ಸೋಮವಾರ, ಮಾರ್ಚ್ 18, 2013

ಎದೆಯ ಬಯಲಲ್ಲಿ
ಅಲೆಮಾರಿಗೊಂದು  ನೆಲೆಯ ಕೊಟ್ಟೆ
ಡೇರೆ ಕಟ್ಟಿದ ಅಲೆಮಾರಿ
ಮತ್ತೆ ಯಾರು ಕರೆದರೋ ತಿಳಿಯದು
ಹೊರಟು ಹೋಗಿದ್ದಾನೆ
ಬಯಲಲ್ಲಿ ಡೇರೆ ಕಿತ್ತು
ಡೇರೆಯ ನೆನಪನ್ನುಳಿಸಿ

ಅಂದುಕೊಳ್ಳುತ್ತೇನೆ ಅಲೆಮಾರಿಗಳಿಗೆ
ಹೃದಯ ಕೊಡಬಾರದೆಂದು

ಆದರೆ ಬಾಗಿಲಲ್ಲಿ ಬಂದು ನಿಲ್ಲುವ
ಫಕೀರನ ಕಣ್ಣಲ್ಲಿ ಅದೇನೋ ಹೊಳಪು
ಸಜ್ಜುಗೊಳಿಸುತ್ತೇನೆ ಎದೆಯನ್ನು
ಮತ್ತೆ ನೋವು ತಿನ್ನಲೆಂದೇ

ಆ ಅರಳಿ ಕಟ್ಟೆಮೇಲೆ
ಒಂದಷ್ಟು ಜನ
ಹಿರಿಯರು,
ಇನ್ನೊಂದು ಕಡೆ
ಗಾಜು ಒಡೆದಿದ್ದಕ್ಕೆ
ಚಿತ್ರ ಮಾಸಿದ್ದಕ್ಕೆ
ಪೂಜೆಯ ಅರ್ಹತೆ
ಕಳೆದುಕೊಂಡ
ದೇವರ ಫೋಟೋಗಳು

ಬುಧವಾರ, ಮಾರ್ಚ್ 13, 2013

ವನ ಸುಮದ ಸೌರಭಕೆ
ಪುಳಕಗೊಂಡು ಕೋಕಿಲ
ನಾಡಿಗೆಲ್ಲ ಸಾರುತಿಹುದು
ಬಂದನೆಂದು ವಸಂತ

ನನ್ನೆದೆಯಲೊಂದು ಹೂವು ಅರಳಿ
ನಿನ್ನ ಕರೆಯುತಿರುವುದು
ಕೇಳಲಿಲ್ಲವೆ ನಿನಗೆ
ಪ್ರೇಮ ಸುಮದ ಇನಿದನಿ

ದೂರ ನಿಂತು ಹೀಗೆ-
ನೀನು ಕೆಣಕಬೇಡ ಸುಮ್ಮನೆ
ಅರಳಿ ನಿಂತ ಪ್ರೇಮ ಸುಮವು
ಬಯಸುತಿಹುದು ನಿನ್ನನೇ

ದುಂಬಿಯಾಗಿ ನೀನು
ಬಂದು ಸೇರು ನನ್ನನು
ಮರಳಿ ಹೋಗೋ ಮಾತು ಬೇಡ
ದಿನವೂ ಜೇನ ಕೊಡುವೆನು

ಪಲುಕುಗಳು
*******************
ನಾನು ಇತ್ತೀಚೆಗೆ ಕುಡಿಯುವುದನ್ನ ಬಿಟ್ಟಿದ್ದೇನೆ
ಕಾರಣವಿಷ್ಟೇ
ಅವಳ ನೆನಪಿನಲ್ಲಿ ಸಾಕಷ್ಟು ಅಮಲಿದೆ
***********************************
ಸದಾ ಅವಳ ನಶೆಯಲ್ಲೇ ತೇಲುವ ನನ್ನ ಕಂಡು
ನನ್ನ ಮಧುಶಾಲೆಯ ಮಿತ್ರರಿಗೆ ಹೊಟ್ಟೆ ಕಿಚ್ಚು
***********************************
ಮಧು ಶಾಲೆಯ ಮಾಲಕಿಗೆ ನನ್ನ ಮೇಲೆ ಅನುಮಾನವಂತೆ
ಇವನು ಇನ್ನೆಲ್ಲೋ ಕುಡಿದು ಬರುತ್ತಿರ ಬಹುದೆಂದು
***********************************
ಮಧು ಕರುಳು ಸುಡುತ್ತದಂತೆ
ನಿಮಗೆ ಗೊತ್ತಿಲ್ಲ
ಪ್ರೀತಿ  ಪ್ರೇಮ ಹೃದಯವನ್ನ ಸುಡುತ್ತೆ
***********************************
ಕಳ್ಳನಷ್ಟೇ ಅಲ್ಲ
ವಿರಹಿಯೂ ಬೆಳದಿಂಗಳನ್ನ ಬಹಳ ದ್ವೇಷಿಸುತ್ತಾನೆ
***********************************
ಕಣ್ಣು ಹನಿಯಾಗದೆ
ಯಾವ ಪ್ರೇಮವೂ ಕೊನೆಯಾಗಿಲ್ಲ
***********************************

ಸೋಮವಾರ, ಮಾರ್ಚ್ 11, 2013

ಬಾನ ಚಂದಿರ ಹೂವ ಹಂದರ
ಇದಕೂ ಸುಂದರ
ನನ್ನ ಚೆಲುವೆಯ ಅಂದವು
ಕನಸಿನೂರಿನ ದಾರಿಯುದ್ದಕೂ
ಹೂವು ಚೆಲ್ಲಿದ ನಗೆಯ ಬೆಡಗು
ಮೀರಿ ಹೋಗಲು ಸಾಧ್ಯವಾಗದ
ಕಣ್ಣ ಅಂಚಿನ ಕರೆಗಳು

ಬಿಡದೆ ಹರಿವ ಒಲವ ತೊರೆಗೆ
ಒಡ್ಡಲಾಗದು ತಡೆಯನು
ತೆರೆದು ನಿಂತೆನು
ಎದೆಯ ಬಯಲನು
ಹಲವು ಹೂವು ಅರಳಿ ನಿಂತಿತು
ಒಲವ ಹೂವ ಬೇಡಿ ಪಡೆದಳು

ಹೂವೆ ಹೂವ ಮುಡಿದ
ಪರಿಯ ಕಂಡು
ಬೆರಗುಗೊಂಡು ನಿಂದೆನು

ಶನಿವಾರ, ಮಾರ್ಚ್ 9, 2013

ಬಹಳ ಹೋಲಿಕೆಯಿದೆ
ನನ್ನ ನಸೀಬಿಗೂ
ಬೇಸಿಗೆಯ ಕರೆಂಟಿಗೂ
ಎರಡೂ
ಕೈ ಕೊಡುತ್ತವೆ
ಸಮಯ ನೋಡಿ

ನಿರೀಕ್ಷೆಗಳ ಭಾರ
ತಾಳದೆ ಕುಸಿದ
ಪ್ರೇಮಸೌಧದ
ಅವಶೇಷಗಳಡಿಯಲ್ಲಿ
ವಿಲೇವಾರಿ ಮಾಡಲಾಗದಷ್ಟು
ನೆನಪುಗಳು
ಹೆಣವಾಗಿ ಬಿದ್ದಿವೆ