗ್ತಾಳೆ .ಆದ್ರೂ ಅವ್ಳೆದ್ರಿಗೆ ಹೋದಾಗ ಒಂಥರಾ ಭಯ ಆಗುತ್ತೆ.ಮೊನ್ನೆ ಅವಳ ಬರ್ತ್'ಡೇಗೆ ಕೊಟ್ಟ ಚಾಕ್ಲೇಟ್ ಈಸ್ಕೊಳ್ಳೋವಾಗ ಕೈ ನಡುಗ್ತಾ ಇತ್ತು. ಅವಳೇ ಧೈರ್ಯಸ್ತೆ ಶೇಕ್'ಹ್ಯಾಂಡ್ ಕೊಡ್ತಾಳೆ(ಅಬ್ಬಾ ಎಷ್ಟು ಮೆದು ಅವಳ ಕೈ) ಅವಳಂತೆ ಧೈರ್ಯವಾಗಿ ವ್ಯವಹರಿಸೋಕೆ ನಾನದ್ಯವಾಗ ಕಲಿತೀನೋ... ಅವಳು ಹೇಳ್ತಾಳೆ ನಾಚಿಕೆ,ಸಂಕೋಚ ಇವನ್ನೆಲ್ಲಾ ಇಟ್ಕೊಂಡ್ರೆ ಬೆಂಗ್ಳೂರಲ್ಲಿ ಬದ್ಕೋಕಾಗಲ್ಲ ಹುರಿದು ಮುಕ್ಕಿಬಿಡ್ತಾರೆ,ನಿಮ್ ಥರಾ ಟ್ಯಾಲೆಂಟ್ ಇದ್ದಿದ್ರೆ ಇಷ್ಟೊತ್ತಿ ರೆಸ್ಟೋರೆಂಟ್ ಮ್ಯಾನೇಜರ್ ಆಗಿರ್ತಿದ್ದೆ
(ಥೂ ಇನ್ನಾದ್ರೂ ಬದಲಾಗ್ಬೇಕು ನಾನು)

-ಕೆಂಚನೂರಿನವ

1 ಕಾಮೆಂಟ್‌: