ಗುರುವಾರ, ಜುಲೈ 9, 2020


“ಕಾಡು ಹೂ”

ಅಮೃತಾ ಪ್ರೀತಮ್ ಅವರ ಕಥೆ

'ಅಂಗೂರಿ' ಎಂದರೆ ನನ್ನ ನೆರೆಮನೆಯ ನೆರೆಮನೆಯವರ ಹಳೆಯ ಸೇವಕನ ಹೊಸ ಹೆಂಡತಿಯ ಹೆಸರು. ಅವಳು ಹೊಸಬಳು ಎನ್ನಿಸಿಕೊಳ್ಳಲು ಒಂದು ಕಾರಣವೆಂದರೆ ಅವಳು ಅವನ ಎರಡನೇ ಹೆಂಡತಿಯಾಗಿದ್ದಳು.ಪಂಜಾಬಿಯಲ್ಲಿ ಎರಡನೇ ಮದುವೆಯಾಗುವವನನ್ನು ದುಹಾಜು ಎಂದು ಕರೆಯುತ್ತಾರೆ. ಅದರ ಅರ್ಥ ಹೀಗಿದೆ- ಎರಡನೇ ಜೀವನವನ್ನು ಪ್ರವೇಶಿಸಿದ ವ್ಯಕ್ತಿ ಅಥವಾ ಎರಡನೇ ವೈವಾಹಿಕ ಜೀವನ. ಆದರೆ ಇನ್ನೊಂದು ಸತ್ಯವೆಂದರೆ ಅಂಗೂರಿಗೆ ಅದು ಮೊದಲ ವೈವಾಹಿಕ ಜೀವನವಾಗಿತ್ತು. ಹೀಗಾಗಿ ಅವಳು ಹೊಸ ಮದುಮಗಳಾಗಿದ್ದಳು ಜೊತೆಗೆ ಮದುವೆಯಾಗಿ ವರ್ಷವೂ ಕಳೆದಿರಲಿಲ್ಲ.
ಸುಮಾರು ಐದು ವರ್ಷಗಳ ಕೆಳಗೆ ಪರ್ಭತಿ ತನ್ನ ಮೊದಲ ಹೆಂಡತಿಯ ಕೊನೆಯ ವಿಧಿಗಳನ್ನು ಮಾಡಿ ಮುಗಿಸಲು ಮನೆಗೆ ಹೋಗಿದ್ದಾಗ, ಅಂಗೂರಿಯ ತಂದೆ ಮುಂದೆ ಬಂದು ಅವನ ನೆನೆದಿದ್ದ ಪಾರ್ನಾವನ್ನು (ತಲೆಗೆ ಸುತ್ತುವ ರುಮಾಲು) ಹಿಂಡಿ ಅವನ ಹೆಗಲ ಮೇಲೆ ಹೊದೆಸಿದ್ದನು. ಇಲ್ಲಿ ನಿಮಗೆ ಒಂದು ಸತ್ಯವನ್ನು ಹೇಳಬೇಕು ಯಾವ ಮನುಷ್ಯನೂ ತನ್ನ ರುಮಾಲು ಒದ್ದೆಯಾಗುವಷ್ಟು ಹೆಂಡತಿಗಾಗಿ ಅಳುವುದಿಲ್ಲ. ವಾಸ್ತವದಲ್ಲಿ ಕೊನೆಯ ವಿಧಿಗಳ ಸಮಯದಲ್ಲಿ ಸಂಪ್ರದಾಯದ ಭಾಗವಾಗಿ ರುಮಾಲನ್ನು ನೀರಿನಲ್ಲಿ ಅದ್ದಿ ನೆನೆಸಲಾಗುಯತ್ತದೆ ಆಗ ದುಃಖಿತ ಗಂಡನ ಮಾವ ಒದ್ದೆ ರುಮಾಲನ್ನು ತಲೆಗೆ ಸುತ್ತುತ್ತಿರುವ ಅಳಿಯನನ್ನು ಕಂಡು "ತೀರಿಕೊಂಡ ನಿಮ್ಮ ಹೆಂಡತಿ ಸ್ಥಾನಕ್ಕೆ ನಾನು ನನ್ನ ಮಗಳನ್ನು ಕೊಡುತ್ತೇನೆ, ಇನ್ನು ನೀವು ಅಳಬೇಕಿಲ್ಲ. ನೋಡಿ ನಾನು ನಿಮ್ಮ ರುಮಾಲನ್ನು ಒಣಗಿಸಿದ್ದೇನೆ" ಎಂದು ಹೇಳುತ್ತಾನೆ. ಇದು ಒಂದು ಗ್ರಾಮೀಣ ಪದ್ಧತಿಯಾಗಿದ್ದು ತೀರಿಕೊಂಡ ಹೆಂಡತಿಯ ಜಾಗಕ್ಕೆ ಹೀಗೆ ಹೊಸ ಹೆಂಡತಿ ಬರುತ್ತಾಳೆ. ಅಂಗೂರಿಯೂ ಹೀಗೆ ಪರ್ಭತಿಯ ಬದುಕಿನಲ್ಲಿ ಬಂದಿದ್ದಳು.
ಆದರೆ ಅಂಗೂರಿ ತುಂಬಾ ಸಣ್ಣ ಹುಡುಗಿಯಾಗಿದ್ದಳು ಜೊತೆಗೆ ಅವಳ ತಾಯಿ ಸಂಧಿವಾತದಿಂದಾಗಿ ಹಾಸಿಗೆ ಹಿಡಿದಿದ್ದಳು, ಇದರಿಂದಾಗಿ ಅವಳ ವಿವಾಹ ಸಮಾರಂಭವು ವಿಳಂಬವಾಯಿತು. ಹೀಗೆ ಒಂದೊಂದಾಗಿ, ಐದು ವರ್ಷಗಳು ಕಳೆದವು  ಕೊನೆಗೂ ಅಂಗೂರಿಯನ್ನು ಪರ್ಭತಿಗೆ ಕೊಡುವ ಸಮಯ ಬಂದಿತು. ಮದುವೆಯ ನಂತರ ಒಂದೋ ಅವನು ತನ್ನ ಹೆಂಡತಿಯನ್ನು ನಗರಕ್ಕೆ ಕರೆತರುತ್ತೇನೆ ಅಥವಾ ಅವನು ಮತ್ತೆ ಹಳ್ಳಿಗೆ ಹೋಗುವುದಾಗಿ ತನ್ನ ಮಾಲಿಕರಿಗೆ ಹೇಳಿದ್ದನು. ಆದರೆ ತಮ್ಮ ಅಡುಗೆ ಮನೆಯಿಂದ ಇಬ್ಬರು ವ್ಯಕ್ತಿಗಳಿಗೆ ಆಹಾರವನ್ನು ನೀಡಲು ಉದ್ಯೋಗದಾತರು ಸಿದ್ಧರಿರಲಿಲ್ಲ. ಹೀಗಿರುವಾಗ ಅಂಗೂರಿ ಮಾಲಿಕರು ನೀಡಿರುವ ಮನೆಯಲ್ಲೇ ತನ್ನ ಅಡುಗೆಯನ್ನು ಬೇಯಿಸಿಕೊಳ್ಳುತ್ತಾಳೆ ಎಂದು ಪರ್ಭತಿ ಅವರಿಗೆ ಹೇಳಿದಾಗ ಅವರು ಅವಳು ಉಳಿದುಕೊಳ್ಳುವುದಕ್ಕೆ ಒಪ್ಪಿದರು. ಹೀಗೆ ಅಂಗೂರಿ ನಗರಕ್ಕೆ ಬಂದು ತಲುಪಿಕೊಂಡಳು.
ಅಂಗೂರಿ ಪ್ರಾರಂಭದಲ್ಲಿ ಕಾಲನಿಯ ಮಹಿಳೆರಿಗೂ ಮುಖವನ್ನು ತೋರಿಸುತ್ತಿರಲಿಲ್ಲ. ಸದಾ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡಿರುತ್ತಿದ್ದಳು. ಆದರೆ ದಿನ ಕಳೆದಂತೆ ತಲೆಯ ಮೇಲಿಂದ ತನ್ನ ಸೆರಗನ್ನು ತೆಗೆದು ತನ್ನ ಕಾಳಿನ ಗೆಜ್ಜೆ ಸದ್ದು ಮಾಡುತ್ತಾ ಓಡಾಡತೊಗಿದಳು. ಅಂಗೂರಿ ನಮ್ಮ ಕಾಲನಿಯಲ್ಲಿ ಜನಪ್ರಿಯಳದಾಳು. ಅವಳ ಕಾಲ್ಗೆಜ್ಜೆಯ ನಾದವು ಅವಳ ನಗುವಿನ ಕುಣಿತಕ್ಕೆ ಹೊಂದಿಕೆಯಾಗುತ್ತಿತ್ತು. ಅವಳು ದಿನದ ಹೆಚ್ಚಿನ ಸಮಯವನ್ನು ಮಾಲಿಕರು ನೀಡಿದ ಪುಟ್ಟ ಮನೆಯಲ್ಲಿ ಕಳೆಯುತ್ತಿದ್ದಳು. ಆದರೆ ಅವಳು ನಮ್ಮ ಬಳಿ ಬರುವಾಗ ಅವಳ ನಗು ಕಾಲ್ಗೆಜ್ಜೆ
"ಅಂಗೂರಿ, ಕಾಲಿಗೆ ಏನು ಹಾಕಿಕೊಂಡಿದ್ದೀಯಾ?"
"ಇದು ಕಾಲ್ಗೆಜ್ಜೆ."
"ಇದೆನು ಕಾಲ್ಬೆರಳಲ್ಲಿ?"
"ಅವು ಬಿಚಿಯಾ, ನನ್ನ ಕಾಲುಂಗುರಗಳು."
"ಇದು ಇದೇನಿದು ತೋಳಲ್ಲಿ?"
"ಓಹ್, ಇದು ತಾಯಿತ."
"ನಿನ್ನ ಹಣೆ ಮೇಲೆ ಹಾಕಿರೋದು, ಏನದು?"
"ನಾವು ಇದನ್ನ ಅಲ್ಬಿಂಡ್ ಎಂದು ಕರೆಯುತ್ತೇವೆ."
"ಏನಿವತ್ತು ಸೊಂಟದಲ್ಲಿ ಏನೂ ಧರಿಸಿಲ್ಲ?"
! ನನ್ನ ಥಾಗ್ಡಿ (ಸೊಂಟದ ಪಟ್ಟಿ) ತುಂಬಾ ಭಾರ. ಆದರೆ ನಾನು ಅದನ್ನು ನಾಳೆ ಧರಿಸುತ್ತೇನೆ. ಇಂದು, ನಾನು ನನ್ನ ಕತ್ತಿನ ಸರ ಧರಿಸಿಲ್ಲ. ಅದರ ಸರಪಳಿ ಮುರಿದುಹೋಗಿದೆ. ನಾಳೆ ಬಜಾರ್ನಲ್ಲಿ ಸರಿಪಡಿಸಬೇಕು. ನನ್ನ ಹತ್ರ ಮೂಗಿನ ನತ್ತೂ ಇತ್ತು ಅದು ತುಂಬಾ ದೊಡ್ದದು ಅಂತ ಅತ್ತೆ ಇಟ್ಟಕೊಂಡ್ರು. ”
ಅಂಗೂರಿ ತನ್ನ ಬೆಳ್ಳಿಯ ಆಭರಣಗಳನ್ನು ಆತ್ಮವಿಶ್ವಾಸದಿಂದ ಧರಿಸಿ ಒಂದೊಂದಾಗಿ, ಬಹಳ ಸಂತೋಷದಿಂದ ನಮಗೆ ತೋರಿಸುತ್ತಿದ್ದಳು.
ಸೆಕೆಗಾಲ ಶುರುವಾಗುತ್ತಿದ್ದಂತೆ ಅಂಗೂರಿ ಮನೆಯಲ್ಲಿ ಉಸಿರುಗಟ್ಟಿದಂತೆನ್ನಿಸಿ ಬಂದು ನನ್ನ ಮನೆಯ ಹೊರಗೆ ಬಂದು ಕೂರುತ್ತಿದ್ದಳು. ನಮ್ಮ ಮನೆಯ ಅಂಗಳದಲ್ಲಿ ಒಂದು ಬೇವಿನ ಮರ ಮತ್ತು ಹಳೆಯ ಬಾವಿಯಿದೆ. ಕಾಲೊನಿಯ ಯಾರೂ ಬಾವಿಯನ್ನು ಬಳಸುತ್ತಿಲ್ಲ. ಆದರೆ ರಸ್ತೆ ಕೆಲಸ ಮಾಡುವ ಕೆಲಸಗಾರರು ಬಾವಿಯ ನೀರು ಬಳಸುತ್ತಿದ್ದರು. ಅವರು ಸುತ್ತಲೂ ನೀರು ಚಿಮುಕಿಸಿದ್ದರಿಂದ ಅಲ್ಲಿ ತಣ್ಣನೆ ವಾತಾವರಣವಿತ್ತು.
"ಅಕ್ಕಾ, ನೀವು ಏನು ಓದುತ್ತಿದ್ದೀರಿ?" ನಾನು ಮರದ ಕೆಳಗೆ ಕುಳಿತು ಓದುತ್ತಿದ್ದಾಗ ಅಂಗೂರಿ ಒಂದು ದಿನ ನನ್ನನ್ನು ಕೇಳಿದಳು.
"ನೀನೂ ಓದ್ತೀಯಾ?" ನಾನು ಅವಳನ್ನು ಕೇಳಿದೆ.
"ನನಗೆ  ಓದಲು ತಿಳಿದಿಲ್ಲ."
"ನೀನು ಯಾಕೆ ಕಲಿಯಬಾರದು?"
ಇಲ್ಲ.”
ಏಕೆ?”
"ಹೆಣ್ಣು ಓದುವುದು ಪಾಪ."
"ಹಾಗಿದ್ದರೆ ಓದುವುದು ಗಂಡಿಗೆ ಪಾಪವಲ್ಲವೇ?"
"ಅಲ್ಲ ಪಾಪವಲ್ಲ."
"ಇದನ್ನೆಲ್ಲ ಯಾರು ನಿನಗೆ ಹೇಳಿದ್ದು?"
"ನನಗೆ ಗೊತ್ತು."
"ಹಾಗಾದ್ರೆ ನಾನು ಓದುವ ಮೂಲಕ ಪಾಪ ಮಾಡುತ್ತಿದ್ದೀನಾ?"
ಇಲ್ಲ ಇದು ನಗರದ ಮಹಿಳೆಯರು ಮಾಡಿದರೆ ಪಾಪವಲ್ಲ. ಆದರೆ ಇದು ಹಳ್ಳಿಯ ಮಹಿಳೆ ಓದುವುದು ಪಾಪದ ಕೆಲಸ. ”
ಅವಳ ಮಾತು ಕೇಳಿ ನಾನು ನಗುತ್ತಿದ್ದೆ, ಮತ್ತು ಅಂಗೂರಿಯೂ ನಕ್ಕಳು. ಅವಳು ಕೇಳಿದ ಮತ್ತು ಕಲಿತ ವಿಷಯಗಳ ಬಗ್ಗೆ ಅವಳಿಗೆ ಯಾವುದೇ ಅನುಮಾನವಿರಲಿಲ್ಲ, ಹಾಗಾಗಿ ನಾನು ಅವಳಿಗೆ ಹೆಚ್ಚಾಗಿ ಏನನ್ನೂ ಹೇಳಲಿಲ್ಲ. ಅವಳಿಗೆ ನಗಲು ಮತ್ತು ತನ್ನದೇ ಸ್ವಂತ ಮೌಲ್ಯಗಳೊಂದಿಗೆ ಸಂತೋಷವಾಗಿರಲು ಸಾಧ್ಯವಾದರೆ, ಅದು ಹಾಗೇ ಇರಲಿ.
ನಾನು ಅವಳ ನಗುವ ಮುಖವನ್ನು ನೋಡುತ್ತಿದ್ದೆ. ಅವಳ ದೇಹವು ಕಪ್ಪಗಿತ್ತು. ಅವಳ ಮೈ ಚೆನ್ನಾಗಿ ನಾದಿದ ಹಿಟ್ಟಿನಂತೆ ಇತ್ತು. ಹೆಣ್ಣು ಕಲಿಸಿದ ಹಿಟ್ಟಿನಂತೆ ಎಂದು ಜನರು ಹೇಳುತ್ತಾರೆ. ಆದರೆ ಕೆಲವೊಮ್ಮೆ ಹಿಟ್ಟು ತೀರಾ ಜಾಳಾಗಿರುತ್ತದೆ. ಅದನ್ನು ದುಂಡಗಿನ ಉಂಡೆ ಮಾಡುವುದು ಕಷ್ಟ ಜೊತೆಗೆ ರೊಟ್ಟಿ ಕೂಡಾ ಸುಲಭವಾಗಿ ತಟ್ಟಲಾಗುವುದಿಲ್ಲ ಅಂತಹ ಹಿಟ್ಟಿನಿಂದ. ಕೆಲವೊಮ್ಮೆ ಹಿಟ್ಟು ಹಳೆಯದಾಗಿರುತ್ತದೆ ಅದನ್ನು ಲಟ್ಟಿಸಲು ಹರಸಾಹಸಪಡಬೇಕಾಗುತ್ತದೆ. ಆದರೆ ಒಂದು ರೀತಿಯ ಮಹಿಳೆಯರಿರುತ್ತಾರೆ ಅವರ ಮೈ ಮಾಂಸವು ಬಿಗಿಯಾಗಿರುತ್ತದೆ ಮತ್ತು ಒಳ್ಳೆಯ ಹೊಳಪನ್ನೂ ಹೊಂದಿರುತ್ತದೆ. ಅವುಗಳಿಂದ ಕೇವಲ ರೊಟ್ಟಿಯಲ್ಲ ಪೂರಿ ಕೂಡಾ ಮಾಡಬಹುದು. ನಾನು ಅಂಗೂರಿಯ ಮುಖ, ಅವಳ ಎದೆ ಅವಳ ತೋಳುಗಳನ್ನು ನೋಡಿದೆ. ಅವಳ ಮೈ ಬಿಗಿಯಾಗಿತ್ತು. ನಾನು ಅವಳ ಗಂಡ ಪರ್ಭತಿಯನ್ನೂ ನೋಡಿದ್ದೆ.. ಅವನು ಕಳ್ಳಗೆ ಪೇಲವವಾಗಿದ್ದ. ಅವನಿಗೆ ಯಾವ ರೀತಿಯಲ್ಲೂ ನಾದಿದ ಹದವಾದ ಹಿಟ್ಟನ್ನು ತಿನ್ನುವ ಯೋಗ್ಯತೆಯಿರಲಿಲ್ಲ... ಮೈಯನ್ನು ಹಿಟ್ಟಿಗೆ ಹೋಲಿಸಿದ ನನ್ನ ಕುರಿತು ನನಗೇ ನಗು ಬಂದಿತು.
ನಾನು ಅವಳ ಹಳ್ಳಿಯ ಬಗ್ಗೆ ಕೇಳುತ್ತಿದ್ದೆ. ಅವಳ ಹೆತ್ತವರು, ಅವಳ ಸಹೋದರರು ಮತ್ತು ಸಹೋದರಿಯರು ಮತ್ತು ಹಸಿರು ಗದ್ದೆಗಳ ಬಗ್ಗೆ ಮಾತನಾಡುತ್ತಾ, ನಾನು ಒಂದು ದಿನ ಅವಳನ್ನು ಕೇಳಿದೆ:
ಅಂಗೂರಿ, ನಿಮ್ಮ ಹಳ್ಳಿಯಲ್ಲಿ ಮದುವೆ ಹೇಗಿರುತ್ತೆ?”
ಹುಡ್ಗಿ ಚಿಕ್ಕೋಳಿರೋವಾಗ, ಅಂದ್ರೆ ಒಂದೈದ್ ವರ್ಷ ಇರೋವಾಗ ಅವ್ಳು ಒಬ್ರ ಕಾಲಿಗೆ ಪೂಜೆ ಮಾಡ್ತಾಳೆ ”
“ಪೂಜೆ ಅಂದ್ರೆ? ಹೇಗೆ ಮಾಡ್ತಾರೆ ಪೂಜೆ?”
“ಮ್…,ಅಂದ್ರೆ ಅವ್ಳು ಮಾಡೋದಿಲ್ಲ ಅವಳ ಅಪ್ಪ ಮಾಡ್ತಾರೆ. ಒಂದ್ ತಟ್ಟೆ ತುಂಬಾ ಹೂ ಮತ್ತೆ ಸ್ವಲ‍್ಪ ಹಣ ತಗೊಂಡು ಮದುವೆಯಾಗುವವನ ಮುಂದೆ ಇಡ್ತಾರೆ”
“ಅಂದ್ರೆ ಅಪ್ಪ ಪೂಜೆ ಮಾಡ್ತಾನೆ ಅಂತಾಯ್ತು, ಇಲ್ಲಿ ಹೇಗೆ ಮಗಳು ಪೂಜೆ ಮಾಡಿದ ಹಾಗಾಯ್ತು?
“ಅದು, ಅಪ್ಪ ಮಗಳ ಪರವಾಗಿ ಮಾಡ್ತಾರೆ, ಅವ್ಳು ಚಿಕ್ಕವಳಲ್ವ ಅದ್ಕೆ”
“ಆದ್ರೆ ಹುಡುಗಿ ಹುಡುಗನ್ನ ನೋಡಿರೋದಿಲ್ವಲ್ಲ?”
“ಹುಡುಗಿ ಗಂಡನ್ನ ನೋಡಿರೋದಿಲ್ಲ”
“ತಾನು ಮದುವೆಯಾಗೋ ಹುಡುಗನನ್ನ ಹುಡುಗಿ ನೋಡೋದಿಲ್ವ?!
“ಇಲ್ಲ”
“ಯಾವ ಹುಡುಗಿಯೂ ನೋಡೋದಿಲ್ವ?”
“ಇಲ್ಲ,” ನಂತರ ಒಂದಿಷ್ಟು ಯೋಚಿಸಿ ಅಂಗೂರಿ “ಪ್ರೀತಿ ಮಾಡ್ತಿರೋ ಹುಡುಗಿಯರು ನೋಡ್ತಾರೆ”
“ನಿಮ್ಮ ಹಳ್ಳಿಯಲ್ಲಿ ಲವ್ ಮಾಡ್ತಾರ?”
“ಎಲ್ಲೋ ಕೆಲವರು..”
“ಹುಡುಗಿ ಲವ್ ಮಾಡೋದು ಪಾಪ ಅಲ್ವಾ?”
“ಹೌದು ಪಾಪನೇ, ಹೇಳ್ಬೇಕಂದ್ರೆ ತುಂಬಾ ದೊಡ್ ಪಾಪ”
“ಮತ್ತೆ ಯಾಕೆ  ಪಾಪ ಮಾಡ್ತಾರೆ?”
“ಮ್.. ಅದು ಯಾಕಂದ್ರೆ.. ಗಂಡಸು ಹುಡುಗಿಗೆ ಏನೋ ತಿನ್ನಿಸ್ತಾನೆ, ಆಮೇಲೆ ಅವ್ಳು ಅವ್ನನ್ನ ಇಷ್ಟಪಡೋಕ್ಕೆ ಶುರುಮಾಡ್ತಾಳೆ..”
“ಏನ್ ತಿನ್ನಿಸ್ತಾನೆ ಅವ್ನು?
“ಅದೊಂದು ಕಾಡು ಹೂವ. ಅದನ್ನ ಅವ್ನು ಸಿಹಿ ತಿಂಡಿ ಇಲ್ಲಾಂದ್ರೆ ಎಲೆಯಡಿಕೆಯೊಳಗೆ ಗೊತ್ತಾಗದ ಹಾಗೆ ಇಟ್ಟು ಅವ್ಳು ಅದನ್ನ ತಿನ್ನೋ ಹಾಗೆ ಮಾಡ್ತಾನೆ. ಅಷ್ಟೇ.. ಅವ್ಳು ಅವನನ್ನ ಪ್ರೀತ್ಸೋಕೆ ಶುರು ಮಾಡ್ತಾಳೆ. ಅವನನ್ನ ಮಾತ್ರ ಇಷ್ಟ ಪಡ್ತಾಳೆ ಈ ಪ್ರಪಂಚದ ಎಲ್ಲದಕ್ಕಿಂತ ಹೆಚ್ಚು ಅವನನ್ನ ಇಷ್ಟಪಡ್ತಾಳೆ”
“ಹೌದಾ?! ನಿಜಾನ?”
“ಹೌದು, ನಂಗೇ ಗೊತ್ತು, ನಾನೇ ಕಣ್ಣಾರೆ ಕಂಡಿದ್ದೀನಿ.”
“ಏನ್ ನೋಡಿದ್ದೀಯಾ ನೀನು?”
“ನನಗೊಬ್ಳು ಗೆಳತಿಯಿದ್ಲು, ನಂಗಿಂತ ಸ್ವಲ್ಪ ದೊಡ್ಡೋಳು”
“ಆಮೇಲೆ?”
“ಆಮೇಲೇನು? ಅವ್ಳು ಅವ್ನ್ ಮೇಲೆ ಮನ್ಸಾಗಿ ಅವ್ನ್ ಜೊತೆ ಸಿಟಿಗೆ ಓಡಿ ಹೋದ್ಲು.”
“ನಿನ್ನ ಗೆಳತಿಗೆ ಕಾಡು ಹೂವ ತಿನ್ಸಿದ್ದಾರೆ ಅಂತ ಹೇಗೆ ಗೊತ್ತು ನಿನಗೆ.”
“ಅವ್ನು ಆ ಹೂವನ್ನ ಬರ್ಫಿ ಒಳಗೆ ಇಟ್ಟು ಕೊಟ್ಟಿದ್ದ. ಮತ್ತಲ್ದೆ ಇನ್ನೇನು? ಇಲ್ದೆ ಹೋಗಿದ್ರೆ ಅವಳು ಖಂಡಿತ ಅವ್ಳ ಅಪ್ಪ, ಅಮ್ಮನನ್ನ ಬಿಟ್ಟು ಹೋಗ್ತಿರ್ಲಿಲ್ಲ… ಅವ್ನು ಅವ್ಳಿಗೋಸ್ಕರ ಸಿಟಿಯಿಂದ ಏನೇನೆಲ್ಲ ತರೋನು. ಸೀರೆ, ಗಾಜಿನ ಬಳೆ, ಕತ್ತಿನ ಸರ ಎಲ್ಲ ತಂದ್ಕೊಡೋನು.”
“ಆದ್ರೆ ಅವೆಲ್ಲ ಉಡುಗೊರೆ ಅಷ್ಟೇ ಅಲ್ವಾ? ಅದು ನಿಂಗೆ ಹೇಗ್ ಗೊತ್ತು ಅವ್ನು ಕಾಡು ಹೂ ತಿನ್ನಿಸಿದ್ದಾನೆ ಅಂತ?”
“ಅವ್ನು ತಿನ್ಸಿರ್ಲಿಲ್ಲ ಅಂದಿದ್ರೆ ಅವ್ಳ್ಯಾಕೆ ಅವ್ನ ಹಿಂದೆ ಹೋಗಿರೋಳು?”
“ಒಬ್ಬರ ಮೇಲೆ ಯಾವ ಕಾರಣ ಇಲ್ಲದೆ ಕೂಡಾ ಪ್ರೀತಿಯಾಗುತ್ತೆ”
“ಇಲ್ಲ ಹಾಗೆಲ್ಲ ಸುಮ್ಸುಮ್ನೆ ಒಬ್ಬರನ್ನಇಷ್ಟಪಡೋದಕ್ಕೆ ಸಾಧ್ಯ ಇಲ್ಲ,  ಹಾಗೆ ಇಷ್ಟಪಟ್ರೆ ಅಪ್ಪ ಅಮ್ಮಂಗೆ ನೋವಾಗತ್ತೆ”
“ನೀನು ಆ ಕಾಡು ಹೂ ನೋಡಿದ್ದೀಯಾ?”
“ಇಲ್ಲ, ಯಾವತ್ತೂ ನೋಡಿಲ್ಲ. ಅದನ್ನ ತುಂಬಾ ದೂರದಿಂದ ತರ್ಬೇಕು. ಆಮೇಲೆ ಅದನ್ನ ಸಿಹಿತಿಂಡಿ ಅಥವಾ ಎಲೆಯಡಿಕೆ ಮಧ್ಯ ಬಚ್ಚಿಡ್ಬೇಕು. ನಾನು ಚಿಕ್ಕೋಳಿರ್ಬೇಕಾದ್ರೆ ಅಮ್ಮ ಯಾವ ಗಂಡಸಿನ ಹತ್ರಾನೂ ಸಿಹಿತಿಂಡಿ ತಗೊಬೇಡ ಅಂತ ಎಚ್ಚರಿಕೆ ಕೊಟ್ಟಿದ್ಲು..”
“ನೀನು ಯಾವ್ದೇ ಮುದುಕರಿಂದ ಸಿಹಿ ತಿನ್ನದೆ ಒಳ್ಳೇ ಕೆಲಸ ಮಾಡಿದೆ. ಆದರೆ ನಿನ್ನ ಗೆಳತಿ ಯಾಕೆ ಹಾಗೆ ಮಾಡಿದ್ಲು?”
“ಅವಳು ತನ್ನ ಪಾಪಕ್ಕೆ ತಕ್ಕ ಸುಂಕ ಕಟ್ಟಲೇಬೇಕು” ಹೀಗೆ ಹೇಳಿದ ಅಂಗೂರಿ ಮತ್ತೆ ತನ್ನ ಗೆಳತಿಯ ಕುರಿತಾದ ಕಕ್ಕುಲಾತಿ ಎಚ್ಚರಗೊಂಡು ಅವಳ ಕುರಿತು ಸಹಾನುಭೂತಿ ಹೊಂದಿದಳು. ಬೇಸರದ ಭಾವದಲ್ಲಿ “ಅವಳು ಒಂತರಾ ಹುಚ್ಚಿ ಆಗಿದ್ಲು ಅವನ ಬಗ್ಗೆ, ಪಾಪದ ಹುಡುಗಿ, ತಲೆ ಬಾಚ್ತಿರ್ಲಿಲ್ಲ ಮಧ್ಯ ರಾತ್ರಿ ಎದ್ದು ಕುಳಿತು ಹಾಡೋದಕ್ಕೆ ಶುರು ಮಾಡೋಳು.”
“ಏನ್ ಹಾಡ್ತಿದ್ಲು?”
“ನಂಗೊತ್ತಿಲ್ಲ, ಈ ಕಾಡು ಹೂವಾನ ಯಾರು ರುಚಿ ನೋಡ್ತಾರೋ ಅವರು ರಾತ್ರಿ ಹೊತ್ತು ಸಿಕ್ಕಾಪಟ್ಟೆ ಹಾಡು ಹೇಳ್ತಾರೆ, ಜೊತೆಗೆ ತುಂಬಾ ಅಳ್ತಾರೆ ಕೂಡಾ.”
ನಿರೂಪಣೆ ಹಾಡಿನಿಂದ ಅಳುವುದರ ಕಡೆಗೆ ಹೊರಳಿದ್ದರಿಂದ ನಾನು ಮತ್ತೆ  ಅವಳನ್ನು ಪ್ರಶ್ನಿಸಲು ಹೋಗಲಿಲ್ಲ.
ಇದೆಲ್ಲ ನಡೆದು ಕೆಲವೇ ಕೆಲವು ದಿನಗಳ ಕೆಲವು ಬದಲಾವಣೆಗಳಾದವು. ಒಂದು ದಿನ ಅವಳು ಬಂದು ಬಹಳ ಬೇಸರದ ಮುಖಭಾವ ಹೊತ್ತು ಬೇವಿನ ಮರದ ಬಳಿ ಕುಳಿತಿದ್ದ ನನ್ನ ಪಕ್ಕದಲ್ಲಿ ಬಂದು ಕುಳಿತಳು. ಮೊದಲೆಲ್ಲ ಅವಳ ಕಾಲಿನ ಗೆಜ್ಜೆಯ ಸದ್ದು ಅವಳು ಬರುವ ಮೊದಲೇ ಅವಳ ಬರುವಿಕೆಯನ್ನು ಹಲವು ಮಾರು ದೂರದಿಂದಲೇ ತಿಳಿಸುತ್ತಿದ್ದವು. ಆದರೆ ಇಂದು ಅಲ್ಲಿ ಮೌನವಿತ್ತು. ನಾನು ಪುಸ್ತಕದಿಂದ ತಲೆಯೆತ್ತಿ ಅವಳನ್ನ ಕೇಳಿದೆ “ಏನಾಯ್ತು ಅಂಗೂರಿ?”
“ನಂಗೆ ನನ್ನ ಹೆಸರು ಬರೆಯೋದು ಹೆಂಗಂತ ಹೇಳ್ಕೊಡಿ”
“ಯಾರಿಗಾದರೂ ಕಾಗದ ಬರೆಯೋದಿದೆಯಾ?”
ಅಂಗೂರಿ ಉತ್ತರಿಸಲಿಲ್ಲ. ಅವಳ ಕಣ್ಣುಗಳು ನಿರ್ಭಾವುಕವಾಗಿದ್ದವು.
ಆಗ ಮಧ್ಯಾಹ್ನದ ಸಮಯವಾಗಿತ್ತು ನಾನು ಅಂಗೂರಿಯನ್ನು ಅಲ್ಲೇ ಬಿಟ್ಟು ಮನೆಗೆ ಹೋದೆ. ನಾನು ಮತ್ತೆ ಸಂಜೆ ಅಲ್ಲಿ ಹೋದಾಗ ಅಂಗೂರಿ ಅಲ್ಲೇ ಮರದ ಕೆಳಗೆ ಕುಳಿತಿದ್ದಳು. ಅವಳು ಮುದುಡಿ ಕುಳಿತಿದ್ದಳು. ಸಂಜೆಗಾಳಿಯಲ್ಲಿ ತಂಪು ದೇಹಕ್ಕೆ ಮೃದುವಾದ ಕಂಪನದ ಅನುಭವ ನೀಡುತ್ತಿದ್ದವು.”
ನಾನು ಅವಳ ಹಿಂದೆ ನಿಂತಿದ್ದೆ. ಅವಳ ತುಟಿಗಳು ಹಾಡೊಂದನ್ನು ಗುನುಗುತ್ತಿತ್ತು. ಅದೊಂದು ದೀರ್ಘ ಬಿಕ್ಕುವಿಕೆಯಂತೆ ಕೇಳಿಸುತ್ತಿತ್ತು.
“ಮೇರೆ ಮುಂದ್ರಿಮೇ ಲಾಗೋ ನಾಗಿನ್ವ
ಹೋ ಬಾಯಿರಿ ಕೈಸೆ ಕಟೂಂ ಜೋಬನ್ವಾ”
(“ನನ್ನ ಉಂಗುರವನ್ನು ಕಲ್ಲಿನಿಂದ ಕೂರಿಸಲಾಗಿದೆ, ಶಾಪಗ್ರಸ್ತವಾಗಿದೆ, ನನ್ನ ಯೌವನ  ಏನಾಗಲಿದೆ?”)
ಅಂಗೂರಿ ನನ್ನ ಹೆಜ್ಜೆ ಸಪ್ಪಳ ಕೇಳಿ ತಿರುಗಿ ನೋಡಿ ಅವಳ ಹಾಡನ್ನು ತುಟಿಗಳಲ್ಲಿ ಬಚ್ಚಿಟ್ಟುಕೊಂಡಳು. “ನೀನು ತುಂಬಾ ಚೆನ್ನಾಗಿ ಹಾಡ್ತೀಯ ಅಂಗೂರಿ”
ಅಂಗೂರಿ ಬಹಳ ಶ್ರಮ ಹಾಕಿ ತನ್ನ ಅಳುವನ್ನು ನುಂಗಿಕೊಂಡು ತುಟಿಯಲ್ಲಿ ಬಲವಂತದ ನಗು ತಂದುಕೊಂಡು “ನನಗೆ ಹಾಡಲು ಬರೋದಿಲ್ಲ”
“ನಿನಗೆ ಗೊತ್ತು..”
“ಇದು ಏನೂ ಅಲ್ಲ..”
“ನಿನ್ನ ಸ್ನೇಹಿತೆ ಹಾಡ್ತಿದ್ಲಾ?”
“ಈ ಹಾಡು ನಾನು ಅವಳಿಂದಲೇ ಕಲಿತಿದ್ದು.”
“ಹಾಗಿದ್ರೆ ನನಗಾಗಿ ಒಮ್ಮೆ ಹಾಡು”
ಓಹ್, ಅದು ಕೇವಲ ಕಾಲದ ಲೆಕ್ಕ ಮಾತ್ರ, ನಾಲ್ಕು ತಿಂಗಳು ಚಳಿ, ನಾಲ್ಕು ತಿಂಗಳು ಬಿಸಿಲು ಮತ್ತೆ ನಾಲ್ಕು ತಿಂಗಳು ಮಳೆ..” “ಅಲ್ಲ, ಹೀಗಲ್ಲ. ನೀನು ಹಾಡೊಲ್ಲ ಯಾಕೆ?” ಅಂಗೂರಿ ವರ್ಷದ ಎಲ್ಲ ತಿಂಗಳುಗಳೂ ಬಂದವೇ ಎಂದು ಲೆಕ್ಕ ಹಾಕುತ್ತಿದ್ದಳೆಂದು ಎನ್ನಿಸಿತು.
“ಚಾರ್ ಮಹಿನೇ ರಾಜಾ ಥಂಡೀ ಹೋವತ್ ಹೈ
ಥಾರ್ ಥಾರ್ ಕಾಂಪೆ ಕರೆಜ್ವ
ಚಾರ್ ಮಹಿನೇ ರಾಜಾ ಬರ್ಖಾ ಹೋವತ್ ಹೈ
ಥಾರ್ ಥಾರ್ ಕಾಂಪೆ ಬದರವಾ.”
“ಅಂಗೂರಿ!”
ಅಂಗೂರಿ ನನ್ನತ್ತ ಖಾಲಿ ಕಣ್ಣುಗಳಿಂದ ನೋಡಿದಳು. ಅವಳ ಹೆಗಲ ಮೇಲೆ ಕೈ ಹಾಕಿ ಸಂತೈಸಿ “ ನೀನೂ ಕಾಡು ಹೂವಿನ ರುಚಿಯನ್ನು ನೋಡಿದೆಯಾ?” ಕೇಳಬೇಕೆನಿಸುತ್ತಿತ್ತು. ಅವಳ ಹೆಗಲ ಮೇಲೆ ಕೈಯಿರಿಸಿ ಕೇಳಿದೆ ”ಏನಾದರೂ ತಿಂದಿದ್ದೀಯಾ?”
“ಊಟನಾ?” ಅಂಗೂರಿ ವಿಚಿತ್ರವಾಗಿ ಕೇಳಿದಳು. ಅವಳ ದೇಹ ನಡುಗುತ್ತಿರುವುದು ನನ್ನ ಕೈಗಳಲ್ಲಿದ್ದ ಅವಳ ಅಂಗೈಯಿಂದ ತಿಳಿಯುತ್ತಿತ್ತು. ಅವಳು ಈಗಷ್ಟೇ ಹಾಡಿ ಮುಗಿಸಿದ ಋತುಮಾನದ ಹಾಡು ಅವಳ ಮೈಯಲ್ಲಿ ಸೇರಿ ಅವಳ ದೇಹದೊಳಗೆ ಮಳೆಯಾಗಿ, ಚಳಿಯಾಗಿ ಮತ್ತೆ ಬಿಸಿಲಾಗಿ ಅವಳ ದೇಹವನ್ನು ನಡುಗಿಸುತ್ತಿತ್ತು.
ಅಂಗೂರಿ ಅವಳ ಪಾಲಿನ ಅಡುಗೆಯನ್ನು ಅವಳೇ ಬೇಯಿಸಿಕೊಳ್ಳುತ್ತಾಳೆಂದು ನನಗೆ ತಿಳಿದಿತ್ತು. ಪರ್ಭತಿ ಮಾತ್ರ ತನ್ನ ಮಾಲಿಕರ ಮನೆಯಲ್ಲಿ ಉಣ್ಣುತ್ತಿದ್ದ. ನಾನು ಅವಳನ್ನು ಮತ್ತೆ ಕೇಳಿದೆ
“ಇವತ್ತು ಏನೂ ಅಡುಗೆ ಮಾಡಿಲ್ವಾ?”
“ಇಲ್ಲ ಇನ್ನೂ ಮಾಡಿಲ್ಲ”
“ಟೀ ಕುಡಿದ್ಯಾ ನೀನು? ಬೆಳಿಗ್ಗೆಯಿಂದ ಏನೂ ಬೇಯಿಸಲಿಲ್ವಾ?
“ಟೀ? ಇವತ್ತು ಹಾಲಿಲ್ಲ”
“ಯಾಕೆ?
“ನಾನು ಹಾಲು ಖರೀದಿ ಮಾಡೋದಿಲ್ಲ”
“ಹಾಗಿದ್ರೆ ನೀನು ದಿನಾಲೂ ಟೀ ಕುಡಿಯಲ್ವ?”
“ಕುಡಿತೀನಿ”
“ಮತ್ತೆ ಇವತ್ತೇನಾಯ್ತು?”
“ಆ ರಾಮ್ ತಾರಾ ಹಾಲು ತಗೊಂಡ್ ಬರ್ತಿದ್ದ”
ರಾಮ್‍ ತಾರಾ ನಮ್ಮ ಕಾಲೋನಿಯ ಕಾವಲುದಾರನಾಗಿದ್ದನು.ನಾವೆಲ್ಲರೂ ಸೇರಿ ಅವನ ಸಂಬಳವನ್ನು ಕೊಡುತ್ತೇವೆ.ಅವನು ಇಡೀ ರಾತ್ರಿ ಕಾಲೋನಿಯ ತುಂಬಾ ಓಡಾಡಿ ಬೆಳಗಿನ ಹೊತ್ತಿಗೆ ಸಾಕಷ್ಟು ದಣಿದಿರುತ್ತಿದ್ದ. ಈಗ ನಾನು ನೆನಪು ಮಾಡಿಕೊಂಡೆ, ಅಂಗೂರಿ ಇಲ್ಲಿಗೆ ಬರುವ ಮೊದಲು ರಾಮ್ ತಾರಾ ಯಾವುದಾದರೂ ಒಂದು ಮನೆಯಲ್ಲಿ ಚಹಾ ಕುಡಿಯುತ್ತಿದ್ದ. ಅಂಗೂರಿ ಬಂದ ನಂತರ ಅವನು ಹಾಲಿನವನಿಂದ ಒಂದಿಷ್ಟು ಹಾಲು ಖರೀದಿಸುತ್ತಿದ್ದ. ಅಂಗೂರಿ ಅದರಿಂದ ಚಹಾ ತಯಾರಿಸುತ್ತಿದ್ದಳು. ಪರ್ಭತಿ ಮತ್ತು ರಾಮ್ ತಾರಾ ಒಟ್ಟಿಗೆ ಕುಳಿತು ಚಹಾ ಹೀರುತ್ತಿದ್ದರು.
ಈಗ ನನಗೆ ಇನ್ನೊಂದು ವಿಷಯ ಗಮನಕ್ಕೆ ಬಂತು. ಅದು ಮೂರ್ನಾಲ್ಕು ದಿನಗಳಿಂದ ರಾಮ್‍ತಾರಾ ಕಾಣುತ್ತಿರಲಿಲ್ಲ. ಅವನು ರಜೆಯ ಮೇಲೆ ಊರಿಗೆ ಹೋಗಿದ್ದ.
ನೋವಿನಿಂದ ಕೂಡಿದ ನಗುವೊಂದು ನನ್ನ ತುಟಿಯ ಮೇಲೆ ಮೂಡಿತು “ಅಂಗೂರಿ! ಅಂದ್ರೆ ನೀನು ಮೂರು ದಿನಗಳಿಂದ ಚಹಾ ಕುಡಿದಿಲ್ಲ ಅಲ್ವಾ?” ಅವಳು ಮಾತಾಡಲಿಲ್ಲ. ಮೆಲ್ಲಗೆ ತಲೆಯಾಡಿಸಿದಳು.
“ಏನಾದರೂ ತಿಂದಿದ್ದೀಯಾ?” ಅವಳಿಗೆ ಮತ್ತೆ ಮಾತನಾಡಲು ಸಾಧ್ಯವಾಗಲಿಲ್ಲ. ಅವಳ ಮೌನ ಸಹಜವಾದುದಾಗಿತ್ತು
ನಾನು ರಾಮ್‍ತಾರಾನನ್ನು ಇನ್ನೊಮ್ಮೆ ನೆನೆಸೊಕೊಂಡೆ ಆತ ಉತ್ತಮ ಗುಣವಂತ, ಮೃದು ಸ್ವಭಾವದಿಂದ ಕೂಡಿದ ನಾಚಿಕೆಯ ನಗುವನ್ನು ಹೊಂದಿದ್ದ ಸುಂದರನಾಗಿದ್ದ. ತುಂಬಾ ಚೆನ್ನಾಗಿ ಮಾತನಾಡುತ್ತಿದ್ದ ಕೂಡಾ.
“ಅಂಗೂರಿ”
“ಹೇಳಿ”
“ನೀನೂ ಕಾಡು ಹೂವನ್ನು ತಿಂದೆಯಾ?!”
ಅವಳ ಕಣ್ಣುಗಳಿಂದ ಧಾರಾಕಾರ ನೀರು ಸುರಿಯಲಾರಂಭಿಸಿತು. ಅವಳ ಕೆನ್ನೆ ತೋಯಿಸಿದ ಕಣ್ಣೀರು ನಂತರ ತುಟಿಯನ್ನು ಸೋಕಿತು. ಅವಳ ಬಾಯಿಯಿಂದ ಹೊರಟ ಮಾತೂ ಒದ್ದೆ ಒದ್ದೆಯಾಗಿತ್ತು. “ನಾನು ಪ್ರಮಾಣವಾಗಿ ಹೇಳ್ತೀನಿ ಅವನ ಕೈಯಿಂದ ಯಾವತ್ತೂ ಬೀಡಾ ಅಥವಾ ಸಿಹಿತಿಂಡಿ ತಗೊಂಡಿಲ್ಲ… ಟೀ ಮಾತ್ರ ಕುಡಿದಿರೋದು… ಟೀಯಲ್ಲಿ ಅದನ್ನ ಹಾಕಿ ಕೊಟ್ಟಿರಬಹುದಾ..?” ಅಂಗೂರಿಗೆ ಮುಂದಕ್ಕೆ ಮಾತನಾಡಲು ಸಾಧ್ಯವಾಗಲಿಲ್ಲ. ಅವಳ ಮಾತುಗಳು ಕಣ್ಣೀರಿನಲ್ಲಿ ಮುಳುಗಿಹೋಗಿದ್ದವು.
ಮೂಲ – ಆಮೃತಾ ಪ್ರೀತಮ್.
ಪಂಜಾಬಿಯಿಂದ ಹಿಂದಿಗೆ: ನಿರುಪಮಾ ದತ್
ಕನ್ನಡಕ್ಕೆ: ಶಂಕರ ಎನ್ ಕೆಂಚನೂರು

ಶನಿವಾರ, ಸೆಪ್ಟೆಂಬರ್ 20, 2014

ಉಂಗುರ ಕಳೆದುಹೋಗಿದೆ;
ಅವಳು ನೆಮ್ಮದಿಯಲ್ಲಿದ್ದಾಳೆ.
ಮರೆವ ವರ ಸಿಗದ ಇವನು
ಕಂಗಾಲಾಗಿ ಅಲೆಯುತ್ತಿದ್ದಾನೆ
-ಕೆಂಚನೂರಿನವ
ಚಳಿಯ ದಿನಗಳು,
ಕಾಲ ಕೆಳಗಿನ
ಗರಿಕೆ
ಹಳದಿಯಾಗುತ್ತಿದೆ;
ಎಲ್ಲ ಕಾಲಕ್ಕೂ 
ಹಸಿರಾಗಿರಲು
ಅದೇನು ನಿನ್ನ ನೆನಪೆ ?
-ಕೆಂಚನೂರಿನವ
ನಿನ್ನ ಸನಿಹವಿಲ್ಲದ
ಚಳಿಯ ದಿನಗಳ
ಧೀರ್ಘ ರಾತ್ರಿ
ಎದೆಯೇ ಕರಗಿ ಹನಿದ ಹಾಗೆ
ಹೊರಗೆ 
ಇಬ್ಬನಿ ಬೀಳುವ ಸದ್ದು
-ಕೆಂಚನೂರು
ನಿರಾಶ್ರಿತನ ಅಳಲು
ಈ ಕಡಲ ದಂಡೆಯ ಮೇಲೆ
ನೀರು ಕಾಗೆಯೊಂದರ ಆಕ್ರಂದನ
ನನ್ನ ಎದೆಯಲ್ಲಿ 
ತರಂಗಗಳನ್ನೆಬ್ಬಿಸುತ್ತಿದೆ
ಮನೆಯ ನೆನಪು
ಯಾಕಿಷ್ಟು ಯಾತನಾಮಯ ?
-ಕೆಂಚನೂರಿನವ
ಬೇಸಿಗೆಯ ನೀರಸ ಮಧ್ಯಾಹ್ನ
ಖಾಲಿ ಮೈದಾನದಲ್ಲಿ
ಗಾಳಿ ಒಯ್ದೆಡೆ ಹಾಯುವ
ಹೂವಿನೆಸಳಿನಂತೆ
ಅವನಿಲ್ಲದ 
ಖಾಲಿ - ಖಾಲಿ ಹಾಸಿಗೆಯಲ್ಲಿ
ಹೊರಳುವ ಇವಳು


-ಕೆಂಚನೂರಿನವ
ಗಾಳಿಗುಂಟ ಹಾರಿ ಹೊರಟ
ರೆಕ್ಕೆ ತೊರೆದ ಹಕ್ಕಿ ಗರಿಯು ನಾನು
ಗಮನವಷ್ಟೇ ನನ್ನದು
ಗಮ್ಯ ನನಗೆ ತಿಳಿಯದು
ಹಿಂಬಾಲಿಸದಿರು ನೀ
ದಾರಿಗುಂಟ ಬರಿದೆ ಅಲೆವ
ನೆರಳು ಕಂಡರಲ್ಲೇ ನಿಲುವ
ತಿರಿದು ತಿನುವ ತಿರುಕ ನಾನು
ಬರಿದೆ ಕನಸು ಕಟ್ಟದಿರು ನೀನು
ಕಡಲ ತುಂಬಾ ನಿಲ್ಲದಲೆವ
ಯಾರೋ ಗುರಿಯಿರಿದೆ ತೇಲಿಬಿಟ್ಟ
ಹಾಯಿದೋಣಿ ನಾನು
ನಂಬಿ ಕುಳಿತು ಪರಿತಪಿಸಬೇಡ


-ಕೆಂಚನೂರಿನವ