ಸೋಮವಾರ, ಮಾರ್ಚ್ 25, 2013

ಬಹಳ ಪ್ರೀತಿಯೇನಿಲ್ಲ
ನೀನೆಂದರೆ ನನಗೆ
ಆದರೂ...
ನಿನ್ನ ಧೇನಿಸಿದ್ದು ಸುಳ್ಳಲ್ಲ
ತುಂಬು ಕಂಗಳ ಜೊತೆಗೆ
ನನ್ನ ಏಕಾಂತದಲ್ಲಿ
ಭರಿಸಲಾಗದ ಅವಮಾನದಲ್ಲೊಮ್ಮೆ
ಮತ್ತೆ ಕನಸುಗಳು ಕಮರಿ ಬಿದ್ದಾಗ
ನೀನು ಬಂದಿರಲಿಲ್ಲ ಅಷ್ಟೇ

ನನಗೂ ನಿನ್ನೆಡೆಗೆ ನಡೆದು ಬರುವ ಧೈರ್ಯವಿರಲಿಲ್ಲ
ನೀನೂ ಕೈ ಹಿಡಿಯಲಿಲ್ಲ

ಇಂದೂ ನಿನ್ನದೇ ಧ್ಯಾನ ನನಗೆ
ಈ ಸಂಭ್ರಮವೆಲ್ಲ ನಿನ್ನದೇ ಕಾಣಿಕೆ
ನಮ್ಮದೇನಿದ್ದರೂ ವ್ಯರ್ಥ ಹವಣಿಕೆ
ಜನ್ಮ ಕೊಟ್ಟವರಿಗಷ್ಟೆಯಲ್ಲ
ನಿನಗೂ ನಾ ಚಿರಋಣಿ
ಬೆನ್ನ ಹಿಂದೆಯೇ ಇದ್ದರೂ
ಇರಿಯದೇ ಇದ್ದುದಕ್ಕೆ

ಆದರೆ ಈಗೀಗ ಅನ್ನಿಸುತ್ತಿದೆ
ನಿನ್ನ ದ್ವೇಷಿಸಬೇಕೆಂದು
ಬದುಕ ಪ್ರೀತಿಸಬೇಕೆಂದು
ಆದರೇನು?
ದ್ವೇಷಿಸಿದರೂ ಪ್ರೀತಿಸಿದರೂ
ನೀ ಬರುವುದುದು
ನಿನಗೆ ಬೇಕೆನ್ನಿಸಿದಾಗಲೇ
ನಾನು ಕೋರಿದಾಗಲಲ್ಲ
ಆದರೂ ಒಂದು ಕೋರಿಕೆ
ಬರಬೇಡ ಹಿಂಬಾಗಿಲಲ್ಲಿ ಕಳ್ಳನಂತೆ
ಎದುರಲ್ಲೇ ಬಾ
ಆಪ್ತ ಮಿತ್ರನಂತೆ
ತೋಳ್ದೆರೆದು ಸ್ವಾಗತಿಸುವೆ

ಸಾವಿಗೆ

ಬಹಳ ಪ್ರೀತಿಯೇನಿಲ್ಲ
ನೀನೆಂದರೆ ನನಗೆ
ಆದರೂ...
ನಿನ್ನ ಧೇನಿಸಿದ್ದು ಸುಳ್ಳಲ್ಲ
ತುಂಬು ಕಂಗಳ ಜೊತೆಗೆ
ನನ್ನ ಏಕಾಂತದಲ್ಲಿ
ಭರಿಸಲಾಗದ ಅವಮಾನದಲ್ಲೊಮ್ಮೆ
ಮತ್ತೆ ಕನಸುಗಳು ಕಮರಿ ಬಿದ್ದಾಗ
ನೀನು ಬಂದಿರಲಿಲ್ಲ ಅಷ್ಟೇ

ನನಗೂ ನಿನ್ನೆಡೆಗೆ ನಡೆದು ಬರುವ ಧೈರ್ಯವಿರಲಿಲ್ಲ
ನೀನೂ ಕೈ ಹಿಡಿಯಲಿಲ್ಲ

ಆದರೆ ಈಗೀಗ ಅನ್ನಿಸುತ್ತಿದೆ
ನಿನ್ನ ದ್ವೇಷಿಸಬೇಕೆಂದು
ಬದುಕ ಪ್ರೀತಿಸಬೇಕೆಂದು
ಆದರೇನು?
ದ್ವೇಷಿಸಿದರೂ ಪ್ರೀತಿಸಿದರೂ
ನೀ ಬರುವುದುದು
ನಿನಗೆ ಬೇಕೆನ್ನಿಸಿದಾಗಲೇ
ನೀನು ಬಯಸಿದಾಗಲಷ್ಟೆ
ನಾನು ಕೋರಿದಾಗಲಲ್ಲ
ಆದರೂ ಒಂದು ಕೋರಿಕೆ
ಬರಬೇಡ ಹಿಂಬಾಗಿಲಲ್ಲಿ ಕಳ್ಳನಂತೆ
ಎದುರಲ್ಲೇ ಬಾ
ಆಪ್ತ ಮಿತ್ರನಂತೆ
ತೋಳ್ತೆರೆದು ಸ್ವಾಗತಿಸುವೆ

-ಕೆಂಚನೂರಿನವ

ಕೇದಗೆಯ ಬನದಲ್ಲ
ಮೈ ಮರೆತು ಮಲಗಿತ್ತು
ಘಮದ ಅಮಲಿನಲಿ
ಕೇಕೆ ಹಾಕಿತು
ರಣಹದ್ದು ಒಮ್ಮೆ
ಅಮಲಿನಲಿ ಕೇಳಲಿಲ್ಲ
ಹಾವಿಗೆ
ಇನ್ನಷ್ಟು ಹತ್ತಿರದಲಿ
ಸಾವಿನ ಕೇಕೆ
ಭ್ರಮೆ ಬಿಟ್ಟು ಎದ್ದರೆ
ಬಿಡುತ್ತಿಲ್ಲ
ಕೇದಗೆಯ ನಂಟು
ಓಡಲು
ಎರಗಿದ ರಣಹದ್ದು
ಬಾಚಿಕೊಂಡಿತು ಕಾಲಲ್ಲಿ
ಮೇಲೆರುತ್ತದ್ದಂತೆಲ್ಲಾ
ಅಮಲು ಮರೆಯಾಗಿ
ನಿಜದ ದರ್ಶನ
ತಡವಾಗಿ ಬಿಟ್ಟಿದೆ
ಇನ್ನಿಲ್ಲ ಪ್ರಯೋಜನ
ಸಾವು ಕರೆದೊಯ್ಯುವಾಗ
ಹಿಂಬಾಲಿಸ ಬೇಕಷ್ಟೆ
ಇದು ಬದುಕು

ಅಮಲಿಳಿಯದೆ ದರ್ಶನವಿಲ್ಲ
ದರ್ಶನವಿಲ್ಲದೆ ಅಮಲಿಳಿಯುವುದಿಲ್ಲ

ಶನಿವಾರ, ಮಾರ್ಚ್ 23, 2013

ಗೆಳತಿ
ಮನೆ ಮುಂದೆ ನೆಟ್ಟ
ಮಲ್ಲಿಗೆಯ ಹಂಬಲ್ಲಿ
ನಸುಕಿನಲಿ ಬಿರಿದ
ಹೂಗಳಿಗೆ
ನಿನ್ನ ನಗೆಯದೇ ಚೆಲುವು

ಶುಕ್ರವಾರ, ಮಾರ್ಚ್ 22, 2013

ಗೆಳೆಯನಿಗೆ

ದಾಟಲೇಬೇಕೆಂಬ ಧಾವಂತವೇಕೆ?
ದಾಟಲಾಗದ ಕಡಲು ಮೂರುದಿನದ ಬಾಳು

ಮೀಟಿ ನೋಡು ಪ್ರತಿ ಎದೆಯ ತಂತಿ
ಮಧುರ ಸಂಗೀತದಂತೆ  ಕೇಳಬಲ್ಲೆಯಾದರೆ
ಅಣಿಗೊಳಿಸು ನಿನ್ನೆದೆಯ ವೀಣೆಯಂತೆ
ಯಾರೋ ಬಂದು ಮೀಟಲು ಕೇಳೀತು
ಮಧುರ ಸಂಗೀತದಂತೆ

ನೋವ ಹುಡುಕಿ ಹೊರಟ ನೀನು
ನಲಿವ ಹೇಗೆ ಪಡೆಯುವೆ
ಪ್ರೇಮವಿರಲಿ ಎದೆಯಲಿ
ನಾವು ನೋಡಿದಂತೆ ಜಗವು
ಕಾಣುವುದು ನಂಬು ಗೆಳೆಯ

ಹೆಚ್ಚು ಲೆಕ್ಕಾಚಾರ ಬೇಡ
ಮೂರು ದಿನದ ಬಾಳಿಗೆ
ನೆಂಟರಂತೆ ನೋವು-ನಲಿವು
ನಮ್ಮ ಇಂದು-ನಾಳೆಗೆ
ನಂಬಿ ಬದುಕು ತಣ್ಣಗೆ

ಬುಧವಾರ, ಮಾರ್ಚ್ 20, 2013

ಇವಳ ಸಹವಾಸದಿಂದ
ಕೆಟ್ಟ ಸನ್ಯಾಸಿ ನಾನು
ಖೇದವೇನಿಲ್ಲ ಕೆಟ್ಟಿದ್ದಕ್ಕೆ
ಕೇದಗೆಯ ಬನ ಹೊಕ್ಕು
ಸೌಗಂಧ ಪಡೆಯದೆ ಬರಲಾಗದು

ಮಂಗಳವಾರ, ಮಾರ್ಚ್ 19, 2013

ಹೂ ಕವಿತೆ

ಸುಮವನದ ದಾರಿಯಲ್ಲಿ
ಹಾಯ್ದು ಹೋಗಿದ್ದಕ್ಕೆ
ಗಾಳಿಗೆ ಸುಮವು ನೀಡಿದ್ದು
ಪರಿಮಳದ ಕಾಣಿಕೆ
ದಾರಿಯುದ್ದಕ್ಕೂ ಹರಡಲೆಂದು
ಗಾಳಿಯೂ ಉದಾರಿ...
ಉಳಿಸಿಕೊಳ್ಳಲಿಲ್ಲ ಏನನ್ನೂ
ಹಂಚಿ ಹೋಯಿತು ದಾರಿಯುದ್ದಕ್ಕೂ

ಕಲಿಯಬೇಕು ನಾನೂ
ಸೋಕಿ ಹೋದವರಿಗೂ
ಹೊಸಕಿ ಹೋದವರಿಗೂ
ಸಮನಾಗಿ ಪರಿಮಳ ಹಂಚುವ
ಹೂವಿನ ಉದಾರತೆ

ಕಲಿಯಬೇಕಿದೆ ಗಾಳಿಯಿಂದಲೂ
ಪಡೆದದ್ದನ್ನ ಉಳಿಸಿಕೊಳ್ಳದೆ
ಅಲ್ಲಲ್ಲೇ ಹಂಚುವ ಸುಗುಣವನ್ನ