ಶುಕ್ರವಾರ, ಮಾರ್ಚ್ 8, 2013

ತುಳಸಿ ಹಬ್ಬದ
ದಿನದಂದು
ನಿನ್ನ ಜರಿಲಂಗದಲ್ಲಿ
ಪ್ರತಿಫಲಿಸುತ್ತಿದ್ದ
ಬೆಳಕನ್ನ ನೆನೆದರೆ...
ಗೆಳತಿ
ನಿಜ ಹೇಳುತ್ತೇನೆ
ಈಗಲೂ ಹೊಳೆಯುತ್ತವೆ
ನನ್ನ ಕಂಗಳು

ಗೆಳತಿ...
ನಿನ್ನ ಕಣ್ಣ ಹೊಳಪು
ನನ್ನ ಬಾಳ ಬೆಳಕು

ಹೀಗೆಲ್ಲಾ ಬರೆಯಬೇಕು
ಅಂದುಕೊಂಡಿದ್ದೆ
ಅಷ್ಟರಲ್ಲೇ...
ಹಾಳಾದ ಕರೆಂಟು
ಕೈ ಕೊಡ್ತು

ನಲ್ಲಿ ಕಟ್ಟೆಯಲ್ಲಿ
ಖಾಲಿ ಕುಳಿತ
ಬಿಂದಿಗೆಗಳು,
ಕಾಯಬೇಕು
ತುಂಬಿಕೊಳ್ಳಲು
ನೀರು ಬರುವವರೆಗೂ

ನನ್ನದೇ
ಚೆನ್ನಾಗಿದೆ ಅದೃಷ್ಟ
ನಿನ್ನ ನೆನೆದರೆ
ಸಾಕು
ಕಣ್ತುಂಬಿಕೊಳ್ಳುತ್ತದೆ

ಬುಧವಾರ, ಮಾರ್ಚ್ 6, 2013

ಬೇಯುತ್ತಿದ್ದೆ
ವಿರಹದುರಿಯಲ್ಲಿ
ಈಗಷ್ಟೇ
ಬಂದುಹೋದಳು
ಕೆಲವು ಕ್ಷಣಗಳ
ಮಟ್ಟಿಗೆ
ತೋಯಿಸಿದಳು
ಒಲವ ಮಳೆಯಲ್ಲಿ

ಸೋಮವಾರ, ಮಾರ್ಚ್ 4, 2013

ಶನಿವಾರ, ಮಾರ್ಚ್ 2, 2013

ಅವಳಿಂದ ಕದ್ದ
ಎಲ್ಲಾ ಮುತ್ತುಗಳನ್ನು
ಅವಳಿಗೆ ಮರಳಿಕೊಟ್ಟು
ನಾಳೆಯಿಂದ
ನಿಯತ್ತಿನಿಂದಿರಲು
ನಿರ್ಧರಿಸಿದ್ದೇನೆ
ಮರೆಯದೆ
ಶುಭಹಾರೈಸಿ
ಗೆಳೆಯರೆಲ್ಲರು

ಕಣ್ಣು ತೆರೆದೇ
ಕನಸು ಕಾಣುವುದನ್ನ
ಹೇಳಿಕೊಟ್ಟವಳೀಗ
ಕಣ್ಣು ಮುಚ್ಚುತ್ತಿದ್ದೇನೆ
ಎಂದರೂ ಬರದಷ್ಟು
ದೂರ ಹೋಗಿದ್ದಾಳೆ
ನೀವೇನಾದರು ಕಂಡರೆ
ಅವಳಿಗೆ ಇಷ್ಟನ್ನು
ಮರೆಯದೇ ಹೇಳಿ
ಸಾಯುವಾಗಲೂ ಕಣ್ಣು
ತೆರೆದೇ ಇತ್ತೆಂದು